ಜಗನ್ನಾಥ ದೇವಾಲಯ ಪ್ರವೇಶ : 9 ಬಾಂಗ್ಲಾ ಪ್ರಜೆಗಳ ಬಂಧನ

ಭುವನೇಶ್ವರ:

   ಅತ್ಯುನ್ನತ ಭದ್ರತೆಯ ಹೊರತಾಗಿಯೂ ಖ್ಯಾತ ಪುರಿ ಜಗನ್ನಾಥ ದೇವಸ್ಥಾನಕ್ಕೆ ಅನಧಿಕೃತವಾಗಿ ಪ್ರವೇಶಿಸಿದ ಆರೋಪದ ಮೇಲೆ 9 ಮಂದಿ ಬಾಂಗ್ಲಾ ಪ್ರಜೆಗಳನ್ನು ಒಡಿಶಾ ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

   12ನೇ ಶತಮಾನದ ಈ ಪವಿತ್ರ ದೇಗುಲಕ್ಕೆ ನಿಯಮಗಳನ್ನು ಉಲ್ಲಂಘಿಸಿ ಹಿಂದೂಗಳಲ್ಲದ ಹಲವು ಬಾಂಗ್ಲಾ ಪ್ರಜೆಗಳು ಪ್ರವೇಶಿಸಿರುವುದನ್ನು ಕಂಡು ಕೆಲವು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸಿಂಗ್‌ದ್ವಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಭಾನುವಾರ ಸಂಜೆ ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆಗಾಗಿ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪುರಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಮಿಶ್ರಾ ತಿಳಿಸಿದ್ದಾರೆ. 

   ‘ಬಾಂಗ್ಲಾದೇಶದ ಕೆಲವು ಹಿಂದೂಯೇತರರು ದೇವಾಲಯಕ್ಕೆ ಪ್ರವೇಶಿಸಿದ್ದಾರೆ ಎಂದು ನಮಗೆ ದೂರು ಬಂದಿದೆ. ಸದ್ಯ 9 ಮಂದಿ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದೇವೆ’ ಎಂದು ಪುರಿ ಎಸ್ಪಿ ಪಿನಾಕ್ ಮಿಶ್ರಾ ತಿಳಿಸಿದ್ದಾರೆ.

   ‘ದೇವಾಲಯದ ನಿಯಮಗಳ ಪ್ರಕಾರ, ದೇಗುಲವನ್ನು ಪ್ರವೇಶಿಸಲು ಹಿಂದೂಗಳಿಗೆ ಮಾತ್ರ ಅವಕಾಶವಿದೆ. ಅವರು ಹಿಂದೂಗಳು ಅಲ್ಲ ಎಂದು ಕಂಡುಬಂದರೆ, ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಾವು ಅವರ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಅವರಲ್ಲಿ ಒಬ್ಬ ಹಿಂದೂ ಇರುವುದು ಪತ್ತೆಯಾಗಿದೆ. ವಶಕ್ಕೆ ಪಡೆದ 9 ಮಂದಿಯಲ್ಲಿ ನಾಲ್ವರು ದೇವಸ್ಥಾನಕ್ಕೆ ಪ್ರವೇಶಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

    ತನಿಖೆ ಪೂರ್ಣಗೊಳ್ಳುವವರೆಗೆ ಪುರಿ ನಗರವನ್ನು ಬಿಡದಂತೆ ಆಪಾಧಿತ ವ್ಯಕ್ತಿಗಳಿಗೆ ಸೂಚಿಸಲಾಗಿದ್ದು, ದೇಗುಲದ ಪ್ರವೇಶ ನಿಯಮಗಳ ಬಗ್ಗೆ ನಮಗೆ ತಿಳಿದಿಲ್ಲ ಎಂದು ಆರೋಪಿತ ಗುಂಪು ಹೇಳಿಕೊಂಡಿದೆ ಮತ್ತು ಪುರಿಗೆ ಭೇಟಿ ನೀಡುವ ಉದ್ದೇಶವನ್ನು ತನಿಖೆ ಮಾಡಲಾಗುತ್ತಿದೆ ಎಂದು ಎಸ್ಪಿ ಹೇಳಿದರು.

Recent Articles

spot_img

Related Stories

Share via
Copy link
Powered by Social Snap