ಹಾವೇರಿ
ನೀರು ಮನುಷ್ಯನಿಗೆ ರಕ್ತದಷ್ಟೇ ಮಹತ್ವ, ಅಮೃತಕ್ಕೆ ಸಮಾನವಾದ ನೀರನ್ನು ಸ್ವೇಚ್ಛವಾಗಿ ಬಳಸದೇ ಮಿತವಾಗಿ ಬಳಕೆಮಾಡದಿದ್ದರೆ ಭವಿಷ್ಯದ ಪೀಳಿಗೆ ನೀರಿಗಾಗಿ ತೀವ್ರ ಸಂಕಷ್ಟ ಎದುರಿಸಬೇಕಾದೀತು ಎಂದು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಹೇಳಿದರು.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಜಲಶಕ್ತಿ ಅಭಿಯಾನದಡಿ ಕೇಂದ್ರದ ನಿಯೋಗದೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಲಶಕ್ತಿ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ, ಜಲ ಮರುಪೂರಣ ಹಾಗೂ ಜಲವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ರಾಜ್ಯ ಸರ್ಕಾರವು ಕಳೆದ ಒಂದು ವರ್ಷದಿಂದಲೇ ಕರ್ನಾಟಕದಲ್ಲಿ ಜಲಮೂಲಗಳ ರಕ್ಷಣೆ ಹಾಗೂ ಜಲವೃದ್ಧಿಸುವ ಮತ್ತು ಮಿತ ಬಳಕೆ ಕುರಿತಂತೆ ಜಾಗೃತಿ ಮೂಡಿಸಲು ಜಲಾಮೃತ ಯೋಜನೆಗಳನ್ನು ರೂಪಿಸಿದೆ. ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸಮಪರ್ಕವಾಗಿ ಅನುಷ್ಠಾನಗೊಳ್ಳಬೇಕು. ನೀರಿನ ಅಭಾವವನ್ನು ಎದುರಿಸುವ ಪ್ರದೇಶದಲ್ಲಿ ಆದ್ಯತೆಯ ಮೇರೆಗೆ ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಒತ್ತು ನೀಡಬೇಕೆಂದು ಹೇಳಿದರು.
ಜಲಶಕ್ತಿ ಯೋಜನೆಯಡಿ ರಾಣೇಬೆನ್ನೂರ ತಾಲೂಕನ್ನು ಪೈಲೆಟ್ ತಾಲೂಕಾಗಿ ಆಯ್ಕೆ ಮಾಡಲಾಗಿದೆ. ಆದರೆ ಜಿಲ್ಲೆಯ ಅತ್ಯಂತ ಬರಪೀಡಿತ ಒಣ ಭೂಮಿ ಹೊಂದಿರುವ ಎತ್ತರ ಭೂ ಪ್ರದೇಶವಾಗಿರುವ ಬ್ಯಾಡಗಿ ತಾಲೂಕನ್ನು ಜಲಶಕ್ತಿ ಯೋಜನೆಗೆ ಅಳವಡಿಸಲು ಕೇಂದ್ರದ ಜಲಶಕ್ತಿ ಅಭಿಯಾನದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೃಷಿ ಉತ್ಪಾದನೆ, ಬೀಜೋತ್ಪಾದನೆಯಲ್ಲಿ ಏಷ್ಯಾದಲ್ಲೇ ಮುಂಚೂಣಿಯಲ್ಲಿರುವ ಬ್ಯಾಡಗಿ ತಾಲೂಕು ನೀರಿನ ಕೊರತೆಯಿಂದ, ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ತಾಲೂಕಿನಲ್ಲಿ 300 ಕೆರೆಗಳಿದ್ದರೂ ತುಂಗಭದ್ರಾ ಮತ್ತು ವರದಾ ನದಿಯಿಂದ ನೀರು ತುಂಬಿಸುವ ಕೆಲಸವಾಗಬೇಕಾಗಿದೆ. ಕೇಂದ್ರ ಜಲಶಕ್ತಿ ಯೋಜನೆಯಡಿ ಬ್ಯಾಡಗಿ ತಾಲೂಕನ್ನು ಒಳಪಡಿಸಿದರೆ ತಾಲೂಕಿನ ಕೆರೆಗಳನ್ನು ತುಂಬಲು ಅನುಕೂಲವಾಗಲಿದೆ. ಇದರಿಂದ ಜಲಶಕ್ತಿ ವೃದ್ಧಿಯಾಗಲಿದೆ. ಈಗಾಗಲೇ ಪೈಲೆಟ್ ಯೋಜನೆಯಾಗಿ 367 ಕೋಟಿ ರೂ.ಗಳ ವೆಚ್ಚದಲ್ಲಿ ಬ್ಯಾಡಗಿ ಕೆರೆ ತುಂಬಿಸಲು ವಿಸ್ತೃತ ಯೋಜನೆಯನ್ನು ತಯಾರಿಸಿ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಜಲಶಕ್ತಿ ಅಭಿಯಾನದ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಜಿಲ್ಲೆಗೆ ಆಗಮಿಸಿರುವ ಕೇಂದ್ರ ಗಣಿ ಮಂತ್ರಾಲಯದ ಉಪ ಮಹಾ ನಿರ್ದೇಶಕರಾದ ಅನುಪಮಾ ಲಹರಿ ಅವರು ಮಾತನಾಡಿ, ಭೂಮಿ ಮೇಲೆ ಅತ್ಯಂತ ಬೆಲೆಬಾಳುವ ವಸ್ತು ಎಂದರೆ ನೀರು. ಇದು ಬರಿದಾದರೆ ಮನುಕುಲದ ಬದುಕು ಬರಡಾಗುತ್ತದೆ. ಮಳೆ ಬೀಳುವ ಸಮಯದ ವ್ಯತ್ಯಯ, ಮಳೆಯ ಕೊರತೆಯ ಕಾರಣ ನೀರಿನ ಬೃಹದಾಕಾರದ ಸಮಸ್ಯೆ ಎದುರಾಗಿದೆ.
ಈ ಕಾರಣದಿಂದ ಕೇಂದ್ರ ಸರ್ಕಾರ ಜಲಶಕ್ತಿ ಸಂರಕ್ಷಣಾ ಅಭಿಯಾನವನ್ನು ಆರಂಭಿಸಿದೆ. ಜಲ ರಕ್ಷಣೆ, ಮಳೆ ನೀರು ಕೊಯ್ಲು, ಭೂಮಿಯಲ್ಲಿ ಮಳೆ ನೀರನ್ನು ಇಂಗಿಸುವುದು, ಜಲಮೂಲಗಳ ಪುನಶ್ಚೇತನ, ನೀರಿನ ಮಿತ ಬಳಕೆ ಕುರಿತಂತೆ ದೇಶಾದ್ಯಂತ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದೇಶದಲ್ಲೇ ಕಡಿಮೆ ಮಳೆ ಬೀಳುವ ಹಾಗೂ ಬರ ಪೀಡಿತ ರಾಜ್ಯಗಳಲ್ಲಿ ಎರಡನೇ ಸ್ಥಾನ ಕರ್ನಾಟಕ ರಾಜ್ಯಕ್ಕಿದೆ. ಬಹಳಷ್ಟು ಖುಷಿ ಸಂಗತಿ ಎಂದರೆ ನೀರಿನ ಜಾಗೃತಿ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸುವ ಮೊದಲೇ ಕರ್ನಾಟಕ ರಾಜ್ಯದಲ್ಲಿ ಜಲಾಮೃತ ಕಾರ್ಯಕ್ರಮಗಳ ಮೂಲಕ ಜಲಮೂಲಗಳ ಪುನಶ್ಚೇತನ ಹಾಗೂ ಜಲರಕ್ಷಣೆಯ ಜಾಗೃತಿ ಆರಂಭಿಸಿರುವುದು ಸಂತೋಷದಾಯಕ.
ದೇಶದ 252 ತಾಲೂಕುಗಳನ್ನು ಆಯ್ಕೆಮಾಡಿ ನೀರು ಸಂರಕ್ಷಣೆ, ನೀರಿನ ಮಿತ ಬಳಕೆ ಕುರಿತಂತೆ ಸರ್ಕಾರೇತರ ಸ್ವಯಂ ಸೇವಾ ಸಂಘಗಳು, ರೈತರು, ರೈತರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಹಾಗೂ ಅನುಷ್ಠಾನಗೊಂಡಿರುವ ಜಲರಕ್ಷಣೆ ಮಾದರಿಗಳನ್ನು ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಜಲಶಕ್ತಿ ಯೋಜನೆಯನ್ನು ರೂಪಿಸಿ ಅತ್ಯಂತ ಕಡಿಮೆ ಮಳೆ ಬೀಳುವ ಅನಿಶ್ಚಿತ ಮಳೆಯಾಗುವ ಹಾಗೂ ಅಂತರ್ಜಲ ಕಡಿಮೆ ಇರುವ ದೇಶದ 252 ತಾಲೂಕುಗಳನ್ನು ಆಯ್ಕೆಮಾಡಿ ಜಲ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದೆ. ಜಿಲ್ಲೆಯ ರಾಣೇಬೆನ್ನೂರ ತಾಲೂಕನ್ನು ಜಲಶಕ್ತಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆಯ್ಕೆಮಾಡಿಕೊಳ್ಳಲಾಗಿದೆ.
ಕರ್ನಾಟಕ ಸರ್ಕಾರದ ಜಲಾಮೃತ ಯೋಜನೆಯ ಮಾದರಿಯಲ್ಲಿ ಜಲಶಕ್ತಿ ಯೋಜನೆ ರೂಪಿತವಾಗಿದೆ. ನೀರಿನ ಪ್ರಜ್ಞಾವಂತ ಬಳಕೆ, ಮಿತ ಬಳಕೆ, ಜಲ ಸಾಕ್ಷರತೆ, ಮಳೆ ಆಕರ್ಷಣೆಗೆ ಹಸರೀಕರಣ, ಗಿಡನೆಡುವ ಕಾರ್ಯಕ್ರಮ, ಮಳೆ ಕೊಯ್ಲು, ಕೆರೆ-ಕಟ್ಟೆ, ಹಳ್ಳ-ಕೊಳ್ಳ, ಬಾವಿಗಳ ಜಲಮರುಪೂರ್ಣದಂತ ಕಾರ್ಯಕ್ರಮಗಳನ್ನು ಉತ್ತೇಜಿಸುವ ಕಾರ್ಯಕ್ರಮ ಇದಾಗಿದೆ. ಇಂದು ರೈತರ ಸ್ವಯಂ ಸೇವಾ ಸಂಸ್ಥೆಗಳ ಸಲಹೆಗಳನ್ನು ಸ್ವೀಕರಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಂವಾದ:
ಜಲಶಕ್ತಿ ವೃದ್ಧಿಗೆ ಕೈಗೊಳ್ಳಬೇಕಾದಂತಹ ಕಾರ್ಯಕ್ರಮಗಳ ಕುರಿತಂತೆ ಸಂವಾದದಲ್ಲಿ ಭಾಗವಹಿಸಿದ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳಾದ ವನಸಿರಿ ಸಂಸ್ಥೆಯ ಎಸ್.ಪಿ.ಬಳೆಗಾರ, ಕಾಕೋಳ ಗ್ರಾಮದ ಪ್ರಗತಿಪರ ರೈತ ಚನ್ನಬಸಪ್ಪ, ಮೋಟೆಬೆನ್ನೂರಿನ ರಮೇಶ ಕೃಷ್ಣಪ್ಪ, ಕಮದೋಡದ ಯಲ್ಲಪ್ಪ ಶಿದ್ಲಿಂಗಪ್ಪ, ಅಬಲೂರಿನ ರೈತ ಮಹಿಳೆ ಶ್ರೀಮತಿ ಶಶಿಕಲಾ ಇತರರು ಮಾತನಾಡಿ, ನೀರು ಇಂಗಿಸಲು ಜಮೀನುಗಳಲ್ಲಿ ಟ್ರಂಚ್ ಕಂ ಬಂಡಿಂಗ್ ವ್ಯವಸ್ಥೆಗೆ ಆದ್ಯತೆ ನೀಡಬೇಕು,
ನೀಲಗಿರಿ ಪ್ಲಾಂಟ್‍ಗಳನ್ನು ತೆರೆವುಗೊಳಿಸಬೇಕು, ಬೆಟ್ಟಗುಡ್ಡಗಳಿಂದ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಸಂಗ್ರಹಿಸಿ ಇಂಗಿಸುವ ,ಕೆರೆ ಕಟ್ಟೆಗಳಲ್ಲಿ ಸಂಗ್ರಹಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು. ಸರ್ಕಾರದ ನೆರವಿನಿಂದ ಬಂಡಿಂಗ್ ಹಾಗೂ ಟ್ರಂಚ್ ಮಾಡಿಕೊಂಡು ಅದನ್ನು ಮುಚ್ಚುವ ಫಲಾನುಭವಿಗಳ ಮೇಲೆ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು. ಕಾಲುವೆಗಳ ಮೂಲಕ ನೀರು ಹರಿಸಿ ಕೆರೆಗಳನ್ನು ತುಂಬಿಸಿ ಸಂಗ್ರಹಿಸುವ ಕೆಲಸವಾಗಬೇಕು.
ನಿರುಪಯುಕ್ತ ಕೊಳವೆಬಾವಿಗಳನ್ನು ಜಿಗುಟು ಮಣ್ಣಿನಿಂದ ತುಂಬಬೇಕು. ಬೆಟ್ಟ-ಗುಡ್ಡದ ಸುತ್ತಲೂ ಬಂಡಿಂಗ್ ಕೃಷಿ ಹೊಂಡದ ಮೂಲಕ ನೀರು ಸಂಗ್ರಹ ಮಾಡಬೇಕು. ಕನಿಷ್ಠ ಐದು ಎಕರೆ ಜಮೀನ ಇರುವ ರೈತ ಒಂದು ಕೃಷಿ ಹೊಂಡ, ಕನಿಷ್ಠ 500 ಮರಗಳನ್ನು ನೆಡುವುದುನ್ನು ಕಡ್ಡಾಯಗೊಳಿಸಬೇಕು. ಸರ್ಕಾರದ ಯೋಜನೆಗಳು ಕೇವಲ ಛಾಯಾಚಿತ್ರ ತೆಗೆಸಲು ಸೀಮಿತವಾಗದೇ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು ಎಂಬ ಎಂಬ ಸಲಹೆಗಳು ಕೇಳಿಬಂದವು.
ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಪುಣೆಯ ನೀರು ಮತ್ತು ಇಂಧನ ಸಂಶೋಧನಾ ಕೇಂದ್ರದ ವಿಜ್ಞಾನಿ ಬಿ.ಕೆ.ಗೌತಮ ಹಾಗೂ ವಿಜ್ಞಾನಿ ಕುಮಾರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಬಿ., ಕೃಷಿ ವಿವಿಯ ಹನುಮನಮಟ್ಟಿ ಕೇಂದ್ರದ ಕೇಂದ್ರ ಡೀನ್ ಡಾ.ಬಸವರಾಜಪ್ಪ ಆರ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಭೋಗಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅಶೋಕ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
