ಮಧುಗಿರಿ :
ಸೊಸೆಯ ಮೇಲೆ ಮಾವನೇ ಲೈಂಗಿಕ ಕಿರುಕುಳ ನೀಡುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಮಧುಗಿರಿ ಅಧಿಕ ಸತ್ರ ನ್ಯಾಯಾಲಯ ನ್ಯಾಯಾಧೀಶರು ಆರೋಪಿಗೆ ಒಟ್ಟು 45 ಸಾವಿರ ರೂ ದಂಡ ಹಾಗೂ 6 ವರೆ ವರ್ಷ ಸಜೆಯ ತೀರ್ಪು ನೀಡಿ ಆದೇಶಿಸಿದ್ದಾರೆ.
ಮಾವನೇ ತನ್ನ ಸೊಸೆ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದನ್ನು ಸಹಿಸಲಾರದೆ ಮಹಿಳೆಯೊಬ್ಬಳು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆ ಮೊ.ನಂ. 182/2011, ಎಸ್.ಸಿ. ಸಂ: 5003/2022 ರಲ್ಲಿ ದಾಖಲಾದ ಠಾಣಾ ಸರಹದ್ದು ಕೋಟಗುಡ್ಡ ಗ್ರಾಮದಲ್ಲಿ ಮೃತ ನೊಂದ ಮಹಿಳೆಯ ಮಾವ ಆರೋಪಿ ಹನುಮಂತರಾಯಪ್ಪ, ತನ್ನ ಸೊಸೆಯನ್ನು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನನ್ನ ಕಡೆ ಇರು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಊಟ ಇಡಲು ಹೋದಾಗ ಕೈಯಿಂದ ಎಳೆಯುವುದು ತಬ್ಬಿಕೊಳ್ಳಲು ಹೋಗುವುದು, ಸ್ನಾನ ಮಾಡಲು ಹೋದಾಗ ಬಗ್ಗಿ ನೋಡುವುದು, ನನ್ನ ಹತ್ತಿರ ಬಾ, ನನ್ನ ಜೊತೆ ಹೊಂದಿಕೊಂಡು ಹೋಗು ಇಲ್ಲದಿದ್ದರೆ ಹೋಗಿ ಸಾಯಿಸುತ್ತೆನೆ ಎಂದು ಬೆದರಿಕೆಯೊಡ್ಡಿ ಆಕೆಯ ಕೈ ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ, ಹಿಂಸೆ ನೀಡುತ್ತಿದ್ದನು.
ಮೃತಳು 2021 ರ ಆಗಸ್ಟ್ 07 ರಂದು ಕೋಟಗುಡ್ಡ ಗ್ರಾಮದ ತನ್ನ ಗಂಡನ ಮನೆಯಲ್ಲಿ ಮದ್ಯಾಹ್ನ 1:00 ಗಂಟೆಯಲ್ಲಿ ಸೀರೆ ಮತ್ತು ಹಗ್ಗದಿಂದ ಮನೆಯ ತೀರಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ ಮಾನ್ಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಯಾದವ ಕರಕೇರ ರವರು ಫೆ 12 ರಂದು ಆರೋಪಿಗೆ ಕಲಂ: ಭಾರತೀಯ ದಂಡ ಸಂಹಿತೆಯ 354(ಎ) ಅಡಿಯಲ್ಲಿ 2 ವರ್ಷ ಶಿಕ್ಷೆ ಮತ್ತು ರೂ. 20,000/- ದಂಡ ವಿಧಿಸಿರುತ್ತಾರೆ. ಹಾಗೂ ದಂಡ ಪಾವತಿಸದಿದ್ದರೆ 6 ತಿಂಗಳ ಸಜೆಯನ್ನು ಮತ್ತು 306 ಐಪಿಸಿ ಅಡಿಯಲ್ಲಿ 5 ವರ್ಷ ಸಾದಾ ಶಿಕ್ಷೆ ಮತ್ತು ರೂ. 25,000/- ದಂಡ ವಿಧಿಸಿರುತ್ತಾರೆ. ದಂಡ ಪಾವತಿಸದಿದ್ದರೆ, 1 ವರ್ಷ ಸಜೆಯನ್ನು ವಿಧಿಸಿದ್ದಾರೆ. ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ