ಗ್ಯಾಂಗ್ಟಕ್:
ಈಶಾನ್ಯ ರಾಜ್ಯಗಳು ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಸಂಪೂರ್ಣವಾಗಿ ನಲುಗಿಹೋಗಿವೆ. ಹೀಗಿರುವಾಗ ಸಿಕ್ಕಿಂನಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಮೂವರು ಸೈನಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು ಒಂಬತ್ತು ಭದ್ರತಾ ಸಿಬ್ಬಂದಿ ಕಾಣೆಯಾಗಿದ್ದಾರೆ. ಲಾಚೆನ್ ಜಿಲ್ಲೆಯ ಚಾಟೆನ್‌ನಲ್ಲಿರು ಸೇನಾ ಶಿಬಿರದ ಬಳಿ ಭಾನುವಾರ ಸಂಜೆ 7 ಗಂಟೆಗೆ ಭೂಕುಸಿತ ಸಂಭವಿಸಿದ್ದು, ಇದುವರೆಗೆ ಮೂವರು ಸೈನಿಕರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ, ಆದರೆ 9 ಸೈನಿಕರು ಇನ್ನೂ ಕಾಣೆಯಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಭಾರತೀಯ ಸೇನೆಯು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪ್ರತಿಕೂಲ ವಾತಾವ ರಣದ ನಡುವೆಯೇ ಕಾರ್ಯಾಚರಣೆ ಮುಂದುವರಿದಿದೆ. ನಾಲ್ವರನ್ನು ರಕ್ಷಿಸಲಾಗಿದ್ದು, ಅವರಿಗೆ ಗಾಯಗಳಾಗಿವೆ. ಆದರೆ ಮೂವರು ಯೋಧರು ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಹವಾಲ್ದಾರ್ ಲಖ್ವಿಂದರ್ ಸಿಂಗ್, ಲ್ಯಾನ್ಸ್ ನಾಯಕ್ ಮುನೀಶ್ ಠಾಕೂರ್ ಮತ್ತು ಪೋರ್ಟರ್ ಅಭಿಷೇಕ್ ಲಖಾಡಾ ಎಂದು ಗುರುತಿಸಲಾಗಿದೆ. ಕಣ್ಮರೆಯಾಗಿರುವ ಸಿಬ್ಬಂದಿಯನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ರಕ್ಷಣಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ” ಎಂದು ಸೇನೆ ತಿಳಿಸಿದೆ.
ಇನ್ನು ಮೃತರ ಕುಟುಂಬಕ್ಕೆ ಸೇನೆ ಸಾಂತ್ವನ ಹೇಳಿದೆ. ಅಲ್ಲದೇ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದೆ. ಅಲ್ಲದೇ ಗಾಳಿ, ಮಳೆ ಲೆಕ್ಕಿಸದೇ ಭಾರತೀಯ ಸೇನೆ ಅವಿರತ ಸೇವೆಗೆ ಸದಾ ಸಿದ್ದವಾಗಿರುತ್ತದೆ ಎಂದು ಸೇನೆ ಪೋಸ್ಟ್ ಮಾಡಿದೆ.
ಭಾರೀ ಮಳೆಯಿಂದಾಗಿ ಈಶಾನ್ಯ ರಾಜ್ಯಗಳ ಹಲವು ಭಾಗಗಳು ಪ್ರವಾಹ ಸ್ಥಿತಿ ಎದುರಿಸುತ್ತಿದೆ. ಪ್ರವಾಹದಿಂದಾಗಿ ಅಸ್ಸಾಂನ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 78,000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ರಸ್ತೆ ಸಾರಿಗೆ ಮತ್ತು ರೈಲು ಮತ್ತು ದೋಣಿ ಸೇವೆಗಳು ಸಹ ಬಾಧಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಅರುಣಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತಗಳಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಶನಿವಾರ ಉತ್ತರ ಸಿಕ್ಕಿಂನ ವಿವಿಧ ಭಾಗಗಳಲ್ಲಿ ಸುಮಾರು 1,500 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.
