ತುಮಕೂರು:
ತುಮಕೂರು ಜಿಲ್ಲಾ ಪೊಲೀಸರ ಶ್ರಮಕ್ಕೆ ಐಜಿಪಿ, ನಾಗರಿಕರ ಪ್ರಶಂಸೆ
2020-21ನೇಸಾಲಿನಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ 507 ಪ್ರಕರಣಗಳಲ್ಲಿ 9,47,49,862 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈಪೈಕಿ 473 ಪ್ರಕರಣಗಳಲ್ಲಿನ 7,69,73,500 ರೂ.ಮೌಲ್ಯದ ವಸ್ತುಗಳನ್ನು ಮಂಗಳವಾರ ಐಜಿಪಿ ಚಂದ್ರಶೇಖರ್ ಅವರು ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆಕೊಟ್ಟರು.
ನಗರದ ಚಿಲುಮೆ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ವಿವಿಧ ಕಳ್ಳತನ, ಸುಲಿಗೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕಳವು ಮಾಲುಗಳ ಪ್ರದರ್ಶನ ಉದ್ಘಾಟಿಸಿ ಸ್ವತ್ತು ಕಳೆದುಕೊಂಡ ಮಾಲೀಕರಿಗೆ ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು.
2020-21ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಪೊಲೀಸರ ಸಾಧನೆ ಪ್ರಶಂಸನೀಯವಾಗಿದೆ. ಎಸ್ಪಿ,ಎಎಎಸ್ಪಿ ಅವರ ಆದಿಯಾಗಿ ಇಡೀ ಜಿಲ್ಲೆಯ ಪೊಲೀಸರು ಶ್ರಮವಹಿಸಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಕಳವು ಪ್ರಕರಣಗಳ ಆರೋಪಿಗಳನ್ನು ಬೆನ್ನತ್ತಿ ಮಾಲೀಕರಿಗೆ ಸ್ವತ್ತನ್ನು ಹಸ್ತಾಂತರಿಸುವ ಸಾರ್ಥಕ ಕಾರ್ಯ ಮಾಡಿದ್ದಾರೆ ಎಂದರು.
ಚೈನ್ ಕಳವು ಪ್ರಕರಣ ಕಡಿಮೆ ಮೊತ್ತದಾದರೂ ಜನರಿಗೆ ಆಭರಣಗಳ ಜೊತೆಗೆ ಭಾವನಾತ್ಮಕ ಸಂಬಂಧವಿರುತ್ತದೆ. ಇಬ್ಬರು ಪ್ರೊಬೆಷನರಿ ಎಸ್ಸೈಗಳಾದ ಮೂರ್ತಿ ಹಾಗೂ ಮೂರ್ತಿ ಎಂಬುವರು ಈ ಪ್ರಕರಣಗಳನ್ನು ಭೇದಿಸಿರುವುದು ವಿಶೇಷವೆನಿಸಿದೆ. ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ನಾಗರಿಕರ ಸಹಕಾರ, ಒಂದು ತಂಡವಾಗಿ ಪೊಲೀಸರ ಕಾರ್ಯಾಚರಣೆ ಮುಖ್ಯವಾಗುತ್ತದೆ. ತನಿಖಾಧಿಕಾರಿಗೆ ತಾಳ್ಮೆ ಮತ್ತು ಬುದ್ದಿಮತ್ತೆ ಹಾಗೂ ಚಾಕಚಕ್ಯತೆ ಮುಖ್ಯ , ಇವೆಲ್ಲವನ್ನೂ ಜಿಲ್ಲೆಯ ಪೊಲೀಸರು ಕರಗತಮಾಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತೊಡಿಸಿದರು. ಕಳುವಾಗಿದ್ದ ವಸ್ತುಗಳನ್ನು ಮರಳಿ ಪಡೆದ ವಿವಿಧ ಉಪವಿಭಾಗದ ನಾಗರಿಕರು ಭಾವುಕರಾಗಿ ಪೊಲೀಸರ ಕಾರ್ಯವೈಖರಿಗೆ ಕೃತಜ್ಞತೆ ಸಲ್ಲಿಸಿದರು.
ಮಾದಕ ಜಾಲದ ವಿರುದ್ಧ ಶೀಘ್ರ ಸರ್ಜಿಕಲ್ ಸ್ಟ್ರೈಕ್
ಜಿಲ್ಲೆಯಲ್ಲಿನ ಶಾಲಾ ಕಾಲೇಜುಗಳ ಬಳಿ ಮಾದಕ ವಸ್ತುಗಳ ಜಾಲದ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿರುವ ಖಚಿತ ಮಾಹಿತಿ ಜಿಲ್ಲಾ ಪೊಲೀಸ್ ಇಲಾಖೆಗೆ ದೊರೆತಿದ್ದು, ಶೀಘ್ರ ಸರ್ಜಿಕಲ್ ಸ್ಟ್ರೈಕ್ ಮೂಲಕ ಜಾಲವನ್ನು ಭೇದಿಸಿ ಅವರ ಎಡೆಮುರಿ ಕಟ್ಟಲಾಗುವುದು. ಜೊತೆಗೆ ಅವರ ಸ್ಥಿರಾಸ್ತಿ, ಚರಾಸ್ತಿಗಳನ್ನು ಮಟ್ಟುಗೋಲು ಹಾಕಿಕೊಳ್ಳಲಾಗುವುದು. ಈಗಾಗಲೇ ಗಡಿಭಾಗದಲ್ಲಿ ಮಟ್ಕಾ ದಂಧೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ತಿಳಿಸಿದರು.
ಶೀಘ್ರ ಮಹಿಳಾ ಅತ್ಯಾಚಾರಿ ಆರೋಪಿಗಳ ಸೆರೆ: ಎಸ್ಪಿ
ಕ್ಯಾತ್ಸಂದ್ರ ಪೊಲೀಸ್ ಠಾಣೇಯ ವ್ಯಾಪ್ತಿಯಲ್ಲಿನಡೆದ ಮಹಿಳೆ ಕೊಲೆ, ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ನಿರಂತರ ಶ್ರಮ ಹಾಕಿದ್ದು, ಆರೋಪಿಗಳ ಬಂಧನ ಇನ್ನೂ ಆಗದಿರುವ ಬಗ್ಗೆ ಇಲಾಖೆಗೂ ಬೇಸರವಿದೆ, ಆದರೆ ಆ ಪ್ರಕರಣದ ಆರೋಪಿಗಳು ಶೀಘ್ರ ಪತ್ತೆ ಆಗುವ ವಿಶ್ವಾಸವಿದೆ. ಜಿಲ್ಲೆಯ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಸಮನ್ವಯತೆ, ತಂಡವಾಗಿ ಕಾರ್ಯನಿರ್ವಹಿಸುತ್ತಿರುವುದು ಕಾರಣ ಎಂದು ಎಸ್ಪಿ ರಾಹುಲ್‍ಕುಮಾರ್ ಶಹಾಪುರವಾಡ್ ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ತುಮಕೂರು ನಗರ ಡಿವೈಎಸ್ ಪಿ ಹೆಚ್. ಶ್ರೀನಿವಾಸ್ ಸೇರಿದಂತೆ ತುಮಕೂರು, ಕುಣಿಗಲ್, ಮಧುಗಿರಿ, ತಿಪಟೂರು ಉಪವಿಭಾಗದ ಡಿವೈಎಸ್ಪಿ, ಸಿಪಿಐ ಪಿಎಸ್ಸೈಗಳು, ತನಿಖಾ ತಂಡದ ಪೊಲೀಸರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ