ಕೊಚ್ಚಿ:
ಕೇರಳದಲ್ಲಿ ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕೊಚ್ಚಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಕೇವಲ 1 ಗಂಟೆ ಅವಧಿಯಲ್ಲಿ ಬರೊಬ್ಬರಿ 103 ಮಿ.ಮೀ ಮಳೆ ಸುರಿದ ಪರಿಣಾಮ ಭಾರಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ.
ಮುಂದಿನ 24 ಗಂಟೆಗಳಲ್ಲಿ ಕೇರಳದ ಮೇಲೆ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗಿ ಮುಂದುವರಿಯುತ್ತದೆ ಮತ್ತು ಅದೇ ಅವಧಿಯಲ್ಲಿ ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಮಾನ್ಸೂನ್ ಮಳೆ ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ನಡುವೆ ಕೇರಳದ ಕೊಚ್ಚಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಇಲ್ಲಿ ಕೇವಲ 1 ಗಂಟೆ ಅವಧಿಯಲ್ಲಿ ಬರೊಬ್ಬರಿ 103 ಮಿ.ಮೀ ಮಳೆ ಸುರಿದ ಪರಿಣಾಮ ಭಾರಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಮಳೆ ಮಾಪಕದಲ್ಲಿ ಮಂಗಳವಾರ ಬೆಳಿಗ್ಗೆ ಕೇವಲ ಒಂದು ಗಂಟೆಯಲ್ಲಿ ಸುಮಾರು 103 ಮಿಮೀ ಮಳೆ ದಾಖಲಾಗಿದೆ. ಈ ಪರಿ ಮಳೆಗೆ ಮೇಘಸ್ಫೋಟವೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ರಾಜ್ಯದಲ್ಲಿ ಯಾವುದೇ ಮೇಘಸ್ಫೋಟವನ್ನು ಹವಾಮಮಾನ ಇಲಾಖೆ ದೃಢಪಡಿಸಿಲ್ಲವಾದರೂ ಒಂದು ಗಂಟೆಯಲ್ಲಿ 103 ಮಿಮೀ ಮಳೆಯನ್ನು ದಾಖಲಿಸುವುದು ಸಾಮಾನ್ಯವಾಗಿ ಮೇಘ ಸ್ಫೋಟದ ಘಟನೆ ಎಂದು ವರ್ಗೀಕರಿಸುತ್ತದೆ ಎಂದು ಹೇಳಿದೆ.
ಕೊಚ್ಚಿ ಸೇರಿದಂತೆ ಕೇರಳದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಏರ್ಪಟ್ಟಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೋಟಾಯಂ ಜಿಲ್ಲೆಯ ಭರಣಂಙಾನಂ ಬಳಿ ಭೂಕುಸಿತ ಸಂಭವಿಸಿದ್ದು, ಇಲ್ಲಿ ಜೀವಹಾನಿ ಕುರಿತು ವರದಿಯಾಗಿಲ್ಲ. ಇಲ್ಲಿ ಹಲವು ಮನೆಗಳು ಸಂಪೂರ್ಣವಾಗಿ ನಾಶಗೊಂಡಿವೆ.
ಇತ್ತ ತಿರುವನಂತಪುರಂನಲ್ಲಿ, ಸಮುದ್ರದ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ಮುತಲಪೋಳಿ ಬಂದರಿನ ಪ್ರದೇಶದಲ್ಲಿ ಮೀನುಗಾರಿಕಾ ಹಡಗೊಂದು ಮುಳುಗಿ ಅಂಚುತೆಂಗು ಮೂಲದ ಅಬ್ರಹಾಂ (60) ಎಂಬ ಸಾಂಪ್ರದಾಯಿಕ ಮೀನುಗಾರ ಸಾವನ್ನಪ್ಪಿದ್ದಾರೆ.
ನಾಲ್ವರು ಮೀನುಗಾರರನ್ನು ಸಾಗಿಸುತ್ತಿದ್ದ ದೋಣಿ ನೀರಿನ ರಭಸಕ್ಕೆ ಮಗುಚಿ ಬಿದ್ದಿದ್ದು, ಮೂವರನ್ನು ಸ್ಥಳೀಯರು ರಕ್ಷಿಸಿದರೆ, ಅಬ್ರಹಾಂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.