ಮಿಡಿಗೇಶಿ
ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸುತ್ತಮುತ್ತಲಿನ ಆಂಧ್ರ ರಾಜ್ಯದ ಗಡಿಭಾಗಗಳಲ್ಲಿ ಅಕ್ರಮ ಕಲ್ಲಿನ ಗಣಿಗಾರಿಕೆ ಹಲವಾರು ವರ್ಷಗಳಿಂದ ರಾಜಾರೋಷವಾಗಿ ನಡೆಯುತ್ತಿದೆ. ಆದರೂ ಸಹ ಆಂಧ್ರ್ರ ಮತ್ತು ಕರ್ನಾಟಕ ರಾಜ್ಯದ ಚುನಾಯಿತ ಜನಪ್ರತಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿವರ್ಗ ಜಾಣ ಮೌನ ವಹಿಸಿರುವ ಒಳಗುಟ್ಟಾದರೂ ಏನು ಎಂಬ ಪ್ರಶ್ನೆ ಮೂಡದಿರದು.
ತಾಲ್ಲೂಕಿನ ಗಡಿ ಭಾಗಗಳಲ್ಲಿ ಅಕ್ರಮ ಗಣಿಗಾರಿಕೆ, ಅಕ್ರಮ ಮರಳು ಸಾಗಾಣಿಕೆ ಮತ್ತು ಅಕ್ರಮ ಮದ್ಯಮಾರಾಟ, ಅಲ್ಲದೆ ಇನ್ನಿತರೆ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ.
ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಗಡಿಭಾಗದ ಚಂದ್ರಬಾವಿ ಗ್ರಾಮಕ್ಕೆ ಅಂಟಿಕೊಂಡಂತಿರುವ ಮಡಕಶಿರಾ ತಾಲ್ಲೂಕಿನ ಉಕ್ಕಡ ರಂಗಾಪುರದಲ್ಲಿ ನಡೆದ ಕಲ್ಲಿನ ಗಣಿಗಾರಿಕೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಮುಗಿಯುವ ಹಂತದಲ್ಲಿದೆ.
ಈ ಹಂತದಲ್ಲಿ ಮಧುಗಿರಿ ಹಾಗೂ ಮಡಕಶಿರಾ ತಾಲ್ಲೂಕಿಗೆ ಸೇರಿದ ಬ್ರಹ್ಮದೇವರಹಳ್ಳಿ ಕಾವಲು, ರೆಡ್ಡಿಹಳ್ಳಿ, ಕಾಡಪ್ಪನ ಪಾಳ್ಯ, ಕಸಾಪುರ, ಗೊಟ್ಟಗೂರಿಕೆ, ಗುಡ್ಡಗೂರಿಕೆ, ದಾಸಪ್ಪನ ಪಾಳ್ಯ, ಕಾಡಪ್ಪನಪಾಳ್ಯ ಇವುಗಳ ಮಧ್ಯಭಾಗದಲ್ಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ ಶೇ. 50 ಕರ್ನಾಟಕ ರಾಜ್ಯಕ್ಕೆ, ಶೇ. 50 ಆಂಧ್ರ ರಾಜ್ಯಕ್ಕೆ ಸೇರಿದ ಬಸದಿ ಬೆಟ್ಟವಿದೆ.
ಸದರಿ ಬಸದಿ ಬೆಟ್ಟದಲ್ಲಿ ಗಣಿಗಾರಿಕೆಗೆ ಆಂಧ್ರದ ರಾಜ್ಯ ಸರ್ಕಾರದಿಂದ ಮೇಲಿನ ಗಣಿಗಾರಿಕೆಯವರು ಅನುಮತಿ ಪಡೆದಿದ್ದಾರೆ. ಹಾಗಾಗಿ ಈ ಬಗ್ಗೆ ಕಳೆದ ಐದು ವರ್ಷಗಳಿಂದ ಸಾರ್ವಜನಿಕರು ಸಂಬಂಧಿಸಿದ ಮಡಕಶಿರಾ ತಹಸೀಲ್ದಾರ್, ಅನಂತಪುರಂ ಜಿಲ್ಲಾ ಕಲೆಕ್ಟರ್ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಅನಂತಪುರಂ ಜಿಲ್ಲೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳಿಗೆ ಗಣಿಗಾರಿಕೆ ವಿರುದ್ದ ಮನವಿ ನೀಡಿದ್ದಾರೆ.
ಅಲ್ಲದೆ ನಮ್ಮ ತುಮಕೂರು ಜಿಲ್ಲೆಯ ಸಂಬಧಿಸಿದ ಇಲಾಖೆಗಳಿಗೆ ಕೂಡ ಛಾಯಾ ಚಿತ್ರ ಸಮೇತ ಮನವಿಯನ್ನು ನೀಡಿರುತ್ತಾರೆ. ಆದರೂ ಸಹ ಇಲ್ಲಿಯವರೆಗೆ ಯಾವುದೇ ಪ್ರಯೋಜನ ವಾಗದೆ, ಗಣಿಗಾರಿಕೆಗೆ ಬಸದಿ ಬೆಟ್ಟವನ್ನೇ ಆಯ್ಕೆ ಮಾಡಿಕೊಳ್ಳಲು ಈ ಮೇಲ್ಕಂಡ ಎಲ್ಲಾ ವರ್ಗದವರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಬೆಂಬಲ ನೀಡಿರುತ್ತಾರೆ.
ಈ ಭಾಗದ ಹತ್ತಾರು ಗ್ರಾಮಗಳ ರೈತಾಪಿ ವರ್ಗವು ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆಯದ ಪರಿಸ್ಥಿತಿ ಉಂಟಾಗಲಿದೆ. ಆದ್ದರಿಂದ ಹಲವಾರು ಪ್ರಜ್ಞಾವಂತ ನಾಗರಿಕರು ಆ. 5 ರಂದು ಆಂಧ್ರ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರಿಗೆ ಇಲ್ಲಿನ ಸ್ಥಿತಿಗತಿ ಬಗ್ಗೆ ಮನವಿಯನ್ನು ಸಲ್ಲಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಈಗಾಗಲೇ ಮಿಡಿಗೇಶಿ ಹೋಬಳಿಯ ಬ್ರಹ್ಮದೇವರಹಳ್ಳಿಯಿಂದ ಬಸದಿ ಬೆಟ್ಟಕ್ಕೆ ಹಾದು ಹೋಗಲು ರಸ್ತೆ ಕಾಮಗಾರಿ ಕೂಡ ಪ್ರಾರಂಭಿಸಿರುತ್ತಾರೆ. ಆದ್ದರಿಂದ ಆಂಧ್ರದವರ ಮಾದರಿಯಲ್ಲಿ ಸ್ಥಳೀಯ ಪ್ರಜ್ಞಾವಂತ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳವರು ಎಚ್ಚೆತ್ತುಕೊಂಡು ಗಣಿಗಾರಿಕೆ ವಿರೋಧಿಸಬೇಕಾಗಿದೆ.
ಇದೇ ಗುಡ್ಡಗೂರಿಕೆ ಗ್ರಾಮದ ವ್ಯಾಪ್ತಿಗೆ ಸೇರಿದ ಮಾಳಿಬೆಟ್ಟದ ಸುಮಾರು 80 ಎಕರೆ ಪ್ರದೇಶದಲ್ಲಿರುವ ಬಂಡೆಯನ್ನೆ ಮಡಕಶಿರಾ ತಾಲ್ಲೂಕಿನ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಂಡುರಂಗಪ್ಪರಿಗೆ ಸೇರಿದ ಮನೆತನದ ನಾಲ್ವರ ಹೆಸರಿಗೆ ಗಣಿಗಾರಿಕೆಗೆ ಅನುಮತಿ ನೀಡಿರುವುದಾಗಿ ತಿಳಿದು ಬಂದಿರುತ್ತದೆ. ಸದರಿ ಬಸದಿ ಬೆಟ್ಟದ ತಪ್ಪಲಿನಲ್ಲಿ ಪುರಾತನ ಕಾಲದ ಶ್ರೀ ಓಬಳನರಸಿಂಹ ಸ್ವಾಮಿ ದೇವಸ್ಥಾನವು ಇರುತ್ತದೆ. ಮಾಳಿ ಬೆಟ್ಟಕ್ಕೆ ಹೊಂದಿ ಕೊಂಡಂತೆ ಕೇವಲ ನೂರು ಮೀಟರ್ ದೂರದ ಅಂತರದಲ್ಲಿ ಅರಣ್ಯ ಇರುತ್ತದೆ ಎಂಬುದನ್ನೂ ಗಮನಿಸಬೇಕಾಗಿದೆ.