ಬೆಂಗಳೂರು
ಹೊಸ ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳ ನೊಂದಣಿ ಹಾಗೂ ನೊಂದಣಿಯ ನವೀಕರಣ ಶುಲ್ಕವನ್ನು ಕೇಂದ್ರ ಸರ್ಕಾರವು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರುಗಳ ನೊಂದಣಿಯು 600 ರಿಂದ 5 ಸಾವಿರಕ್ಕೆ ಹಾಗೂ ನೊಂದಣಿಯ ನವೀಕರಣ ಶುಲ್ಕವು ಕೂಡ 600 ರಿಂದ 10 ಸಾವಿರ ರೂ ಹೆಚ್ಚಳವಾಗಲಿದೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಪ್ರಮಾಣ ಇಳಿಸಲು ಮತ್ತು ಹಳೆಯ ವಾಹನಗಳ ಬಳಕೆ ಹತ್ತಿಕ್ಕುವ ನಿಟ್ಟಿನಲ್ಲಿ ಮತ್ತು ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಶುಲ್ಕ ಹೆಚ್ಚಳದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ
ಬಹುತೇಕ ಸಾಂಪ್ರದಾಯಿಕ ಇಂಧನದಿಂದ ಓಡುತ್ತಿರುವ ವಾಹನಗಳಿಗೆ ಸಂಬಂಧಿಸಿದಂತೆ ಈ ಎರಡೂ ಶುಲ್ಕಗಳ ಏರಿಕೆಗೆ ರಸ್ತೆ ಸಾರಿಗೆ ಸಚಿವಾಲಯವು ಇಂತಹ ಪ್ರಸ್ತಾವನೆಯ ಕರಡು ಅಧಿಸೂಚನೆ ಸಿದ್ಧಪಡಿಸಿದೆ.ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ, ಹೊಸ ನೊಂದಣಿಗೆ ಹಾಲಿ ಇರುವ 50 ರೂ. ಬದಲಿಗೆ 1000 ರೂ. ಮತ್ತು ಅದರ ನವೀಕರಣಕ್ಕೆ 2000 ರೂ. ಶುಲ್ಕ ವಿಧಿಸಲಾಗುವುದು. ಕ್ಯಾಬ್‍ಗಳಿಗೆ ನೊಂದಣಿ ಮತ್ತು ನವೀಕರಣ ಶುಲ್ಕವನ್ನು ಹಾಲಿ 1000 ರೂ. ಇರುವುದನ್ನು ಕ್ರಮವಾಗಿ 10 ಸಾವಿರ ಮತ್ತು 20 ಸಾವಿರ ರೂ.ಗೆ ಏರಿಕೆ ಮಾಡಲಾಗುತ್ತಿದೆ.
ಸಾಂಪ್ರದಾಯಿಕ ಇಂಧನದಿಂದ ಓಡುವ ವಾಹನಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದೆಂದು ಈಗಾಗಲೇ ವರದಿಯಾಗಿತ್ತು. ಉದ್ದೇಶಿತ ಕರಡು ಪ್ರಸ್ತಾವನೆ ಪ್ರಕಾರ ಆಮದು ಮಾಡಿಕೊಂಡ ವಾಹನಗಳಿಗೆ ಇದ್ದ 5 ಸಾವಿರ ರೂ. ನೊಂದಣಿ ಶುಲ್ಕವನ್ನು ಇದೀಗ 40 ಸಾವಿರ ರೂ.ಗೆ ಏರಿಸಲಾಗುತ್ತಿದೆ.
ಶುಲ್ಕ ಹೆಚ್ಚಳದ ಕರಡು
ದ್ವಿಚಕ್ರ ವಾಹನ-50ರೂಗಳಿಂದ 1,000, ತ್ರಿಚಕ್ರ ವಾಹನ-300ರಿಂದ 5,000, ಲಘು ವಾಹನ (ಕಾರು/ಜೀಪು)-600ರಿಂದ 5,000,ಲಘು ವಾಹನ (ವಾಣಿಜ್ಯ)1,000ರಿಂದ 10,000, ಮಧ್ಯಮ ಮತ್ತು ಭಾರಿ ಸರಕು ಸಾಗಣೆ/ಪ್ರಯಾಣಿಕ ವಾಹನ 1,500 ರಿಂದ 20,000
ನವೀಕರಣ ಶುಲ್ಕ ಏರಿಕೆ
ದ್ವಿಚಕ್ರ ವಾಹನ 50ರಿಂದ 2,000, ತ್ರಿಚಕ್ರ ವಾಹನ 300ರಿಂದ 10,000, ಲಘು ವಾಹನ (ಕಾರು/ಜೀಪು) -600ರಿಂದ 15,000, ಲಘು ವಾಹನ (ವಾಣಿಜ್ಯ)-1,000ರಿಂದ 20,000, ಮಧ್ಯಮ ಮತ್ತು ಭಾರಿ ಸರಕು ಸಾಗಣೆ/ಪ್ರಯಾಣಿಕ ವಾಹನ 1,500ರಿಂದ 40,000.ಬ್ಯಾಟರಿ ಚಾಲಿತ ವಾಹನಗಳು ಮತ್ತು ಗುಜರಿಗೆ ಹಾಕಿದ್ದಕ್ಕೆ ಬದಲಾಗಿ ಖರೀದಿಸಿದ ವಾಹನಗಳಿಗೆ ಪ್ರಸ್ತಾಪಿತ ಶುಲ್ಕ ಏರಿಕೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








