ಪಾವಗಡ:-

    ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆಧಾರ್ ಕಾರ್ಡ್ ಅವಶ್ಯಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ಮತ್ತು ಯಾವುದೇ ಹುದ್ದೆ ಪಡೆಯ ಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ರೈತ ಹಾಗೂ ಕೂಲಿ ಕಾರ್ಮಿಕರು ವಿವಿಧ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್‍ಗಾಗಿ ಅಲೆಯ ಬೇಕಾದ ಪರಿಸ್ಥಿತಿ ಇದೆ. ಸಾರ್ವಜನಿಕರು ತಾಲ್ಲೂಕು ಕಚೇರಿ ಮುಂದೆ ಬೆಳಗ್ಗೆ 5 ಗಂಟೆಯಿಂದಲೇ ಕ್ಯೂನಲ್ಲಿ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ.

    ಸರ್ಕಾರಿ ಆದೇಶದ ಪ್ರಕಾರ ಪ್ರತಿ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿಯೂ ಆಧಾರ್ ಕಾರ್ಡ್ ತೆಗೆಯಲು ಆದೇಶ ಹೊರಡಿಸಲಾಗಿದೆ. ಇಲ್ಲಿನ ಅಧಿಕಾರಿಗಳು ಸಾರ್ವಜನಿಕರಿಗೆ ಅಧಾರ್ ಕಾರ್ಡ್ ತೆಗೆಸಿಕೊಂಡು ಬಂದರೆ ಮಾತ್ರ ಸೌಲಭ್ಯ ಕಲ್ಪಿಸಲು ಸಾಧ್ಯ ಎಂದು ಸಾರ್ವಜನಿಕರನ್ನು ವಾಪಸ್ ಕಳಿಸುತ್ತಿದ್ದಾರೆ. ಬ್ಯಾಂಕ್ ಮತ್ತು ಅಂಚೆ ಕಚೇರಿ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಾಗಿ ಅದೇಶ ಹೊರಡಿಸಿ ಸಾರ್ವಜನಿಕರ ಪರದಾಟ ತಪ್ಪಿಸಲು ಪ್ರಯತ್ನ ಮಾಡಬೇಕಾಗಿದೆ.

    ಸರ್ಕಾರಿ ಸೌಲಭ್ಯ ಪಡೆಯುವ ಸಾರ್ವಜನಿಕರಿಗೆ ಸಂಬಂಧ ಪಟ್ಟ ಇಲಾಖೆಯಲ್ಲಿ ಆಧಾರ್ ಕಾರ್ಡ್ ವಿತರಣೆ ಮಾಡಿ ಸೌಲಭ್ಯ ಒದಿಗಿಸಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು.34 ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ಕಾರ್ಡ್ ಕೇಂದ್ರ ತೆಗೆಯಲು ಒತ್ತಾಯ.ಪಾವಗಡ ತಾಲ್ಲೂಕಿನಲ್ಲಿ ಸಾರ್ವಜನಿಕರು ಆಧಾರ್ ಕಾರ್ಡ್‍ಗಾಗಿ ಪರದಾಡುತ್ತಿದ್ದು, ತಾಲ್ಲೂಕಿನ 4 ಹೋಬಳಿಗಳು ಸೇರಿದಂತೆ 34 ಗ್ರಾಮ ಪಂಚಾಯಿತಿಯಲ್ಲಿ ಆಧಾರ್ ಕಾರ್ಡ್ ತೆಗೆಯುವ ಕೇಂದ್ರಗಳು ತೆರೆದು ಸಾರ್ವಜನಿಕರಿಗೆ ಹಾಗೂ ರೈತಾಪಿ ಜನರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿ ಸಿದ್ದಾರೆ.

ಆಧಾರ್ ಕಾರ್ಡ್ ಅವಶ್ಯಕತೆ ಏನು?

     ಸರ್ಕಾರಿ ಸೌಲಭ್ಯ ಪಡೆಯಲು ರೈತರಿಗೆ ಬೆಳೆ ಸಾಲ, ಬೆಳೆ ವಿಮೆ, ಸಾಲ ಮನ್ನಾ ಯೋಜನೆಗಳಿಗೆ ಬೇಕಾಗಿದ್ದು, ಕೆಲ ರೈತರಿಗೆ ಆಧಾರ್ ಐಡಿ ಕೆಲಸ ಮಾಡದ ಕಾರಣ ಕೆಲ ರೈತರ ಸಾಲ ಮನ್ನಾ ಆಗದೇ ಕಂಗಾಲಾಗಿದ್ದಾರೆ, ಕೆಲ ಶಾಲಾ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯಕ್ಕೆ ಹಾಗೂ ಸ್ಕಾಲರ್‍ಶಿಪ್‍ಗೆ ಆಧಾರ್ ಇಲ್ಲದ ಕಾರಣ ಸಹಾಯ ಧನ ಕೈತಪ್ಪಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಸಹ ಸಾಧ್ಯವಾಗದೆ ನಿರುತ್ಸಾಹಿಗಳಾಗಿದ್ದಾರೆ. ಎಸ್.ಟಿ ಎಸ್.ಸಿ ಜನಾಂಗದ ಕಡುಬಡವರಿಗೆ ಸರ್ಕಾರ ಸ್ವಯಂ ಉದ್ಯೋಗ ಕಲ್ಪಿಸಲು ಅರ್ಜಿ ಕರೆದಿದ್ದು, ಕೆಲವರಿಗೆ ಅರ್ಜಿಸಲ್ಲಿಸಲು ಸಾಧ್ಯವಾಗಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಸಲು ಅರ್ಜಿ ನೀಡಲು ಕೆಲ ಸಣ್ಣ ರೈತರಿಗೆ ಸಾಧ್ಯವಾಗಿಲ. ಆಧಾರ್ ಕಾರ್ಡ್‍ಗೆ ಪರದಾಡುವಂತಾಗಿದೆ.

ಆಧಾರ್ ಕಾರ್ಡ್‍ಗೆ ಸಾರ್ವಜನಿಕರಿಂದ ನೂಕುನುಗ್ಗಲು

     ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಆಧಾರ್ ಕಾರ್ಡ್ ತೆಗೆಯುವ ಕೇಂದ್ರ ತೆರೆದಿದ್ದು, ಈ ಹಿಂದೆ 3 -4 ತಿಂಗಳಿಂದ ಲೋಕಸಭೆಯ ಚುನಾವಣೆ ಹಿನ್ನೆಲೆಯಲ್ಲಿ ಕಡಿತಗೊಳಿಸಿತ್ತು. ಆಧಾರ್ ಕಾರ್ಡ್ ತೆಗೆಯಲು ಮಾಹಿತಿ ತಿಳಿದಂತೆ ತಾಲ್ಲೂಕಿನ ಸಾರ್ವಜನಿಕರು ಶನಿವಾರ ಬೆಳಗ್ಗೆ ಆಗಮಿಸಿದ್ದರಿಂದ ನೂಕುನುಗ್ಗಲಾಯಿತು, ಲೋಕಸಭೆ ಚುನಾವಣೆ ಹಿನ್ನೆಲೆ 2-3 ತಿಂಗಳು ಆಧಾರ್ ಕಾರ್ಡ್ ತೆಗೆಯುವುದು ನಿಲ್ಲಿಸಿದ ಕಾರಣ ಇಂದು ಸಾರ್ವಜನಿಕರು ನೂಕುನುಗ್ಗಲಿಗೆ ಕಾರಣ ಇರಬಹುದು.

      ಸುಮಾರು 2 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದ್ದು, ಇವರನ್ನು ತಡೆಯಲು ಪೋಲೀಸ್ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.ಪಾವಗಡ ಪಟ್ಟಣದಲ್ಲಿ ಇರುವ ಶನಿಮಹಾತ್ಮಸ್ವಾಮಿ ದೇವರಿಗೆ ಅಂತರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ಬಂದಿದ್ದು, ಇಲ್ಲಿನ ಟ್ರಾಫಿಕ್ ಮತ್ತು ಬಂದೋಬಸ್ತ್ ಕಲ್ಪಿಸಬೇಕಾಗಿತ್ತು. ಇದರ ಜೊತೆಗೆ ಸಾರ್ವಜನಿಕರಿಗೆ ಆಧಾರ್ ಕಾರ್ಡ್ ಸಮಸ್ಯೆಯಾಗಿದ್ದು ಪೋಲೀಸರು ಯಾವುದು ನೋಡಬೇಕು, ಯಾವುದು ಬೀಡಬೇಕು ಅನ್ನವ ಮಟ್ಟಿಗೆ ಸಮಸ್ಯೆ ಉಂಟಾಯಿತು.

      ತಾಲ್ಲೂಕಿನಲ್ಲಿ ಆಧಾರ್ ಕಾರ್ಡ್ ತೆಗೆಯುವುದು ಸ್ಥಗಿತಗೊಂಡ ನಂತರ ರಾಜ್ಯ ಸರ್ಕಾರ ಪಡಿತರ ಅಕ್ಕಿ ಕೊಡಬೇಕಾದರೆ ಥಂಬ್ ನೀಡಬೇಕೆಂದು ಆದೇಶ ಹೊರಡಿಸಿದ ನಂತರ ಪಡಿತರ ಕೇಂದ್ರಗಳಿಗೆ ಹೋದಾಗ ಥಂಬ್ ಬೀಳದ ಕಾರಣ, ತಾಲ್ಲೂಕಿನ ಗಡಿ ಭಾಗದ ಆಂಧ್ರ ಪ್ರದೇಶದ ರೊದ್ದಂ, ಮಡಕಶಿರಾ, ಗುಡಿಬಂಡೆ, ಕಂಬದೂರು, ಕುಂದರ್ಪಿ ಕಲ್ಯಾಣದುರ್ಗ, ಹಿಂಧೂಪುರ್ ಆಂಧ್ರಕ್ಕೆ ಸಾರ್ವಜನಿಕರು ಸಾವಿರಾರು ಗಟ್ಟಲೇ ಹಣ ಖರ್ಚು ಮಾಡಿ ಅಧಾರ್ ಕಾರ್ಡ್ ತೆಗೆಸುವ ಘಟನೆ ನಡೆದಿತ್ತು.

      ಕರ್ನಾಟಕದಲ್ಲಿ ಇಷ್ಟೆಲ್ಲ ಕಷ್ಟವನ್ನು ಸಾರ್ವಜನಿಕರು ಅನುಭವಿಸಿದರೂ ಸಹ ಇಲ್ಲಿನ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದು, ಈಗ ರಾತ್ರಿ ಹಗಲು ಎನ್ನದೇ ಕೆಲಸ ಬಿಟ್ಟು ಕಚೇರಿಗಳ ಮುಂದು ಕಾದು ಕುಳಿತು ಆಧಾರ್ ಕಾರ್ಡ್ ಫೋಟೋ ತೆಗೆಸಬೇಕಾಗಿದೆ.ಈಗಲಾದರು ಜಿಲ್ಲಾಧಿಕಾರಿಗಳು ತಾಲ್ಲೂಕು ಕೇಂದ್ರ ಬಿಟ್ಟು ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಾರ್ ತೆಗೆಸಲು ಸರ್ಕಾರದ ಜೊತೆ ಮಾತುಕತೆ ನಡೆಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡುತ್ತಾರೋ ಕಾದು ನೋಡಬೇಕಾಗಿದೆ.

     ತಾಲ್ಲೂಕಿನ 3 ಹೋಬಳಿಗಳಲ್ಲಿ ಆಧಾರ್ ಕೇಂದ್ರಗಳು ತೆಗೆದಿದ್ದು, ಇವುಗಳಲ್ಲಿ ಒಂದು ಕೇಂದ್ರ ತಾಂತ್ರಿಕ ದೋಷದಿಂದ ನಿಂತಿದ್ದು. ಕೇಂದ್ರಗಳು ತೆರೆದ ಮೇಳೆ 1500 ಜನರ ಆಧಾರ್ ಕಾರ್ಡ್ ತೆಗೆಸಿಕೊಂಡಿದ್ದಾರೆ. ಇನ್ನೂ ಸಾವಿರಾರು ಸಾರ್ವಜನಿಕರಿಗೆ ಟೋಕನ್ ನೀಡಲಾಗಿದೆ. ಇಂದು ನೂಕನುಗ್ಗಲಾಗಿದೆ ಇದರ ಬಗ್ಗೆ ಸರ್ಕಾರದ ಗಮನಕ್ಕೂ ಪತ್ರ ಬರೆದಿದ್ದೇವೆ. ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿಯೂ ಸಹ ಆಧಾರ್ ಕೇಂದ್ರಗಳನ್ನು ತೆಗೆಯಬೇಕೆಂದು ಆದೇಶವಿದ್ದರು ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಈ ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ಆಧಾರ್ ಕಾರ್ಡ್ ತೆಗೆಯಲು ಸರ್ಕಾರ ಆದೇಶ ನೀಡಿ ಮತ್ತೆ ಅದು ರದ್ದಾದ ಮೇಲೆ ಇಂತಹ ಅವ್ಯವಸ್ಥೆಗೆ ಕಾರಣವಾಗಿದೆ.

ತಹಸೀಲ್ದಾರ್ ವರದರಾಜು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ