ಬೀದರ್
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಒಂದೆಡೆ ಬಿರು ಬಿಸಿಲು, ಧಗೆ, ಸೆಕೆಯಿಂದ ಬಸವಳಿದಿದ್ದ ಜನತೆಗೆ ವರುಣ ತಂಪೆರೆದಿದ್ದರೆ, ಮತ್ತೊಂದೆಡೆ ಮೊದಲ ಮಳೆಗೆ ಸಾಲು ಸಾಲು ಅನಾಹುತಗಳು ಸಂಭವಿಸುತ್ತಿದೆ. ರಾಜ್ಯದಲ್ಲಿ ಆರಂಭದಲ್ಲೇ ಗುಡುಗು ಸಹಿತ ಮಳೆಯಾಗುತ್ತಿದೆ.
ಬೀದರ್ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು ಸಿಡಿಲು ಸಹಿತ ಭರ್ಜರಿ ಮಳೆಯಾಗಿದೆ. ವರುಣನ ಅಬ್ಬರದ ಜೋರಾಗಿದ್ದು, ಸಿಡಿಲು ಬಡಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೀದರ್‌ನ ಹುಮನಾಬಾದ್ ತಾಲೂಕಿನ ಧುಮ್ಮನಸೂರ ಹೊರ ವಲಯದಲ್ಲಿ ನಡೆದಿದೆ. ಚಿಟಗುಪ್ಪ ತಾಲೂಕು ಬೆಳಕೇರಾ ಗ್ರಾಮದ ನಿವಾಸಿ ಚಂದ್ರಕಾಂತ ಬಸವರಾಜ ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮೃತ ಚಂದ್ರಕಾಂತ ಬಸವರಾಜ ಧುಮ್ಮನಸೂರ ಹೊರ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ಬಡಾವಣೆಯಲ್ಲಿ ಗಾರೆ ಕೆಲಸ ಮಾಡುತ್ತಿದ್ದರು, ನಿನ್ನೆ ಸಂಜೆ ಏಕಾಏಕಿ ಮಳೆ ಆರಂಭವಾಗಿದ್ದು, ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಈ ವೇಳೆ ಏಕಾಏಕಿ ಸಿಡಿಲು ಬಡಿದು ಚಂದ್ರಕಾಂತ ಬಸವರಾಜ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಕೂಡ ಕರ್ನಾಟಕ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ