ಬೆಂಗಳೂರು
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಸುಡುಗಾಡಿನಲ್ಲಿ ಅಲೆಯುವ ಸ್ಥಿತಿ ಬರುತ್ತದೆ.ಹಾಗೆಯೇ ರಾಜಕೀಯವಾಗಿ ಸಮಾಧಿ ಸ್ಥಿತಿಗೆ ತಲುಪುತ್ತಾರೆ ಎಂದು ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ ಬೆಳವಣಿಗೆ ವಿಧಾನಸಭೆಯಲ್ಲಿಂದು ನಡೆಯಿತು.
ವಿಶ್ವಾಸಮತ ಕೋರಿ ಸಿಎಂ ಕುಮಾರಸ್ವಾಮಿ ಮಂಡಿಸಿದ ನಿರ್ಣಯದ ಮೇಲೆ ಇಂದು ನಡೆದ ಚರ್ಚೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್,ಮಾಜಿ ಸಿಎಂ ಸಿದ್ಧರಾಮಯ್ಯ,ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ,ಬಿಜೆಪಿಯ ಜಗದೀಶ್ ಶೆಟ್ಟರ್,ಮಾಧುಸ್ವಾಮಿ ಪಾಲ್ಗೊಂಡು ಈ ಕುರಿತು ಸುಧೀರ್ಘವಾಗಿ ಮಾತನಾಡಿದರು.
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ:ರಾಜಕಾರಣಿಗೆ ಧರ್ಮರಾಯನ ನ್ಯಾಯ,ಕರ್ಣನ ದಾನ ಗುಣ,ಭೀಮನ ಛಲ,ವಿದುರನ ನೀತಿ ಇರಬೇಕು.ಈ ವಿಷಯದಲ್ಲಿ ನಾನು ಯಡಿಯೂರಪ್ಪ ಅವರನ್ನು ಮೆಚ್ಚುತ್ತೇನೆ ಎಂದು ಟಾಂಗ್ ನೀಡಿದರು.ಈ ಸರ್ಕಾರ ಬಂದ ನಂತರ ಸತತವಾಗಿ ಬೀಳಿಸಲು ಯತ್ನಿಸಿದ ಅವರು ಆರು ಬಾರಿ ಇದರಲ್ಲಿ ವಿಪಲರಾದರೂ ಏಳನೇ ಬಾರಿ ನಮ್ಮ ಕಡೆಯ ಹದಿನೈದು ಶಾಸಕರನ್ನು ಅವರ ಕಡೆ ಎತ್ತಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.ಆದರೆ ಇವರನ್ನು ನಂಬಿಕೊಂಡು ಹೋಗಿರುವ ನಮ್ಮ ಕಡೆಯ ಹದಿನೈದು ಶಾಸಕರು ದಾರಿ ತಪ್ಪಿದ್ದಾರೆ.ಅಷ್ಟೇ ಅಲ್ಲ,ರಾಜಕೀಯವಾಗಿ ಸಮಾಧಿಯಾಗುತ್ತಾರೆ ಎಂದು ನೇರ ಎಚ್ಚರಿಕೆ ನೀಡಿದರು.
ಬಿಜೆಪಿಯವರು ಅವರಿಗೆ ಮಂಗನ ಟೋಪಿ ಹಾಕಿದ್ದಾರೆ.ಈ ವಿಷಯವನ್ನು ನಾನು ಪದೇ ಪದೇ ಹೇಳಿದರೂ ಶಾಸಕರಿಗೆ ಅರ್ಥವಾಗುತ್ತಿಲ್ಲ.ಸಂವಿಧಾನದ ಹತ್ತನೇ ಪರಿಚ್ಚೇದದ ಪ್ರಕಾರ ಇವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹರಾಗುತ್ತಾರೆ ಎಂದರು.ಮಾಜಿ ಸಿಎಂ ಸಿದ್ಧರಾಮಯ್ಯ ಮಾತನಾಡಿ,ಪಕ್ಷದ ಶಾಸಕಾಂಗ ನಾಯಕನಾಗಿ ನಾನು ನೀಡಿದ ವಿಪ್‍ಗೆ ಪರಮಾಧಿಕಾರವಿದೆ.ಶಾಸಕರು ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಹಾಜರಿರುವಂತೆ ಒತ್ತಾಯ ಮಾಡಬಾರದು ಎಂದು ನ್ಯಾಯಾಲಯ ಹೇಳಿದೆಯೇ ವಿನ: ಅವರಿಗೆ ವಿಪ್ ನೀಡುವ ಕುರಿತು ನನಗಿರುವ ಅಧಿಕಾರವನ್ನು ಪ್ರಶ್ನಿಸಿಲ್ಲ ಎಂದರು.
ಇದೇ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಸೋಮವಾರ ರೂಲಿಂಗ್ ನೀಡಿದ್ದಾರೆ.ಆದರೆ ನಮಗಿರುವ ನೋವೆಂದರೆ ನಮ್ಮ ಜತೆಗಿದ್ದವರು ಹೀಗೆ ಬಿಜೆಪಿಯವರು ಹಾಕಿದ ಟೋಪಿಗೆ ಮರುಳಾಗಿ ಕಠಿಣ ಕ್ರಮಕ್ಕೆ ಗುರಿಯಾಗುತ್ತಾರೆ ಎಂಬ ಬಗ್ಗೆ ನೋವಿದೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ:ಸಂವಿಧಾನದ ಹತ್ತನೇ ಪರಿಚ್ಚೇದದ 21(ಎ) ಹಾಗೂ 21(ಬಿ) ಕುರಿತು ವಿವರ ನೀಡಿದರಲ್ಲದೆ ವಿಪ್ ಉಲ್ಲಂಘಿಸಲಿ,ಬಿಡಲಿ,ಆದರೂ ಶಾಸಕರು ಪಕ್ಷದಿಂದ ದೂರ ಹೋಗುತ್ತಿರುವ ಕುರಿತು,ಬೇರೆ ಪಕ್ಷದ ಜತೆ ಸಂಬಂಧ ಹೊಂದಿರುವ ಕುರಿತು ಮಾಹಿತಿ ಇದ್ದರೆ ನಿಸ್ಸಂಶಯವಾಗಿ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು ಎಂದರು.
ಈ ವಿಷಯದಲ್ಲಿ ನಮ್ಮಿಂದ ದೂರವಾಗಿರುವ ಸಹೋದರರಿಗೆ ಬಿಜೆಪಿಯವರು ತಪ್ಪು ಮಾಹಿತಿ ನೀಡಿದ್ದಾರೆ.ಆದರೆ ತಮಿಳ್ನಾಡಿನಲ್ಲಿ ಹದಿನೆಂಟು ಶಾಸಕರ ವಿರುದ್ಧ ಸ್ಪೀಕರ್ ಸಂವಿಧಾನದ ಹತ್ತನೇ ಪರಿಚ್ಚೇದದಡಿ ಕ್ರಮ ಕೈಗೊಂಡಿದ್ದಾರೆ.ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿಗಳೂ ಆಗಿರುವ ವೆಂಕಯ್ಯ ನಾಯ್ಡು ಅವರು ಶರದ್ ಪವಾರ್ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ ಎಂದು ವಿವರ ನೀಡಿದರು.
ಈ ಹಂತದಲ್ಲಿ ಮಾತನಾಡಿದ ಮಾಜಿ ಸಿಎಂ,ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು,ಒಂದೊಂದು ಪ್ರಕರಣದಲ್ಲಿ ಬೇರೆ ಬೇರೆ ವಿಷಯಗಳು ಪ್ರಮುಖವಾಗುತ್ತವೆ.ಕರ್ನಾಟಕದ ವಿಷಯದಲ್ಲಿ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಲು ಬರುವುದಿಲ್ಲ ಎಂದರು.ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಮಾತನಾಡಿ,ಯಾವ ಕಾರಣಕ್ಕೂ ಶಾಸಕರನ್ನು ಅನರ್ಹಗೊಳಿಸಲು ಬರುವುದಿಲ್ಲ.ಯಾಕೆಂದರೆ ಸುಪ್ರೀಂಕೋರ್ಟ್ ಅವರಿಗೆ ರಕ್ಷಣೆ ನೀಡಿದೆ ಎಂದು ವಿವರ ನೀಡಿದರು.
ವಿಶ್ವಾಸ ಮತ ಯಾಚನೆ ಮಾಡುವ ಸಂದರ್ಭದಲ್ಲಿ ಸದನಕ್ಕೆ ಬರುವಂತೆ ಅವರನ್ನು ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿರುವುದರಿಂದ ಶಾಸಕಾಂಗ ನಾಯಕರಾಗಿ ಸಿದ್ಧರಾಮಯ್ಯ ಅವರಾಗಲೀ,ಕುಮಾರಸ್ವಾಮಿ ಅವರಾಗಲೀ ನೀಡಿದ ವಿಪ್‍ಗೆ ಕವಡೆ ಕಾಸಿನ ಬೆಲೆಯಿಲ್ಲ ಎಂದು ಹೇಳಿದರು.
ಮಾಧುಸ್ವಾಮಿ ಅವರು ಮಾತನಾಡಿ,ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವ ಮುನ್ನ ಅವರನ್ನು ಅನರ್ಹಗೊಳಿಸಬಾರದು ಎಂದು ನ್ಯಾಯಾಲಯ ಹೇಳಿದೆ.ಹೀಗಾಗಿ ನೀವು ರಾಜೀನಾಮೆ ನೀಡಿದ ಶಾಸಕರನ್ನು ಹೆದರಿಸಲು ಏನೇ ಪ್ರಯತ್ನ ಮಾಡಿದರೂ ಅದು ಸಫಲವಾಗುವುದಿಲ್ಲ ಎಂದು ಹೇಳಿದರು.ಈ ಹಂತದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ:ಸಂವಿಧಾನದ ಹತ್ತನೇ ಪರಿಚ್ಚೇದ ಸ್ಪಷ್ಟವಾಗಿದೆ.ಅದರಡಿ ಸಿಲುಕುವ ಈ ಶಾಸಕರು ನಿಶ್ಚಿತವಾಗಿ ಸುಡುಗಾಡಿನಲ್ಲಿ ಅಲೆಯುವ ಸ್ಥಿತಿ ಬರುತ್ತದೆ ಎಂದು ಹೇಳಿದರು.
ಎಷ್ಟೇ ಆದರೂ ಅವರು ನಮ್ಮ ಸಹೋದರರು.ನಮ್ಮ ಜತೆ ಒಡನಾಡಿದವರು.ಒಂದೇ ಕುಟುಂಬದವರಿಗೆ ನೋವಾದಾಗ ಹೇಗೆ ಉಳಿದವರಿಗೆ ನೋವಾಗುತ್ತದೋ?ಹಾಗೆಯೇ ನಮಗೂ ನೋವಾಗುತ್ತದೆ.
ಲೋಕಸಭಾ ಚುನಾವಣೆಯಲ್ಲಿ ನನಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಆಸಕ್ತಿ ಇರಲಿಲ್ಲ.ಹಾಗೆಯೇ ಯಾವ ಕಾರಣಕ್ಕೂ ಅಭ್ಯರ್ಥಿಯಾಗಿ ನನ್ನ ಹೆಸರು ಸೂಚಿಸಬಾರದು ಎಂದು ಕ್ಷೇತ್ರದ ವ್ಯಾಪ್ತಿಯ ಮೂವರು ಶಾಸಕರಿಗೆ ನಾನು ಹೇಳಿದ್ದೆ .ಆದರೆ ಇವತ್ತು ಬಿಜೆಪಿಯ ಮಾತಿಗೆ ಮರುಳಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಭೈರತಿ ಬಸವರಾಜ್,ಕೆ.ಗೋಪಾಲಯ್ಯ ಹಾಗೂ ಎಸ್.ಟಿ.ಸೋಮಶೇಖರ್ ಅವರುಗಳು ನನಗೆ ಬಲವಂತ ಮಾಡಿದರು.ನೀವಲ್ಲದೆ ಬೇರೆ ಯಾರೂ ನಮ್ಮ ಅಭ್ಯರ್ಥಿಯಾಗಲು ಸಾಧ್ಯವಿಲ್ಲ ಎಂದರು.
ಆದರೆ ನನ್ನ ಪತ್ನಿ,ತಾಯಿ,ಕುಟುಂಬ ವರ್ಗ ಚುನಾವಣೆಗೆ ನಾನು ನಿಲ್ಲುವ ವಿಷಯದಲ್ಲಿ ಒಲವು ಹೊಂದಿರಲಿಲ್ಲ.ಆದರೆ ಇವರ ಮಾತಿಗೆ ಕಟ್ಟು ಬಿದ್ದು ನಾನು ಚುನಾವಣೆಗೆ ಸ್ಪರ್ಧಿಸಿದೆ.ಚುನಾವಣೆಯಲ್ಲಿ ಇವರೆಲ್ಲರ ಕ್ಷೇತ್ರಗಳಲ್ಲಿ ತಲಾ ಐವತ್ತು ಸಾವಿರದಷ್ಟು ಮತ ಕಡಿಮೆ ಬಂತು.ಆಗ ಇವರೆಲ್ಲ ಚುನಾವಣೆಗೆ ಏನು ಮಾಡಿದರು?ಎಂಬುದನ್ನು ನಾನು ಹೇಳುವುದಿಲ್ಲ.ಆದರೆ ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ನಾನು ಸಾಲಗಾರನಾದೆ.ಹೀಗೆ ನನ್ನನ್ನು ಸಾಲಗಾರನನ್ನಾಗಿಸಿ,ತಾವು ಕೂಡಾ ಪಕ್ಷ ಬಿಟ್ಟು ಹೋದರೆ ಆ ನೋವನ್ನು ಸಹಿಸಿಕೊಳ್ಳುವುದು ಹೇಗೆ?ಎಂದು ಪ್ರಶ್ನಿಸಿದರು.