ಬೆಂಗಳೂರು:
ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ-ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದ್ದ ಐದು ಮಂದಿ ದರೋಡೆಕೋರರನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ 11.30 ಲಕ್ಷ ನಗದು ಹಾಗೂ 6 ಲಕ್ಷ ಬೆಲೆಯ 7 ಮೊಬೈಲ್ ಗಳು, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ದೊಡ್ಡ ಮಾವಳ್ಳಿಯ ಬಿ ಉಮ್ಮರ್ ಅಹಮ್ಮದ್ (25), ಆರ್‌ಟಿ ನಗರದ ಎನ್ ಶಜ್ಜದ್ ಪಾಷಾ (23), ಎಂ ಮಹಮ್ಮದ್ ಮೊಯೀಜ್ (25), ಯಾಸೀನ್ ಅಹಮದ್ ಷರೀಫ್(19), ಶೋಯೆಬ್ ಪಾಷ(20) ಬಂಧಿತ ದರೋಡೆಕೋರರು. ಸಿದಯ್ಯ ರಸ್ತೆಯಲ್ಲಿನ ಸಿಟಿ ಯೂನಿಯನ್ ಬ್ಯಾಂಕ್ ಕಟ್ಟಡದ 4ನೇ ಮಹಡಿಯಲ್ಲಿ ರಾಮ್ ಪ್ರಸಾದ್ ಪಂಡಿತ್ ಎಂಬುವರು ರೂಮ್ ಮಾಡಿಕೊಂಡು ವಾಸವಿದ್ದರು. ಇವರು ವಾಹನ ಬಿಡಿ ಭಾಗಗಳ ಅಂಗಡಿಯೊಂದರ ನೌಕರರಾಗಿದ್ದು ಮಾಲೀಕರು 15 ಲಕ್ಷ ಹಣವನ್ನು ಬ್ಯಾಂಕ್ ಗೆ ಕಟ್ಟಲು ಇವರಿಗೆ ನೀಡಿದ್ದರಿಂದ ಹಣವನ್ನು ತಂದು ಮನೆಯಲ್ಲಿಟ್ಟಿದ್ದರು.
ನ.19ರಂದು ಬೆಳಗಿನಜಾವ 4 ಗಂಟೆ ಸಮಯದಲ್ಲಿ ದರೋಡೆಕೋರರು ಇವರ ರೂಮ್ಗೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ 15 ಲಕ್ಷ ನಗದು ಹಾಗೂ 2 ಮೊಬೈಲ್ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ರಾಮ್ ಪ್ರಸಾದ್ ಪಂಡಿತ್ ಅವರು ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ದರೋಡೆಕೋರರ ಬಗ್ಗೆ ಹಲವು ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಐದು ಮಂದಿಯನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸಜ್ಜದ್ ಪಾಷಾ ವಿರುದ್ಧ ಮತ್ತೊಂದು ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. ಉಮ್ಮರ್ ಮತ್ತು ಮೊಹಮ್ಮದ್ ಬಿಡಿಭಾಗಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಇನ್ನಿಬ್ಬರು ನಿರುದ್ಯೋಗಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.