ಅಡ್ಡಾದಿಡ್ಡಿ ಪಾರ್ಕಿಂಗ್ : ಸಂಚಾರಕ್ಕೆ ಜನರ ಪರದಾಟ..!!

ತುಮಕೂರು

ವಿಶೇಷ ವರದಿ: ವಿನಯ್ ಎಸ್

      ತುಮಕೂರು ನಗರ ಸ್ಮಾಟ್ ಸಿಟಿ ಆಗುತ್ತಿದೆ. ಆದರೆ ಇಲ್ಲಿನ ಸರ್ಕಾರಿ ಕಚೇರಿಗಳಲ್ಲಿ ವಾಹನ ನಿಲುಗಡೆಯ ತಾಣಗಳೇ ಸ್ಮಾರ್ಟ್ ಆಗಿಲ್ಲ! ಜಿಲ್ಲಾಧಿಕಾರಿ ಕಚೇರಿಯ ಬಳಿ ಪಾರ್ಕಿಂಗ್ ಸಮಸ್ಯೆ ಬಗೆಹರಿದ ಬೆನ್ನಲ್ಲೇ ಜಿಲ್ಲಾಧಿಕಾರಿ ಕಚೇರಿ ಪಾಶ್ರ್ವದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಕಾರ್ಯಾಲಯ, ಅನೌಪಚಾರಿಕ ಪಡಿತರ ಚೀಟಿ ಕಚೇರಿ, ರಾಜ್ಯ ನಿರೀಕ್ಷಕರ ಕಚೇರಿ, ತುಮಕೂರು ಕಂದಾಯ ಇಲಾಖೆ ಪತ್ತಿನ ಸಹಕಾರ ಸಂಘ, ಜನ ಶಿಕ್ಷಣ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಶಾಸಕರ ಕಚೇರಿ, ತಾಲ್ಲೂಕು ಪಂಚಾಯತಿ ಕಾರ್ಯಾಲಯ ಮುಂತಾದ ಕಚೇರಿಗಳಿದ್ದು ಇಲ್ಲಿಗೆ ಪ್ರತಿದಿನ ಸಾವಿರಾರು ಸಾರ್ವಜನಿಕರು ಮತ್ತು ತುಮಕೂರು ತಾಲ್ಲೂಕೂ ಸೇರಿಂತೆ ಜಿಲ್ಲೆಯ ಹತ್ತೂ ತಾಲ್ಲೂಕು ಕೇಂದ್ರ ಕಚೇರಿಗಳಿಂದ ಅಧಿಕಾರಿಗಳು ಪ್ರತಿನಿತ್ಯ ಭೇಟಿ ನೀಡುತ್ತಾರೆ.

       ಇಲ್ಲಿಗೆ ಬಂದ ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಒಂದು ಶಾಕ್ ಕಾದಿರುತ್ತದೆ. ಹತ್ತಾರು ಸಮಸ್ಯೆಗಳನ್ನು ಒತ್ತು ತರುವ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ಇಲ್ಲಿನ ಪಾರ್ಕಿಂಗ್ ವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದ್ದು ಈ ವ್ಯವಸ್ಥೆ ಬಗ್ಗೆ ಸಾರ್ವಜನಿಕರು ಮತ್ತು ಅಧಿಕಾರಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.

ವಾಹನ ದಟ್ಟಣೆ :

      ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದ ರಸ್ತೆಯು ಬಹಳ ಚಿಕ್ಕದಾಗಿದ್ದು ಇಲ್ಲಿ ಎರಡಕ್ಕಿಂತ ಹೆಚ್ಚು ವಾಹನಗಳು ಸಂಚಾರಿಸಲು ಸಾಧ್ಯವೇ ಇಲ್ಲ. ಅಪ್ಪಿ-ತಪ್ಪಿ ಎರಡು ಕಾರುಗಳು ಎದುರಾದರೆ ಆ ವಾಹನಗಳ ಹಿಂದೆ ದ್ವಿಚಕ್ರ ವಾಹನಗಳು ಜಮಾಯಿಸಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತ್ತಿದೆ. ಕೆಲವೊಮ್ಮೆ ವಾಹನ ಸವಾರರು ವಾಗ್ವಾದಕ್ಕಿಳಿಯುವುದೂ ಉಂಟು. ಈ ಸಮಸ್ಯೆ ಮುಗಿದು ಮರಳಿ ಯಥಾ ಸ್ಥಿತಿಗೆ ಮರಳಬೇಕು ಎಂದರೆ ಹದಿನೈದರಿಂದ ಇಪ್ಪತ್ತು ನಿಮಿಷಗಳು ಬೇಕಾಗುತ್ತದೆ.

ಮನಸೋ ಇಚ್ಛೆ ವಾಹನ ನಿಲುಗಡೆ :

      ದಿನ ನಿತ್ಯ ಕಚೇರಿಗಳಿಗೆ ಬರುವ ಸಾರ್ವಜನಿಕರು ವಾಹನಗಳನ್ನು ನಿಲುಗಡೆ ಮಾಡುವಾಗ ಮನ ಬಂದಂತೆ ಪಾರ್ಕಿಂಗ್ ಮಾಡುತ್ತಾರೆ. ವ್ಯವಸ್ಥಿತವಾಗಿ ಪಾರ್ಕ್ ಮಾಡಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲದೆ ಮನಸ್ಸಿಗೆ ಬಂದಂತೆ ವಾಹನಗಳನ್ನು ನಿಲ್ಲಿಸಿ, ತಮ್ಮ ಕೆಲಸಗಳಿಗೆ ತೆರುಳುವುದರಿಂದ ನಂತರ ಬಂದವರಿಗೆ ಗಾಡಿಗಳನ್ನು ಪಾರ್ಕ್ ಮಾಡುವುದೇ ಒಂದು ದುಸ್ಸಾಹಸದ ಕೆಲಸವಾಗಿದೆ.

ಇದು ಒಂದು ಕಚೇರಿಯ ಸಮಸ್ಯೆಯಲ್ಲ:

       ವಾಹನ ನಿಲುಗಡೆಯ ಸಮಸ್ಯೆ ಯಾವುದಾದರು ಒಂದು ಕಚೇರಿ ಬಳಿಯದ್ದಾದರೆ ಮತ್ತೊಂದು ಕಚೇರಿ ಬಳಿ ವಾಹನಗಳನ್ನು ನಿಲ್ಲಿಸಲು ಸಾರ್ವಜನಿಕರಿಗೆ ತಿಳಿಸಬಹುದು ಮತ್ತು ಅದನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಬಹುದು. ಆದರೆ ಇಲ್ಲಿ ವಿವಿಧ ಇಲಾಖೆಗಳ ಸುಮಾರು ಎಂಟಕ್ಕೂ ಅಧಿಕ ಕಚೇರಿಗಳಿದ್ದು, ಒಂದಕ್ಕೂ ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲವಾದ್ದರಿಂದ ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಪಾರ್ಕಿಂಗ್ ದೈನಂದಿನ ತೊಂದರೆಯಾಗಿ ಪರಿಣಮಿಸಿದೆ.

ತಂಬಾಕು ಮತ್ತು ಸಿಗರೇಟ್ ಪ್ಯಾಕ್‍ಗಳು:

       ಜಿಲ್ಲಾಧಿಕಾರಗಳ ಕಚೇರಿಯ ಹಿಂಭಾಗದ ಕಚೇರಿಗಳ ಆವರಣದಲ್ಲಿ ಎತ್ತ ಕಣ್ಣಾಡಿಸಿದರೂ ವಿಮಲ್, ಸೂಪರ್, ಸ್ಟಾರ್, ಮಧು ಮಸಾಲದ ಖಾಲಿ ಪ್ಯಾಕ್‍ಗಳು, ಸಿಗರೇಟ್ ಪ್ಯಾಕ್‍ಗಳು, ಸಿಗರೇಟ್ ತುಂಡುಗಳು ಕಾಣಸಿಗುತ್ತವೆ. ಇದು ಸರ್ಕಾರಿ ಕಚೇರಿಗಳು ಇರುವ ಜಾಗವೋ, ಇಲ್ಲ ಸಂತೆ ಮಾರುಕಟ್ಟೆಯೋ ಎಂಬ ಭಾವನೆ ಕಾಡುವುದರಲ್ಲಿ ಎರಡು ಮಾತಿಲ್ಲ.

ಸದ ರಾಶಿ :

        ಜನ ಶಿಕ್ಷಣ ಇಲಾಖೆ, ಅನೌಪಚಾರಿಕ ಪಡಿತರ ಚೀಟಿ ಕಚೇರಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪಕ್ಕದಲ್ಲಿ ರಾಶಿ ರಾಶಿ ಕಸ ಬಿದ್ದಿದೆ. ಈ ಕಸದ ರಾಶಿ ಅಕ್ಕ-ಪಕ್ಕದಲ್ಲಿ ಅನಧಿಕೃತ ಅಂಗಡಿಗಳಿದ್ದು, ಅಂಗಡಿ ಮಾಲೀಕರು ಮತ್ತು ಡಿಟಿಪಿ ಆಪರೇಟರ್‍ಗಳು ಪ್ರತಿ ನಿತ್ಯ ಸಂಗ್ರಹವಾದ ತ್ಯಾಜ್ಯಗಳನ್ನು ತಂದು ಇಲ್ಲಿಗೆ ಹಾಕುತ್ತಾರೆ. ಆದ್ದರಿಂದ ಇಲ್ಲಿ ಕಸದ ರಾಶಿಯೇ ಆಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಈ ಕಸದ ರಾಶಿಯನ್ನು ಖಾಲಿ ಮಾಡುವ ಗೋಜಿಗೆ ಹೋಗಿಲ್ಲ. ಈ ಕಸದ ರಾಶಿಯಿಂದಾಗಿ ನಾಯಿಗಳ ಹಾವಳಿ ಕೂಡ ಒಂದು ಸಮಸ್ಯೆಯಾಗಿದೆ ಪರಿಣಮಿಸಿದೆ.

ಅಧಿಕಾರಿಗಳಿಗೂ ನಿಗದಿತ ಪಾರ್ಕಿಂಗ್ ಇಲ್ಲ :

         ಇಲ್ಲಿನ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೂ ಯಾವುದೇ ರೀತಿಯ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ಅವರು ಕೆಲಸ ಮಾಡುವ ಕಚೇರಿಗಳ ಮುಂಭಾಗದಲ್ಲಿ ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿರುತ್ತಾರೆ. ಮೊದಲೇ ಈ ರಸ್ತೆ ತುಂಬಾ ಕಿರಿದಾಗಿರುವುದರಿಂದ ಅಧಿಕಾರಿಗಳು ತಮ್ಮ ವಾಹನಗಳನ್ನು ಮತ್ತು ಕಚೇರಿಗೆ ಸಂಬಂಧಿಸಿದ ವಾಹನಗಳನ್ನು ಕಚೇರಿಗಳ ಎದುರಿನಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.

ಅಧಿಕಾರಿಗಳ ಕೆಲಸಕ್ಕೂ ಕಿರಿಕಿರಿ :

        ಸಾರ್ವಜನಿಕರು ತಮ್ಮ ವಾಹನಗಳನ್ನು ಕಚೇರಿಗಳ ಮುಂಭಾಗದಲ್ಲೇ ಪಾರ್ಕ್ ಮಾಡುವುದರಿಂದ, ಅಧಿಕಾರಿಗಳು ಮಧ್ಯಾಹ್ನದ ಊಟಕ್ಕೆ ತೆರಳುವಾಗ ತಮ್ಮ ವಾಹನಗಳನ್ನು ಹಿಂತೆಗೆಯಲು ಪಡಿಪಾಟಲು ಪಡಬೇಕು ಮತ್ತು ಮಧ್ಯಾಹ್ನದ ಊಟ ಮುಗಿಸಿಕೊಂಡು ಮರಳಿ ಬಂದ ನಂತರ ಗಾಡಿಗಳನ್ನು ಪಾರ್ಕ್ ಮಾಡಲು ಮತ್ತೆ ಪರದಾಡುವ ಪರಿಸ್ಥಿತಿ ಇದೆ. ಅಧಿಕಾರಿಗಳು ತಮ್ಮ ವಾಹನಗಳನ್ನು ಪಾರ್ಕ್ ಮಾಡುವುದಲ್ಲೇ ಸಮಯ ಹಾಳು ಮಾಡಿಕೊಂಡರೆ, ಕಚೇರಿಯ ಕೆಲಸ ಮಾಡುವುದು ಯಾವಾಗ ಎಂಬ ಪ್ರಶ್ನೆ ಮೂಡುತ್ತದೆ. ಅಧಿಕಾರಿಗಳು ಸಾರ್ವಜನಿಕರಿಗೆ ಇಲ್ಲಿ ಪಾರ್ಕ್ ಮಾಡಬೇಡಿ ಎಂದರೆ ಸಾರ್ವಜನಿಕರು ಗಾಡಿ ಪಾರ್ಕ್ ಮಾಡಲು ಜಾಗ ಎಲ್ಲಿದೆ ಎಂದು ಅಧಿಕಾರಿಗಳನ್ನು ಕೇಳುವ ಪರಿಸ್ಥಿತಿ ಎದುರಾಗಿದೆ.

 ಪಾರ್ಕಿಂಗ್‍ಗೆ ಬೇಸತ್ತು ಸಸಿ ನೆಟ್ಟ ಅಧಿಕಾರಿಗಳು :

      ಕಂದಾಯ ಇಲಾಖಾ ಪತ್ತಿನ ಸಹಕಾರ ಸಂಘ ಮತ್ತು ರಾಜಸ್ವ ನಿರೀಕ್ಷಕರ ಕಚೇರಿಯ ಅಧಿಕಾರಿಗಳು ನೋ ಪಾರ್ಕಿಂಗ್ ಫಲಕ ಹಾಕಿದರೂ ಏನೂ ಪ್ರಯೋಜನವಾಗದ ಕಾರಣ ತಮ್ಮ ಕಚೇರಿಗಳ ಮುಂದೆ ತಾವೇ ಸಸಿಗಳನ್ನು ನೆಟ್ಟು ಅವುಗಳನ್ನು ತೋರಿಸುತ್ತಿರುವುದು ಒಂದು ಸಂತಸದ ಸಂಗತಿಯಾಗಿದೆ.

      ಈ ಜಾಗದಲ್ಲಿ ಪಾರ್ಕಿಂಗ್ ಸಮಸ್ಯೆ ಒಂದು ಪೆಡಂಭೂತವಾಗಿದೆ. ಕೆಲವೊಮ್ಮೆ ಜಿಲ್ಲಾಧಿಕಾರಿಗಳ ಕಚೇರಿಗೆ ಬರುವ ಸಾರ್ವಜನಿಕರು ಈ ಜಾಗದಲ್ಲಿಯೇ ದ್ವಿಚಕ್ರವಾಹನಗಳನ್ನು ಪಾರ್ಕ್ ಮಾಡುವುದರಿಂದ ಈ ಸಮಸ್ಯೆ ಗಂಭೀರವಾದ ಸಮಸ್ಯೆಯಾಗಿ ಪರಿಣಿಮಿಸಿದೆ .ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯ ಆವರಣದಲ್ಲಿನ ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸಿದಂತೆ, ಇಲ್ಲಿನ ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸಿದರೆ ಸಾರ್ವಜನಿಕರಿಗೂ ದೂರದ ತಾಲ್ಲೂಕುಗಳಿಂದ ಬರುವ ಅಧಿಕಾರಿಗಳಿಗೂ ಕೊಂಚ ಮಟ್ಟಿಗಾದರು ನಿರಾಳವಾಗುತ್ತದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link