ಪಾಲಿಕೆಯಿಂದ 963 ಫಲಾನುಭವಿಗಳಿಗೆ 50 ಲಕ್ಷ ಸಹಾಯಧನ ವಿತರಣೆ

ತುಮಕೂರು

    ತುಮಕೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮೂಲಕ ಸರ್ಕಾರದ ವಿವಿಧ ಯೋಜನೆಗಳನ್ವಯ 2018-19 ನೇ ಸಾಲಿನಲ್ಲಿ ತುಮಕೂರು ನಗರದ ಒಟ್ಟು 963 ಅರ್ಹ ಫಲಾನುಭವಿಗಳಿಗೆ ಒಟ್ಟು 50,15,750 ರೂ.ಗಳಷ್ಟು ಮೊತ್ತದ ಸಹಾಯಧನವನ್ನು ವಿತರಿಸಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರು ತಿಳಿಸಿದ್ದಾರೆ.

     ಶೇ.24.10 ಯೋಜನೆ:- 2018-19 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಾಗಿ ಮೀಸಲಿಟ್ಟಿರುವ ಶೇ. 24.10 ಅನುದಾನದಲ್ಲಿ ಪೌರಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಶಿಕ್ಷಣ ಮತ್ತು ಇತರೆ ಸೌಲಭ್ಯಗಳಿಗಾಗಿ ಸಹಾಯಧನ ವಿತರಿಸಲಾಗಿದೆ. ಒಟ್ಟು 236 ಫಲಾನುಭವಿಗಳಿಗೆ ತಲಾ 6,350 ರೂ.ಗಳಂತೆ ಒಟ್ಟು 14,92,250 ರೂ.ಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

      ಇದೇ ಯೋಜನೆಯಡಿ ಅಂದರೆ ಶೇ. 24.10 ನಿಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 238 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ಒಟ್ಟಾರೆ 12,15,000 ರೂ.ಗಳನ್ನು ವಿತರಿಸಲಾಗಿದೆ. ಎಸ್.ಎಸ್.ಎಲ್.ಸಿ. ಯಿಂದ ಹಿಡಿದು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವ್ಯಾಸಂಗದವರೆಗೂ ಸರ್ಕಾರದ ನಿಯಮದ ಪ್ರಕಾರ ಪ್ರೋತ್ಸಾಹ ಧನವನ್ನು ವಿತರಣೆ ಮಾಡಲಾಗಿದೆ.

ಶೇ.7.25 ಯೋಜನೆ:-

      2018-19 ನೇ ಸಾಲಿನಲ್ಲಿ ಇತರೆ ಹಿಂದುಳಿದ ವರ್ಗದವರಿಗೆ ಶೇ. 7.25 ಯೋಜನೆಯಡಿ ಮೀಸಲಿಟ್ಟಿದ್ದ ಹಣದಲ್ಲಿ 442 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ. ಇದಕ್ಕಾಗಿ ಒಟ್ಟು 16,22,500 ರೂ. ವೆಚ್ಚವಾಗಿದೆ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಇತ್ಯಾದಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಿಯಮಾನುಸಾರವಾಗಿ ಪ್ರೋತ್ಸಾಹ ಧನವನ್ನು ವಿತರಣೆ ಮಾಡಲಾಗಿದೆ.

ಶೇ. 3 ರ ಯೋಜನೆ:-

       2018-19 ನೇ ಸಾಲಿನ ಶೇ. 3 ರ ಯೋಜನೆಯಡಿ ಅನಾರೋಗ್ಯದಿಂದ ಹಾಸಿಗೆಯಲ್ಲೇ ನಿಷ್ಕ್ರಿಯ ಸ್ಥಿತಿಯಲ್ಲಿರುವ 40 ಜನರಿಗೆ ತಲಾ 14,000 ರೂ.ಗಳಂತೆ ಒಟ್ಟು 5,60,000 ರೂ.ಗಳನ್ನು ವಿತರಣೆ ಮಾಡಲಾಗಿದೆ.ಇದೇ ನಿಧಿಯಿಂದ ಶ್ರವಣದೋಷವುಳ್ಳ 7 ಫಲಾನುಭವಿಗಳಿಗೆ ತಲಾ 18,000 ರೂ.ಗಳಂತೆ ಒಟ್ಟು 1,26,000 ರೂ.ಗಳನ್ನು ಸಹಾಯಧನವಾಗಿ ವಿತರಿಸಲಾಗಿದೆ ಎಂದು ಸೈಯದ್ ನಯಾಜ್ ಅವರು ಮಾಹಿತಿ ನೀಡಿದ್ದಾರೆ.

ಈ ಸಾಲಿನಲ್ಲೂ ನೆರವು

      ಪಾಲಿಕೆಯು ಪ್ರಸ್ತುತ 2019-20 ನೇ ಸಾಲಿನಲ್ಲೂ ಈ ಯೋಜನೆಗಳಡಿಯಲ್ಲಿ ತುಮಕೂರು ನಗರದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಣೆ ಮಾಡಲು ಸಿದ್ಥತೆಗಳನ್ನು ನಡೆಸುತ್ತಿದೆ. ಸದ್ಯದಲ್ಲೇ ಅರ್ಜಿ ಆಹ್ವಾನಿಸಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link