ಬೆಂಗಳೂರು
ವಿಶ್ವವಿದ್ಯಾಲಯದ ಕಚೇರಿ ಅಧೀಕ್ಷಕ ಹುದ್ದೆ ಕೊಡಿಸುವುದಾಗಿ ಇಂಜಿನಿಯರ್ರೊಬ್ಬನಿಂದ 20 ಲಕ್ಷ ರೂ. ಪಡೆದು ಪರಾರಿಯಾಗಿರುವ ವಂಚಕನಿಗಾಗಿ ಹೆಬ್ಬಗೋಡಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ
ಅತ್ತಿಬೆಲೆಯ ಇಂಜಿನಿಯರ್ ಸತೀಶ್ ಕುಮಾರ್ರನ್ನು ವಂಚಿಸಿ 20 ಲಕ್ಷ ಹಣ ಪಡೆದು ಪರಾರಿಯಾಗಿರುವ ಚಳ್ಳಕೆರೆ ಮೂಲದ ಉಲ್ಲಾಳ ನಿವಾಸಿ ಸದರುಲ್ಲಾಖಾನ್ನ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮುಗಿಸಿ ಕೆಲಸ ಹುಡುಕುತ್ತಿದ್ದ ಸತೀಶ್ ತನ್ನ ಸಂಬಂಧಿ ಮಂಜುನಾಥ್ ಎಂಬಾತನ ಬಳಿ ಯಾರಾದರು ಕೆಲಸ ಕೊಡಿಸುವವರ ಪರಿಚಯವಿದ್ದರೆ ಅವರ ಕಡೆಯಿಂದ ಸರ್ಕಾರಿ ಅಥವಾ ಎಂಎನ್ಸಿಯಂತಹ ಕಂಪನಿಗಳಲ್ಲಿ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದರು.
ಕೆಲ ದಿನಗಳ ಬಳಿಕ ಬೆಂಗಳೂರು ಸೆನೆಟ್ ಸದಸ್ಯರಾಗಿರುವ ಸದರುಲ್ಲಾಖಾನ್ ವಿಶ್ವವಿದ್ಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ ಎಂದು ಮಂಜುನಾಥ್ ತಿಳಿಸಿದ್ದರು. ಅದರಂತೆ ಸದರುಲ್ಲಾ ಖಾನ್?ನನ್ನು ಭೇಟಿಯಾದ ಸತೀಶ್ ಕೆಲಸದ ಬಗ್ಗೆ ಕೇಳಿದ್ದರು.
ನಾನು ಸೆನೆಟ್ ಸದಸ್ಯನಾಗಿದ್ದು 20 ಲಕ್ಷ ರೂ. ಕೊಟ್ಟರೆ ಬೆಂಗಳೂರು ವಿವಿಯಲ್ಲಿ ಖಾಲಿ ಇರುವ ಆಫೀಸ್ ಸೂಪರಿಂಟೆಂಡೆಂಟ್ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕೆ ಒಪ್ಪಿದ ಸತೀಶ್ ಮೇ 6ರಂದು ಹೋಟೆಲ್?ನಲ್ಲಿ 20 ಲಕ್ಷ ರೂ.ಗಳನ್ನು ಸದರುಲ್ಲಾ ಖಾನ್ಗೆ ನೀಡಿದ್ದರು. ಸತೀಶ್ ಅವರ ವಿದ್ಯಾಭ್ಯಾಸದ ದಾಖಲಾತಿ ಜೆರಾಕ್ಸ್ ಪ್ರತಿಗಳನ್ನು ಸದರುಲ್ಲಾ ಖಾನ್ ಪಡೆದುಕೊಂಡಿದ್ದನು.
ಸತೀಶ್ ತನ್ನ ಸ್ನೇಹಿತರಾದ ಸುಚೇತ್, ವಿನಯ್ ಹಾಗೂ ಉಪೇಂದ್ರ ಕುಮಾರ್ನನ್ನು ಸದರುಲ್ಲಾ ಖಾನ್ಗೆ ಪರಿಚಯಿಸಿ ನಂತರ ಅವರಿಗೂ ಕೆಲಸದ ಆಮಿಷವೊಡ್ಡಿ ಹಣ ಪಡೆದುಕೊಂಡಿದ್ದ. ಕೆಲಸದ ಆದೇಶ ಪತ್ರ ಅಂಚೆ ಮೂಲಕ ಬರುತ್ತದೆ ಎಂದು ಹೇಳಿದ್ದ. 3 ದಿನಗಳ ನಂತರ ನಾಲ್ವರನ್ನು ಹೋಟೆಲ್ಗೆ ಕರೆಸಿಕೊಂಡ ಸದರುಲ್ಲಾ ಖಾನ್, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಚೇರಿ ಅಧೀಕ್ಷಕ ಹುದ್ದೆಗೆ ನಿಮಗೆ ನೇಮಕಾತಿಯಾಗಿದೆ.
ಜೂ.28ರಂದು ಕರ್ತವ್ಯಕ್ಕೆ ಹೋಗುವಂತೆ ಆದೇಶ ಪತ್ರ ಕೊಟ್ಟಿದ್ದ. ಜೂ.25ರಂದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೋಗಿ ಸತೀಶ್ ಈ ಬಗ್ಗೆ ವಿಚಾರಿಸಿದಾಗ, ಸದರುಲ್ಲಾ ಖಾನ್ ನೀಡಿರುವುದು ನಕಲಿ ಆದೇಶ ಪತ್ರ ಎಂಬುದು ಬೆಳಕಿಗೆ ಬಂದಿದೆ.
ಇದರಿಂದ ಆತಂಕಗೊಂಡ ಸತೀಶ್, ಸದರುಲ್ಲಾಖಾನ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಜು.16ರಂದು ಸತೀಶ್ ಹೆಬ್ಬಗೋಡಿ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದರುಲ್ಲಾಖಾನ್ ಇದೇ ರೀತಿ ಹಲವರಿಗೆ ವಂಚಿಸಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
