ಬ್ಯಾಡಗಿ:
ಸ್ಥಳೀಯ ಅಂತರಾಷ್ಟ್ರೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಂಗಳವಾರ (ಮಾ.26) ಒಟ್ಟು 2.43 ಲಕ್ಷ ಚೀಲಗಳಷ್ಟು ಮೆಣಸಿನಕಾಯಿ ಮಾರಾಟಕ್ಕೆ ಆಗಮಿಸಿದ್ದು (ಅರೈವಲ್ಸ್) ಪ್ರಸಕ್ತ ವರ್ಷದಲ್ಲಿ 6 ನೇ ಬಾರಿ ಎರಡು ಲಕ್ಷಕ್ಕೂ ಅಧಿಕ ಚೀಲಗಳಷ್ಟು ಅವಕವಾಗಿದೆ. ಆದರೆ ದರಗಳಲ್ಲಿ ಯಾವುದೇ ವ್ಯತ್ಯಾಸ ಕಾಣದೇ ಸ್ಥಿರತೆಯನ್ನು ಕಾಯ್ದುಕೊಂಡಿದೆ.
ಕಳೆದ ಎರಡು ವರ್ಷ ಹಿಂದೆ 2.64 ಲಕ್ಷ ಚೀಲಗಳನ್ನು ಆವಕವಾಗುವ ಮೂಲಕ ಬ್ಯಾಡಗಿ ಮಾರುಕಟ್ಟೆ ವಿಶ್ವದ ನಂ.1 ಪಟ್ಟಕ್ಕೆ ಏರಿತ್ತು, ಆದರೆ ಪ್ರಸಕ್ತ ವರ್ಷ ಅದಕ್ಕೆ ಸಮೀಪಿಸುತ್ತಿದ್ದು ನಿರಂತರವಾಗಿ ಲಕ್ಷಕ್ಕೂ ಅಧಿಕ ಚೀಲಗಳು ಮಾರುಕಟ್ಟೆಗೆ ಆವಕವಾಗುತ್ತಿದೆ.
ಓಲಿಯೋರಿಸನ್ ಉತ್ಪಾದಕರು ಖರೀದಿಯಲ್ಲಿ ಉತ್ಸಾಹ:ಒಟ್ಟು ಬೆಳೆದಿದ್ದರಲ್ಲಿ ಶೇ.30 ರಷ್ಟು ಮೆಣಸಿನಕಾಯಿ ಅಡುಗೆ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೇ ಇನ್ನುಳಿದ ಶೇ.70 ರಷ್ಟು ಓಲಿಯೋರಿಸನ್‍ಗೆ (ನೈಸರ್ಗಿಕ ಬಣ್ಣ ಉತ್ಪಾದಕರು) ಬಳಕೆ ಯಾಗುತ್ತದೆ, ದರಗಳಲ್ಲಿ ಹೊಂದಾಣಿಕೆ ಆಗುತ್ತಿರುವ ಕಾರಣ ಓಲಿಯೋರಿಸನ್ ಉತ್ಪಾದ ಕರು ಮೆಣಸಿನಕಾಯಿ ಖರೀದಿಸಲು ಉತ್ಸಾಹ ತೋರುತ್ತಿರುವುದರಿಂದ ದರಗಳಲ್ಲಿ ಸ್ಥಿರತೆಯಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆ ಎಂಬುದು ತಜ್ಞರ ಅಂಬೋಣ..
ಮಸಾಲಾ ಕಂಪನಿಗಳು ಕೂಡ ಮುಂದು:ಮಸಾಲಾ ಕಂಪನಿಗಳು ಮಾರುಕಟ್ಟೆಯಲ್ಲಿ ಬಹುತೇಕ ಪ್ರಮಾಣದಲ್ಲಿ ಖರೀದಿಸಿದ್ದು ಕಂಡು ಬಂದಿತು, ವರ್ಷದ ಪ್ರಾರಂಭದಲ್ಲಿ ಅವಿಭಾಜ್ಯ ಧಾರವಾಡ ಜಿಲ್ಲೆಯ ವಿವಿಧ ಊರುಗಳಲ್ಲಿ ಬೆಳೆದ ಬ್ಯಾಡಗಿ ಕಡ್ಡಿತಳಿ ಮೆಣಸಿನಕಾಯಿಯನ್ನು ಖರೀದಿಸುತ್ತಿದ್ದ ಮಸಾಲಾ ಕಂಪನಿಗಳು, ಈದೀಗ ರಾಜ್ಯದ ಬಳ್ಳಾರಿ, ರಾಯಚೂರ, ಗುಲ್ಬರ್ಗಾ, ಧಾರವಾಡ, ಗದಗ ಸೇರಿದಂತೆ ನೆರೆಯ ಆಂಧ್ರಪ್ರದೇಶದ ಕರ್ನೂಲ, ಆದೋನಿ, ಪ್ರಕಾಶಂ, ಶ್ರೀಶೈಲಂ ಜಿಲ್ಲೆಗಳಲ್ಲಿ ಬೆಳೆದಂತಹ ಮೆಣಸಿನಕಾಯಿಯನ್ನು ಕೂಡ ಖರೀದಿಸಲು ಮುಂದಾಗುತ್ತಿದ್ದು ದರದಲ್ಲಿ ಕುಸಿತವನ್ನು ತಡೆದು ನಿಲ್ಲಿಸಲು ಕಾರಣವಾಗಿದೆ ಎಂಬುದು ಇಲ್ಲಿನ ವ್ಯಪಾರಸ್ಥರ ಅಭಿಪ್ರಾಯ.
ನಿರಂತರ ಹೆಚ್ಚಳ: ಪ್ರಸಕ್ತ ವರ್ಷದ ಪ್ರಾರಂಭದಲ್ಲಿ ಮೆಣಸಿನಕಾಯಿಗೆ ಬರ ಎದುರಿಸುತ್ತಿದ್ದ ಮಾರುಕಟ್ಟೆಗೆ ಕಳದೆರಡು ತಿಂಗಳಿನಿಂದ ಸತತವಾಗಿ ಮೆಣಸಿನಕಾಯಿ ಹರಿದು ಬರುತ್ತಿದ್ದು ಆವಕದಲ್ಲಿ ಹೆಚ್ಚಳ ಕಂಡು ಬರುತ್ತಿದೆ ಈಗಾಗಲೇ 6 ಬಾರಿ ಎರಡು ಲಕ್ಕಕ್ಕೂ ಅಧಿಕ ಆವಕಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಸ್ಥರು.
ಟ್ರಾಫಿಕ್ ಜಾಮ್: ಸೋಮವಾರ ಮಾರುಕಟ್ಟೆಗೆ ಎರಡೂವರೆ ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕವಾಗಿದ್ದರಿಂದ, ಸಹಜವಾಗಿ ವಾಹನಗಳು ಮತ್ತು ರೈತರ ಸಂಖ್ಯೆ ಹೆಚ್ಚಾಗಿದ್ದು ಮಾರುಕಟ್ಟೆಯಲ್ಲಿ ಜನಸ್ತೋಮವೇ ಕೂಡಿತ್ತು. ಸೋಮವಾರ ರಾತ್ರಿಯಿಂದಲೇ ರಾಜ್ಯದ ವಿವಿಧ ಪ್ರದೇಶಗಳಿಂದ ಮಾರುಕಟ್ಟೆಗೆ ಮೆಣಸಿನಕಾಯಿ ಹೊತ್ತು ತಂದಿದ್ದ ಸಾವಿರಾರು ವಾಹನಗಳು ಕಿರಿದಾದ ಮುಖ್ಯರಸ್ತೆಯಲ್ಲಿ ಸಿಲುಕಿದ ಕಾರಣ ಹಳೇ ಪುರಸಭೆಯಿಂದ ಕೆಸಿಸಿ ಬ್ಯಾಂಕ್‍ವರೆಗೂ ವಾಹನಗಳು ಸುಮಾರು 2 ತಾಸಿಗೂ ಅಧಿಕ ಕಾಲ ಸಾಲುಗಟ್ಟಿ ನಿಂತಿದ್ದವು, ಇದರಿಂದ ರೈತರು ತಮ್ಮ ವಾಹನಗಳನ್ನು ಎಪಿಎಂಸಿ ಒಳಭಾಗಕ್ಕೆ ಸೇರಿಸಲು ಹರಸಾಹಸ ಪಡುತ್ತಿದ್ದ ದೃಶ್ಯಗಳು ಕಂಡು ಬಂದವು.
ರಸ್ತೆಯ ಮೇಲೆ ಚೀಲಗಳು:ಎರಡೂವರೆ ಲಕ್ಷದಷ್ಟು ಮೆಣಸಿನಕಾಯಿ ಚೀಲ ಆವಕಾದ ಹಿನ್ನಲೆಯಲ್ಲಿ ಗುರುವಾರ ಮಾರುಕಟ್ಟೆಯಲ್ಲಿ ಕಾಲಿಡಲು ಸ್ಥಳವಿಲ್ಲದಂತಾಗಿತ್ತು, ವ್ಯಾಪಾರಸ್ಥರ ಅಂಕಣಗಳು ತುಂಬಿ ಹೆಚ್ಚಾಗಿದ್ದ ಚೀಲಗಳನ್ನು ರಸ್ತೆಯ ಮೇಲಿಟ್ಟು ವ್ಯಾಪಾರ ವಹಿವಾಟು ಮಾಡಿದ ದೃಶ್ಯಗಳು ಕಂಡು ಬಂದವು ಇದರಿಂದ ಬಹುತೇಕ ಜನರಿಗೆ ಟ್ರಾಫಿಕ್ ಕಿರಿಕಿರಿ ಎನಿಸಿತು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








