ತುಮಕೂರು:
ರಾಜಕೀಯ ಪಕ್ಷಗಳಿಗೆ ಒಂದು ಸೈದ್ಧಾಂತಿಕ ಹಿನ್ನೆಲೆ ಇರುತ್ತದೆ. ಚುನಾವಣೆಗಳು ಎದುರಾದಾಗ ಪಕ್ಷದ ನೀತಿ ನಿಯಮಗಳ ಅನುಸಾರ ಪ್ರಣಾಳಿಕೆಗಳು ಸಿದ್ಧಗೊಳ್ಳುತ್ತವೆ. ಈ ಪ್ರಣಾಳಿಕೆಗೆ ವಿಶೇಷ ಮಹತ್ವವಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಹೊಂದಿರುವ ಪ್ರಣಾಳಿಕೆಯಲ್ಲಿ ಮುನ್ನೋಟ ಇರುತ್ತದೆ. ಹಿಂದಿನ ಭರವಸೆಗಳ ಕಾರ್ಯಸಾಧನೆಯ ಪ್ರಸ್ತಾಪವೂ ಇರುತ್ತದೆ. ಪ್ರಣಾಳಿಕೆಯ ಈ ಅಂಶಗಳನ್ನು ಮತದಾರರ ಮುಂದೆ ಇಡಬೇಕು. ಇದನ್ನು ಮುಂದಿಟ್ಟುಕೊAಡೇ ಮತಯಾಚನೆಗೆ ಹೋಗಬೇಕು.
ಆದರೆ ಎಲ್ಲಿಯೂ ಪ್ರಣಾಳಿಕೆಗಳ ಬಗ್ಗೆ ಚರ್ಚೆಗಳೇ ನಡೆಯುತ್ತಿಲ್ಲ. ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆಗಳಿಗೆ ಮಹತ್ವವೂ ಸಿಗುತ್ತಿಲ್ಲ. ದೀರ್ಘಕಾಲದ ಅಭಿವೃದ್ಧಿಯ ಆಶೋತ್ತರಗಳನ್ನು ಬಿಂಬಿಸುವ ಅಂಶಗಳು ಪ್ರಣಾಳಿಕೆಯಲ್ಲಿ ಇರಬೇಕು. ಮತದಾರರು ಅದರ ಬಗ್ಗೆ ಚರ್ಚೆ ನಡೆಸಬೇಕು. ಆದರೆ ಇವೆಲ್ಲವೂ ಕೇವಲ ಹುಸಿ ಭರವಸೆಗಳಾಗಿಯೇ ಉಳಿಯುತ್ತಿವೆ.
ಐದು ವರ್ಷಗಳ ಹಿಂದೆ ಪ್ರಣಾಳಿಕೆಯಲ್ಲಿ ಯಾವೆಲ್ಲ ಅಂಶಗಳಿದ್ದವು, ಅವುಗಳಲ್ಲಿ ಈಡೇರಿರುವ ಭರವಸೆಗಳೆಷ್ಟು? ಈಗ ಸೇರ್ಪಡೆಯಾಗುತ್ತಿರುವ ವಿಷಯಗಳು ಯಾವುವು? ಇವೆಲ್ಲವೂ ಸಮಗ್ರವಾಗಿ ಇರಬೇಕು. ಆಶ್ಚರ್ಯವೆಂದರೆ, ಪಕ್ಷಗಳು ಅಧಿಕಾರದಲ್ಲಿದ್ದಾಗ ತಮ್ಮ ಪ್ರಣಾಳಿಕೆಗಳಲ್ಲಿ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗದೆ ಇರುವುದು. ಹೀಗಾಗಿ ಪ್ರಣಾಳಿಕೆ ಎಂಬುದು ಹುಸಿ ಭರವಸೆಗಳ ಒಂದು ಪುಸ್ತಿಕೆಯಾಗುತ್ತಿದೆ.
ಪ್ರಣಾಳಿಕೆಯ ವಿಷಯಗಳು ಯಾವತ್ತೂ ಮತದಾರನೊಂದಿಗೆ ಮುಖಾಮುಖಿಯಾಗಬೇಕು. ನಾವು ಎಂತಹ ಸಮಾಜವನ್ನು ನಿರೀಕ್ಷಿಸುತ್ತೇವೆ, ಅಭಿವೃದ್ಧಿಯ ವಿಷಯಗಳು ಯಾವುವು? ಕಡೆಗಣನೆಗೆ ಒಳಪಟ್ಟಿರುವ ಕ್ಷೇತ್ರಗಳು ಯಾವುವು? ಅದರ ಅಭಿವೃದ್ಧಿಗೆ ಮುಂದಿನ ಯೋಜನೆಗಳೇನು? ಎಂಬುದರಿAದ ಹಿಡಿದು ಜನಸಾಮಾನ್ಯರಿಗೆ ತೀರಾ ಹತ್ತಿರವಾಗಬಲ್ಲ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಕೆಲವು ಅಂಶಗಳು ಪ್ರಣಾಳಿಕೆಯಲ್ಲಿ ಇರುತ್ತವೆ. ಅದೇ ಅಂಶಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ. ಮರ‍್ನಾಲ್ಕು ಸರ್ಕಾರಗಳು ಬಂದು ಹೋದರೂ ಪ್ರಣಾಳಿಕೆಯ ಅಂಶ ಮಾತ್ರ ಬದಲಾಗದು. ಅಷ್ಟೇ ಅಲ್ಲ, ಪ್ರಣಾಳಿಕೆಯ ಇರುವ ಅಂಶಗಳ ಬಗ್ಗೆ ತಾತ್ವಿಕ ಉತ್ತರಗಳೂ ಸಿಗುವುದಿಲ್ಲ.
ಪಕ್ಷ ಮತ್ತು ಅದರ ಮುಖಂಡರು ಬಿಡುಗಡೆ ಮಾಡುವ ಪ್ರಣಾಳಿಕೆ ಚುನಾವಣೆಯಿಂದ ಚುನಾವಣೆಗೆ ಗಾಂಭೀರ್ಯ ಕಳೆದುಕೊಳ್ಳುತ್ತಿದೆ. ಜನಪ್ರತಿನಿಧಿಗಳು ಪ್ರಣಾಳಿಕೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಎಷ್ಟೋ ಅಭ್ಯರ್ಥಿಗಳು ಪ್ರಣಾಳಿಕೆಯಲ್ಲಿನ ವಿಷಯಗಳನ್ನೇ ಓದಿರುವುದಿಲ್ಲ. ಯಾರಾದರೂ ಮತದಾರ ಪ್ರಶ್ನಿಸಿದರೆ ಅದಕ್ಕೆ ಉತ್ತರ ಕೊಡಲು ತಡಬಡಾಯಿಸಬಲ್ಲ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ. ಅದೃಷ್ಟವೆಂದರೆ, ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಮತದಾರ ಪ್ರಶ್ನೆ ಮಾಡದೆ ಇರುವುದು. ಇದು ಯಾರಿಗೂ ಬೇಕಿಲ್ಲದ ವಿಷಯ ಎಂಬುದು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೂ ಗೊತ್ತು.
ಹಣದ ಮುಂದೆ ಇವೆಲ್ಲವೂ ಗೌಣ ಎಂಬುದನ್ನು ಚೆನ್ನಾಗಿ ಬಲ್ಲ ಅಭ್ಯರ್ಥಿಗಳು ವಾಮ ಮಾರ್ಗಗಳ ಹಾದಿ ಬಳಸಿ ಚುನಾವಣೆಯಲ್ಲಿ ಗೆಲುವು ಪಡೆಯುತ್ತಾರೆ. ಚುನಾವಣೆಯಿಂದ ಚುನಾವಣೆಗೆ ಆಸ್ತಿ ದುಪ್ಪಟ್ಟಿನತ್ತ ಗಮನ ಹರಿಸುತ್ತಾರೆಯೇ ವಿನಃ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದ ಭರವಸೆಗಳು, ಕೊಟ್ಟಿದ್ದ ಮಾತುಗಳು ಜ್ಞಾನಪಕಕ್ಕೆ ಬರುವುದೇ ಇಲ್ಲ.
ನಮ್ಮ ಎಲ್ಲ ಆಡಳಿತ ವ್ಯವಸ್ಥೆಗೆ ಭದ್ರ ಬುನಾದಿ ಸಂವಿಧಾನ. ಅದರ ಆಶಯಗಳಂತೆಯೇ ಸರ್ಕಾರ ನಡೆಯಬೇಕು. ಕಾನೂನುಗಳು ರಚನೆಯಾಗಬೇಕು. ಚುನಾವಣೆಯ ಪ್ರಣಾಳಿಕೆಯೂ ಇದೇ ರೀತಿ ಭದ್ರ ಬುನಾದಿಯಾಗಬೇಕು. ಪ್ರಣಾಳಿಕೆಯ ಅಂಶಗಳನ್ನು ನಿರ್ಲಕ್ಷಿಸಿದರೆ ಪ್ರಶ್ನಿಸುವ ಮನೋಧರ್ಮ ಹೆಚ್ಚಾಗಬೇಕು. ಸೂಕ್ಷö್ಮವಾಗಿ ಗಮನಿಸುತ್ತಾ ಹೋದರೆ ಎಲ್ಲ ಪಕ್ಷಗಳ ಪ್ರಣಾಳಿಕೆಗಳು ನಾಮಕಾವಸ್ಥೆಗೆ ಕೆಲವೆ ದಿನಗಳಲ್ಲಿ ರೂಪುಗೊಂಡ ಪುಸ್ತಿಕೆಯಾಗುತ್ತಿವೆ.
ಚುನಾವಣೆಯ ಸಂದರ್ಭದಲ್ಲಿ ಬಡವರ ಬಗ್ಗೆ, ಕೂಲಿ ಕಾರ್ಮಿಕರ ಬಗ್ಗೆ, ರೈತಾಪಿ ವರ್ಗದವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಜನನಾಯಕರು ಆನಂತರ ಅಧಿಕಾರ ಗಿಟ್ಟಿದಾಗ ಮಾಡುತ್ತಿರುವುದಾದರೂ ಏನು? ನಾಡಿನ ಸಂಪತ್ತನ್ನು ಲೂಟಿ ಹೊಡೆಯಲು ಇನ್ನಿಲ್ಲದ ಅಕ್ರಮ ಮಾರ್ಗಗಳಿಗೆ ಮೊರೆ ಹೋಗುತ್ತಾರೆ. ಬಂಡವಾಳಶಾಹಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಉದ್ಯಮ ಪತಿಗಳ ಸಂಪರ್ಕ ಸಾಧಿಸುತ್ತಾರೆ. ಇಂತಹ ಕೆಲವೆ ಉದ್ಯಮ ಪತಿಗಳ ಕೈನಲ್ಲಿ ಸರ್ಕಾರ ಕೈಗೊಂಬೆಯಾಗುತ್ತದೆ.
ರಾಜಕೀಯ ಪಕ್ಷಗಳನ್ನು, ರಾಜಕಾರಣವನ್ನು ನಿಯಂತ್ರಿಸುತ್ತ, ಅವುಗಳನ್ನು ಪೋಷಿಸಿ ಬೆಳೆಸುತ್ತಿರುವ ಉದ್ಯಮ ಪತಿಗಳ ನಿರಂತರ ಸಂಪತ್ತಿನ ಶೇಖರಣೆಗೆ ಇತಿಶ್ರೀ ಹಾಡುವಂತಹ ಅಂಶಗಳು ಪ್ರಣಾಳಿಕೆಯಲ್ಲಿ ಸಿದ್ಧಗೊಳ್ಳಬೇಕು. ಸಾಮಾಜಿಕ ಅಸಮಾನತೆ ನಿವಾರಣೆ, ಬಡತನ ನಿರ್ಮೂಲನೆ, ನಿರುದ್ಯೋಗ ಸಮಸ್ಯೆ, ಕೃಷಿ ಸಮಸ್ಯೆ ಇತ್ಯಾದಿಗಳ ಬಗ್ಗೆ ಪ್ರಣಾಳಿಕೆಯಲ್ಲಿ ಸೇರ್ಪಡೆಯಾಗಬೇಕು. ಆದರೆ ಸಮಾಜಕ್ಕೆ ಪೂರಕವಾಗುವ ಈ ಅಂಶಗಳು ಸೇರ್ಪಡೆಯಾಗುವುದೂ ಇಲ್ಲ.
ಒಂದು ವೇಳೆ ಸೇರ್ಪಡೆಯಾದರೂ ಜಾರಿ ಇಲ್ಲ.ಪ್ರಣಾಳಿಕೆಯಲ್ಲಿಯೂ ಪಕ್ಷ ರಾಜಕಾರಣ ವಿಜೃಂಭಿಸುತ್ತವೆ. ಒಂದು ಪಕ್ಷ ಕೆಲವು ವಿಷಯಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದರೆ ಮತ್ತೊಂದು ಪಕ್ಷ ಮತದಾರರನ್ನು ಸೆಳೆಯಬಲ್ಲದಂತಹ ಇತರೆ ಅತ್ಯಾಕರ್ಷಕ ಭರವಸೆಗಳನ್ನು ಪ್ರಕಟಿಸುತ್ತವೆ. ಇದರಲ್ಲಿ ಕೆಲವು ಉಚಿತ ಕೊಡುಗೆಗಳು ಸೇರಿದಂತೆ ಅಪ್ರಬುದ್ಧ ಮತ್ತು ಜಾರಿಯಾಗದ ಅಂಶಗಳೂ ಇರುತ್ತವೆ. ಇವೆಲ್ಲವೂ ಚುನಾವಣಾ ದೃಷ್ಟಿಕೋನದ ಭರವಸೆಗಳಷ್ಟೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
