ತುಮಕೂರು:
ತುಮಕೂರು ನಗರದಾದ್ಯಂತ 2021 ರ ಜನವರಿಯಿಂದ ಸೆಪ್ಟೆಂಬರ್ 20 ರವರೆಗಿನ ಒಂಭತ್ತು ತಿಂಗಳ ಅವಧಿಯಲ್ಲಿ 725 ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡಲಾಗಿದೆ. ಇದಕ್ಕಾಗಿ ಒಟ್ಟು 7,26,890 ರೂ. ವೆಚ್ಚವಾಗಿದೆ ಎಂದು ತುಮಕೂರು ಮಹಾನಗರ ಪಾಲಿಕೆಯು ಹೇಳಿಕೊಂಡಿದೆ.
ಆರ್.ವಿಶ್ವನಾಥನ್ ಅವರು ಮಾಹಿತಿಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯು ಉತ್ತರಿಸಿದ್ದು, ಅದರಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಒಂದು ಗಂಡು ನಾಯಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು 1,100 ರೂ. ಹಾಗೂ ಒಂದು ಹೆಣ್ಣು ನಾಯಿಗೆ 1,350 ರೂ. ವೆಚ್ಚ ಆಗುತ್ತದೆಂದು ಪಾಲಿಕೆ ಹೇಳಿದೆ. ಶಸ್ತ್ರಚಿಕಿತ್ಸೆ ಅವಧಿಯಲ್ಲಿ ಬೀದಿನಾಯಿಗಳಿಗೆ ಮೊಸರನ್ನ ಹಾಗೂ ಹಾಲು ಅನ್ನ ಕೊಡಲಾಗುತ್ತದೆಂದು ತಿಳಿಸಲಾಗಿದ್ದು, ಎಷ್ಟು ದಿನಗಳ ಕಾಲ ಬೀದಿನಾಯಿಯನ್ನು ಉಳಿಸಿಕೊಳ್ಳಲಾಗುವುದೆಂಬ ವಿಷಯವನ್ನು ಮಾತ್ರ ಬಹಿರಂಗ ಪಡಿಸಿಲ್ಲ.
ಚೇತಕ್ ಅನಿಮಲ್ ವೆಲ್‍ಫೇರ್ ಟ್ರಸ್ಟ್, ಮಾಗಡಿ, ರಾಮನಗರ ಜಿಲ್ಲೆ ಇವರಿಗೆ ಬೀದಿನಾಯಿ ಹಿಡಿದು ಶಸ್ತ್ರಚಿಕಿತ್ಸೆ ಮಾಡುವ ಟೆಂಡರ್ ಆಗಿದೆ. ದಿನಾಂಕ 03-06-2019 ರಂದು ಈ ಬಗ್ಗೆ ಟೆಂಡರ್ ಕರೆಯಲಾಗಿದೆ. ಆದರೆ ಯಾವ ಪತ್ರಿಕೆಯಲ್ಲಿ ಟೆಂಡರ್ ಕರೆಯಲಾಗಿದೆಯೆಂಬ ಮಾಹಿತಿಯನ್ನು ಮುಚ್ಚಿಡಲಾಗಿದೆ. ಈ ಸಂಸ್ಥೆಯು ತುಮಕೂರು ತಾಲ್ಲೂಕು ಹೊನ್ನುಡಿಕೆ ಗ್ರಾಮದಲ್ಲಿ ಬೀದಿನಾಯಿಗಳ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ, ಶ್ವಾನಗೃಹ ಇದೆ. ಅಲ್ಲಿ ಆಂಟಿ ರೇಬಿಸ್ ವ್ಯಾಕ್ಸಿನ್ ಮತ್ತು ಆರ್ಗನ್ ಕೌಂಟಿಂಗ್ ಅಂಡ್ ಕನ್ಫರ್ಮ್ ವ್ಯವಸ್ಥೆ ಇದೆ. ಪಶುವೈದ್ಯ ಡಾ. ಎಚ್.ಎಂ.ಮುನಿರಾಜು ಇಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಶಸ್ತ್ರಚಿಕಿತ್ಸೆ ಬಳಿಕ ಆ ನಾಯಿಯ ಕಿವಿಗೆ “ವಿ” ಆಕಾರದಲ್ಲಿ ಗುರುತು ಮಾಡಲಾಗುತ್ತದೆ. ಆ ಬಳಿಕ ಸದರಿ ನಾಯಿಯನ್ನು ಎಲ್ಲಿಂದ ಹಿಡಿದು ತರಲಾಗಿರುವುದೋ, ಅದೇ ಸ್ಥಳಕ್ಕೆ ಪಾಲಿಕೆ ಸಿಬ್ಬಂದಿಯ ಸಮ್ಮುಖದಲ್ಲಿ ಒಯ್ದು ವಾಪಸ್ ಬಿಡುವುದಾಗಿ ಪಾಲಿಕೆಯು ವಿವರಣೆ ನೀಡಿದೆ ಎಂದು ಅರ್ಜಿದಾರ ಆರ್.ವಿಶ್ವನಾಥನ್ ವಿವರಿಸಿದ್ದಾರೆ.
ನಗರದಲ್ಲಿ 1,658 ಬೀದಿನಾಯಿಗಳು
ತುಮಕೂರಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು ನಡೆಸಿರುವ 19 ನೇ ಜಾನುವಾರು ಗಣತಿ ಪ್ರಕಾರ ತುಮಕೂರು ನಗರದಲ್ಲಿ 1,658 ಬೀದಿನಾಯಿಗಳಿವೆ ಎಂದು ಪಾಲಿಕೆ ತಿಳಿಸಿದ್ದು, ಈ ಅಂಕಿಅಂಶವು ಯಾವ ವರ್ಷದ್ದು ಎಂಬುದನ್ನು ತಿಳಿಸಿಲ್ಲ.
ಹಂದಿ ಹಾವಳಿ ಬಗ್ಗೆ ಮೌನ
ಬೀದಿನಾಯಿ ಮತ್ತು ಹಂದಿ ಹಾವಳಿ ತಡೆಗೆ ಕೈಗೊಂಡ ಕ್ರಮಗಳ ಬಗೆಗಿನ ಪ್ರಶ್ನೆಗೆ, “ಬೀದಿನಾಯಿಗಳ ಸಂಖ್ಯೆ ಹೆಚ್ಚಾದಂತೆ ಸದರಿ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿರುವುದು ಹಾಗೂ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಿರುವುದು” ಎಂದು ಅಸ್ಪಷ್ಟ ಉತ್ತರ ಕೊಟ್ಟು ಪಾಲಿಕೆ ಕೈತೊಳೆದುಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ