ಹಾನಗಲ್ಲ :
ಸ್ಥಳೀಯ ಸಂಸ್ಥೆಗಳ ಚುನಾವಣೆಯಾದ ಹಾನಗಲ್ಲ ಪುರಸಭೆಯ 23 ವಾರ್ಡುಗಳಲ್ಲಿ ಸ್ಪರ್ಧಿಸಿರುವ 57 ಅಭ್ಯರ್ಥಿಗಳ ಭವಿಷ್ಯವನ್ನು 20,434 ಮತದಾರರು ಆ.31 ರಂದು ನಿರ್ಧರಿಸಲಿದ್ದಾರೆ.
ಶುಕ್ರವಾರ ಇಲ್ಲಿನ ಪುರಸಭೆಯ ಚುನಾವಣೆಗಾಗಿ ತಾಲೂಕಾ ಆಡಳಿತ ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿ ಪೂರ್ಣಗೊಳಿಸಿದ್ದು, 10,540 ಪುರುಷರು, 9894 ಮಹಿಳೆಯರು ಸೇರಿದಂತೆ ಒಟ್ಟು 20,434 ಮತದಾರರು ಮತ ಚಲಾಯಿಸಲಿದ್ದಾರೆ. ಚುನಾವಣಾ ಸಿದ್ಧತೆ ಕುರಿತು ಮಾಹಿತಿ ನೀಡಿದ ತಾಲೂಕಾ ದಂಡಾಧಿಕಾರಿ ಹಾಗೂ ಚುನಾವಣಾಧಿಕಾರಿ ಶಕುಂತಲಾ ಚೌಗಲಾ, 23 ಮತಗಟ್ಟೆಗಳನ್ನು ಪಟ್ಟಣದಲ್ಲಿ ಸ್ಥಾಪಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಮೂವರಂತೆ ಒಟ್ಟು 92 ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಲಾಗಿದೆ. ನಾಲ್ಕು ವಿಭಾಗಗಳಲ್ಲಿ 2 ಜನ ಅಧಿಕಾರಿಗಳು ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. 23 ಮತಗಟ್ಟೆಗಳಲ್ಲಿ 5 ಸೂಕ್ಷ್ಮ ಹಾಗೂ 5 ಅತಿಸೂಕ್ಷ್ಮ ಮತ್ತು 13 ಮತಗಟ್ಟೆಗಳನ್ನು ಸಾಮಾನ್ಯ ಮತಗಳೆಂದು ಪರಿಗಣಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಮತದಾರರಿಗೆ ಗುರುತಿನ ಚೀಟಿ ವಿವರ ನೀಡಿದ್ದಾರೆ. ವಾರ್ಡ ಸಂಖ್ಯೆ 1 ರಿಂದ 12 ರವರೆಗೆ ತಹಸೀಲ್ದಾರ್ ಶಕುಂತಲಾ ಚೌಗಲಾ ಹಾಗೂ 13 ರಿಂದ 23 ರವರೆಗೆ ಜಾವೇದ್ ಮುಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲಿದ್ದಾರೆ, ಈ ಚುನಾವಣೆಯಲ್ಲಿ ಮೊದಲ ಬಾರಿ ನೋಟಾ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗಾಗಿ ಡಿವೈಎಸ್‍ಪಿ ಬರಮನಿ ಅವರ ನೇತೃತ್ವದಲ್ಲಿ, ಸಿಪಿಐ ರೇವಣ್ಣ ಕಟ್ಟಿಮನಿ, ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿದ್ದಾರೆ. 2ಜನ ಸಿಪಿಐ, 2 ಜನ ಪಿಎಸ್‍ಐ, 7 ಜನ ಎಎಸ್‍ಐ, 15 ಜನ ಹೆಡ್ ಕಾನ್ಸಟೇಬಲ್, 31 ಜನ ಪೊಲೀಸ್, 24 ಹೋಮ್‍ಗಾರ್ಡಗಳೂ ಸೇರಿದಂತೆ ಒಟ್ಟು 82 ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. 2 ಜಿಲ್ಲಾ ಮೀಸಲು ಪಡೆ ವಾಹನ, ಹಾಗೂ 1 ಕೆಎಸ್‍ಆರ್‍ಪಿ ತುಕಡಿಗಳನ್ನು ಚುನಾವಣೆ ಸೇವೆಗೆ ನೇಮಕಗೊಳಿಸಿದೆ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹುಬ್ಬಳ್ಳಿ ಹಾಗೂ ಹಾವೇರಿ, ಶಿರ್ಶಿ ಮಾರ್ಗಗಳಲ್ಲಿ ಎರಡು ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿ ಆಗಮಿಸುವ ಎಲ್ಲ ವಾಹನಗಳನ್ನು ತಪಾಶಿಸಲಾಗುತ್ತಿದೆ ಎಂದು ತಹಶೀಲ್ದಾರ್ ಶಕುಂತಲಾ ವಿವರಿಸಿದರು.
ಹಾನಗಲ್ಲಿನ ಪುರಸಭಾ ಚುನಾವಣಾ ಕಣದಲ್ಲಿ ಒಟ್ಟು 57 ಅಭ್ಯರ್ಥಿಗಳ ಪೈಕಿ, ಬಿಜೆಪಿ ಹಾಗೂ ಕಾಂಗ್ರೆಸ್‍ಗಳಿಂದ ತಲಾ 23, ಮತ್ತು 6 ಜೆಡಿಎಸ್ ಹಾಗೂ 5 ಜನ ಪಕ್ಷೇತರರು ಸ್ಪರ್ಧೆ ಎದುರಿಸುತ್ತಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಆ.31 ರಂದು ನಿರ್ಧಾರವಾಗಲಿದ್ದು, ಅದು ಸೆ.3 ರಂದು ಪ್ರಕಟಗೊಳ್ಳಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
