ಮುಂಬೈ:
ಸೆನ್ಸೆಕ್ಸ್ ಇವತ್ತು ಮಧ್ಯಂತರದಲ್ಲಿ 700ಕ್ಕೂ ಹೆಚ್ಚು ಅಂಕ ಕುಸಿತಕ್ಕೀಡಾಗಿದೆ. ಕಳೆದ ಎರಡು ದಿನಗಳಲ್ಲಿ ಸಾವಿರಾರು ಅಂಕಗಳ ಇಳಿಕೆ ದಾಖಲಿಸಿದೆ. ನಿಫ್ಟಿ 24,900ಕ್ಕಿಂತ ಕೆಳಕ್ಕಿಳಿದಿದೆ. ಆಟೊಮೊಬೈಲ್, ಎನರ್ಜಿ ಸ್ಟಾಕ್ಸ್ ಪತನವಾಗಿದೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಮತ್ತಷ್ಟು ನಷ್ಟಕ್ಕೀಡಾಗಿವೆ. ಮಧ್ಯಾಹ್ನ 12.30 ವೇಳೆಗೆ ಸೆನ್ಸೆಕ್ಸ್ 726 ಅಂಕ ಕಳೆದುಕೊಂಡು 81,461 ರ ಮಟ್ಟದಲ್ಲಿತ್ತು. ನಿಫ್ಟಿ 242 ಅಂಕ ಕಳೆದುಕೊಂಡು 24,820 ಅಂಕಗಳ ಮಟ್ಟದಲ್ಲಿತ್ತು. ಹೂಡಿಕೆದಾರರಿಗೆ ಎರಡು ದಿನಗಳಲ್ಲಿ 7 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.
ಎರಡನೆಯದಾಗಿ, ಜಾಗತಿಕ ಷೇರು ಮಾರುಕಟ್ಟೆಗಳಲ್ಲೂ ಸೂಚ್ಯಂಕಗಳು ಶುಕ್ರವಾರ ಕುಸಿದಿವೆ. ಜಪಾನ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾದಲ್ಲಿ ಸೂಚ್ಯಂಕ ಇಳಿಯಿತು. ಹೀಗಿದ್ದರೂ, ಅಮೆರಿಕದಲ್ಲಿ ಷೇರು ಸೂಚ್ಯಂಕಗಳು ಏರಿಕೆ ದಾಖಲಿಸಿವೆ. ಸ್ಟಾಕ್ ಮಾರ್ಕೆಟ್‌ನಲ್ಲಿ ಶುಕ್ರವಾರ 16 ಸೆಕ್ಟರ್‌ಗಳ ಪೈಕಿ 13 ಸೆಕ್ಟರ್‌ಗಳು ನಷ್ಟದಲ್ಲಿತ್ತು. ನಿಫ್ಟಿ ಆಟೊ ಮತ್ತು ನಿಫ್ಟಿ ಎನರ್ಜಿ ತೀವ್ರ ಇಳಿಯಿತು. ಬಜಾಜ್ ಫಿನ್ ಸರ್ವ್‌ಮತ್ತು ಬಜಾಜ್ ಫೈನಾನ್ಸ್ ಎರಡೂ ಷೇರುಗಳು ನಷ್ಟ ಅನುಭವಿಸಿತು. ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಕೂಡ ತಗ್ಗಿತು.
ಭಾರತ ಮತ್ತು ಬ್ರಿಟನ್ ಐತಿಹಾಸಿಕವಾದ ಮುಕ್ತ-ವ್ಯಾಪಾರ ಒಪ್ಪಂದ ಅಥವಾ ಫ್ರೀ ಟ್ರೇಡ್ ಅಗ್ರಿಮೆಂಟ್‌ಗೆ ಸಹಿ ಹಾಕಿವೆ. ಇದರ ಪರಿಣಾಮ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ವ್ಯಾಪಾರವು ವಾರ್ಷಿಕ 34 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ರುಪಾಯಿ ಲೆಕ್ಕದಲ್ಲಿ ಸುಮಾರು 2 ಲಕ್ಷದ 93 ಸಾವಿರ ಕೋಟಿ ರುಪಾಯಿ ಆಗಲಿದೆ. ಭಾರತ ಮತ್ತು ಬ್ರಿಟನ್ ನಡುವಣ ಟ್ರೇಡ್ ಡೀಲ್ ಹಿನ್ನೆಲೆಯಲ್ಲಿ ಭಾರತದ ಟೆಕ್ಸ್ಟ್‌ಟೈಲ್ಸ್ ಸ್ಟಾಕ್ಸ್ ಶುಕ್ರವಾರ 6% ತನಕ ಏರಿಕೆಯಾಯಿತು. ಟ್ರಿಡೆಂಟ್ ಷೇರಿನ ದರದಲ್ಲಿ 6% ಹೆಚ್ಚಳವಾಯಿತು. TCNS clothing ಕಂಪನಿ ಸ್ಟಾಕ್ಸ್ ದರ ಕೂಡ ಏರಿತು.
ಭಾರತದ ಅತಿ ದೊಡ್ಡ ಸಾಂಸ್ಥಿಕ ಹೂಡಿಕೆದಾರ ಎಲ್‌ಐಸಿಯು ತನ್ನ 15 ಲಕ್ಷ ಕೋಟಿ ರುಪಾಯಿ ಪೋರ್ಟ್ ಫೋಲಿಯೊದಲ್ಲಿ ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಮುಖ್ಯವಾಗಿ ಜನಪ್ರಿಯ ರಿಟೇಲ್ ಸ್ಟಾಕ್ಸ್‌ಗಳಲ್ಲಿನ ತನ್ನ ಹೂಡಿಕೆಯನ್ನು ಕಡಿತಗೊಳಿಸಿದೆ. ಡಿಫೆನ್ಸ್ ಸ್ಟಾಕ್ಸ್‌ಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿದೆ.
ಸುಜ್ಲಾನ್ ಎನರ್ಜಿ, ರಿಲಯನ್ಸ್ ಪವರ್ ಮತ್ತು ವೇದಾಂತ ಷೇರುಗಳಲ್ಲಿರುವ ತನ್ನ ಹೂಡಿಕೆಯನ್ನು ಎಲ್‌ಐಸಿ ಕಡಿತಗೊಳಿಸಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಎಲ್ ಐಸಿಯು 81 ಕಂಪನಿಗಳ ಷೇರುಗಳಲ್ಲಿ ಇನ್ವೆಸ್ಟ್ ಮೆಂಟ್ ಅನ್ನು ಕಡಿತಗೊಳಿಸಿದೆ. ಎಲ್ ಐಸಿಯು ಈಗ ಒಟ್ಟು 277 ಸ್ಟಾಕ್ಸ್‌ಗಳಲ್ಲಿ ಹೂಡಿಕೆಯನ್ನು ಹೊಂದಿದೆ.
ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ರಿಲಯನ್ಸ್ ಪವರ್ ಷೇರುಗಳ ದರದಲ್ಲಿ ಕಳೆದ ಎರಡು ದಿನಗಳಲ್ಲಿ 10% ಇಳಿಕೆಯಾಗಿದೆ. ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿಯವರಿಗೆ ಸೇರಿದ ಕಂಪನಿಗಳ ಕಚೇರಿಗಳು ಮತ್ತು ಸ್ಥಳಗಳ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಈ ಷೇರುಗಳ ದರ ಇಳಿಕೆಯಾಗಿದೆ. ಯಸ್ ಬ್ಯಾಂಕ್‌ನಲ್ಲಿ ನಡೆದಿರುವ 3,000 ಕೋಟಿ ರುಪಾಯಿ ಸಾಲದ ಹಗರಣಕ್ಕೆ ಸಂಬಂಧಿಸಿ ಅನಿಲ್ ಅಂಬಾನಿ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಹೀಗಾಗಿ ರಿಲಯನ್ಸ್ ಪವರ್ ಷೇರು ದರ 56 ರುಪಾಯಿಗೆ ಹಾಗೂ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಷೇರು ದರ 342 ರುಪಾಯಿಗೆ ಇಳಿಕೆಯಾಗಿದೆ.
ಹಾಗಾದರೆ ಇಂಡಿಯನ್ ಸ್ಟಾಕ್ ಮಾರ್ಕೆಟ್ ಯಾಕೆ ಕುಸಿಯುತ್ತಿದೆ? ಎಂಬುದು ಪ್ರಶ್ನೆಯಾಗಿದೆ. ಇದಕ್ಕೆ 5 ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಬಹುದು. ಅವುಗಳನ್ನು ನೋಡೋಣ.
- ಮೊದಲನೆಯದಾಗಿ, ಭಾರತ ಮತ್ತು ಅಮೆರಿಕ ನಡುವಣ ವ್ಯಾಪಾರ ಒಪ್ಪಂದ ವಿಳಂಬವಾಗುತ್ತಿರುವುದು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಮಾತುಕತೆಗಳು ನಡೆಯುತ್ತಿದ್ದರೂ, ಯಾವುದೂ ಸ್ಪಷ್ಟವಾಗಿಲ್ಲ. ಅನಿಶ್ಚಿತತೆ ಕಾಡುತ್ತಿದೆ. ಹೀಗಿದ್ದರೂ ವರದಿಗಳ ಪ್ರಕಾರ ಎರಡೂ ದೇಶಗಳು ಪ್ರಗತಿಯ ಪಥದಲ್ಲಿವೆ.
- ಅಮೆರಿಕವು ಇತ್ತೀಚೆಗೆ ಜಪಾನ್, ಫಿಲಿಪ್ಪೀನ್ಸ್, ಇಂಡೊನೇಷ್ಯಾ ಮತ್ತು ವಿಯೆಟ್ನಾಂ ಜತೆಗೆ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಿದೆ. ಆದರೆ ಭಾರತದ ಜತೆಗೆ ಮಾತುಕತೆ ಇತ್ಯರ್ಥವಾಗಿಲ್ಲ.
- ಅಮೆರಿಕವು ಭಾರತದ ಕೃಷಿ, ಡೇರಿ ಮತ್ತು ಜೆನೆಟಿಕಲಿ ಮೋಡಿಫೈಡ್ ಅಥವಾ ಕುಲಾಂತರಿ ಉತ್ಪನ್ನಗಳ ವಲಯದಲ್ಲಿ ಮಾರುಕಟ್ಟೆ ಪ್ರವೇಶವನ್ನು ಬಯಸುತ್ತಿದೆ. ಆದರೆ ಇದಕ್ಕೆ ಭಾರತ ಒಪ್ಪಿಗೆ ನೀಡಿಲ್ಲ. ದೇಶದ ರೈತರ ಹಿತಾಸಕ್ತಿಯ ಪ್ರಶ್ನೆ ಇದೆ. ಹೀಗಾಗಿ ಕೇಂದ್ರ ಸರಕಾರ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ.
- ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್ ಷೇರು ದರ ಇಳಿಕೆಯ ಎಫೆಕ್ಟ್: ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್ ಸರ್ವ್ ಕಂಪನಿಗಳ ಮೊದಲ ತ್ರೈಮಾಸಿಕ ಫಲಿತಾಂಶವು ಷೇರು ಮಾರುಕಟ್ಟೆಯನ್ನು ಪ್ರಭಾವಿತಗೊಳಿಸಲಿಲ್ಲ. ಇದರ ಪರಿಣಾಮ ಫೈನಾನ್ಸ್ ಷೇರುಗಳು ಒತ್ತಡಕ್ಕೀಡಾಯಿತು.
- ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ನಾಲ್ಕು ದಿನಗಳಿಂದ ಭಾರತೀಯ ಷೇರು ಮಾರುಕಟ್ಟೆಯಿಂದ 11,572 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೂ ನಕಾರಾತ್ಮಕ ಪ್ರಭಾವ ಬೀರಿತು.
ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮವಾಗಿದೆ. ಇದರ ಪರಿಣಾಮಗಳನ್ನೂ ಹೂಡಿಕೆದಾರರು ತಾಳ್ಮೆಯಿಂದ ಕಾದು ನೋಡುತ್ತಿದ್ದಾರೆ. ಆದರೆ ಜವಳಿ ವಲಯದ ಷೇರುಗಲು ಈಗಾಗಲೇ ಸಕಾರಾತ್ಮಕವಾಗಿವೆ.ಜಾಗತಿಕ ಷೇರು ಮಾರುಕಟ್ಟೆ ಶುಕ್ರವಾರ ದುರ್ಬಲವಾಗಿತ್ತು. ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಫಿಲಿಪ್ಪೀನ್ಸ್‌ನಲ್ಲಿ ಸೂಚ್ಯಂಕಗಳು ಇಳಿಯಿತು.
