ಹಾಸನ
ಹಾಸನದ ಹಾಸನಾಂಬ ದೇಗುಲದಲ್ಲಿ ದೇವಿಯ ದರ್ಶನಕ್ಕೆ ಇನ್ನು ಕೆಲವೇ ದಿನಗಳು ಅವಕಾಶವಿದ್ದು, ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ದೇಗುಲಕ್ಕೆ ಬರುತ್ತಿದ್ದಾರೆ. ಗುರುವಾರ ಸಹ ಭಾರೀ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ನಿಯಂತ್ರಣ ಮಾಡಲಾಗದೆ ಸಿಬ್ಬಂದಿ ಪರದಾಡುವಂತಾಯಿತು. ಹೀಗಾಗಿ 1000 ರೂ. ಮೊತ್ತ ನೇರ ದರ್ಶನದ ಟಿಕೆಟ್ ವಿತರಣೆ, ವಿಐಪಿ ಪಾಸ್ ರದ್ದುಗೊಳಿಸಲಾಗಿದೆ. ಜತೆಗೆ, ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ ವಿಶೇಷ ಬಸ್ಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ.
ಬೆಂಗಳೂರು ಸೇರಿ ವಿವಿಧೆಡೆಯಿಂದ ಹಾಸನಾಂಬೆ ದರ್ಶನಕ್ಕೆಂದು ಹೊರಡಲು ಅನುವಾಗಿದ್ದ 500 ವಿಶೇಷ ಬಸ್ಗಳಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಜನರ ನಿಯಂತ್ರಣ ಸಾಧ್ಯವಾಗದೆ ಟಿಕೆಟ್ ವಿತರಣೆಯನ್ನೇ ರದ್ದು ಮಾಡಲಾಗಿದೆ. ಹೀಗಾಗಿ ವಿಶೇಷ ದರ್ಶನ ಸ್ಥಳದ ಮೂಲಕ ಭಕ್ತರು ಒಳ ಪ್ರವೇಶಿಸದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಗುರುವಾರ ಬೆಳಗ್ಗೆಯಿಂದಲೇ ನಿರೀಕ್ಷೆಗೂ ಮೀರಿ ಭಕ್ತಸಾಗರವೇ ಹರಿದುಬರುತ್ತಿದೆ. ಜನರ ನಿಯಂತ್ರಕ್ಕೆ ಮೂವರು ಎಸ್ಪಿಗಳು ಪರದಾಡುವಂತಾಗಿದೆ. ಹಾಸನ ಎಸ್ಪಿ ಮಹಮ್ಮದ್ ಸುಜೀತಾ, ಕೊಡಗು ಎಸ್ಪಿ ಹಾಗೂ ಮಂಡ್ಯ ಎಸ್ಪಿಗಳು ಜನರ ನಿಯಂತ್ರಣಕ್ಕೆ ಪರದಾಡಿದ್ದಾರೆ.
ಹಾಸನದ ಹಾಸನಾಂಬೆ ದೇವಿ ದರ್ಶನದ ಎಲ್ಲ ವಿಐಪಿ ಪಾಸ್ಗಳನ್ನು ಹಾಸನಾಂಬೆ ದೇಗುಲ ಆಡಳಿತ ಮಂಡಳಿ ರದ್ದುಗೊಳಿಸಿದೆ. ಈಗಾಗಲೇ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರನ್ನು ಹೊರತುಪಡಿಸಿ ಉಳಿದವರಿಗೆ ವಿಐಪಿ ಪಾಸ್ ಮೂಲಕ ಒಳಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಬೇಕಾಬಿಟ್ಟಿಯಾಗಿ ವಿವಿಐಪಿ ಪಾಸ್ ಹಂಚಿದ್ದು ಕೂಡ ಯಡವಟ್ಟಿಗೆ ಕಾರಣವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಪಾಸ್ ಹಂಚಿಕೆ ಮಾಡಲಾಗಿದೆ. ವಿವಿಐಪಿ ಪಾಸ್ ಪಡೆದು ನೇರ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಬಂದಿದ್ದಾರೆ. ಹಾಸನಾಂಬೆ ದೇವಾಲಯ ಆಡಳಿತ ಮಂಡಳಿಯ ಅವೈಜ್ಞಾನಿಕ ನಡೆಯಿಂದ ಈಗ ಅಧಿಕಾರಿಗಳು, ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಟಿ ಕೋಟಿ ರೂಪಾಯಿ ಆದಾಯದ ಆಸೆಗೆ ಬಿದ್ದು ಬೇಕಾಬಿಟ್ಟಿ ಪಾಸ್ ಹಂಚಿಕೆ ಮಾಡಿದ್ದು ಮುಳುವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಐಪಿ ಪಾಸ್ ಹಾಗೂ ವಿಶೇಷ ದರ್ಶನ ಟಿಕೆಟ್ ಪಡೆದು ಬಂದಿರುವ ಲಕ್ಷಾಂತರ ಮಂದಿ, ‘ಪಾಸ್ ಇದೆ, ಒಳಗೆ ಬಿಡಿ’ ಎಂದು ಪೊಲೀಸರ ಜೊತೆ ವಾಗ್ವಾದ ಮಾಡುತ್ತಿದ್ದಾರೆ. ಇದರಿಂದಾಗಿ, ರೊಚ್ಚಿಗೆದ್ದ ಭಕ್ತರನ್ನು ನಿಯಂತ್ರಣ ಮಾಡುವುದು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.
ಭಕ್ತರದ ದಟ್ಟಣೆಯಿಂದಾಗಿ ಹಾಸನಾಂಬೆ ಸನ್ನಿಧಿಯಲ್ಲಿ ಪರಿಸ್ಥಿತಿ ಮಿತಿ ಮೀರುತ್ತಿದ್ದು, ಕಾದು ಕಾದು ಸುಸ್ತಾದ ಭಕ್ತರು ಬ್ಯಾರಿಕೇಡ್ ತಳ್ಳಿ ಒಳ ನುಗ್ಗಲು ಯತ್ನಿಸುತ್ತಿದ್ದಾರೆ. ಶಿಷ್ಟಾಚಾರದ ಹೆಸರಿನಲ್ಲಿ ಜಿಲ್ಲಾಡಳಿತದ ಅವ್ಯವಸ್ಥೆಗೆ ಜನರು ಹೈರಾಣಾಗಿದ್ದಾರೆ. ಆರೇಳು ಗಂಟೆ ಕಳೆದರೂ ದರ್ಶನ ಸಿಗದೆ ಜನರು ಕಂಗಾಲಾಗಿದ್ದು, ರೊಚ್ಚಿಗೆದ್ದಿದ್ದಾರೆ.
ರೊಚ್ಚಿಗೆದ್ದ ಜನರನ್ನು ನಿಯಂತ್ರಣ ಮಾಡಲು ಸಿಬ್ಬಂದಿ ಪಡಿಪಾಟಲು ಪಡುವಂತಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಬಂದಿರುವ ಸಾಮಾನ್ಯ ಜನರಿಗೆ ಗಣ್ಯರ ಹೆಸರಿನಲ್ಲಿ, ಶಿಷ್ಟಾಚಾರ ಪಾಲನೆ ನೆಪದಲ್ಲಿ ದರ್ಶನ ಸಿಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.