ದಾವಣಗೆರೆ:
ಮಿಲಟರಿ ರೂಲ್ಸ್ ಮತ್ತು ದರಖಾಸ್ತು ಕಾಯಿದೆಯ ಮೂಲಕ ಮಾಜಿ ಸೈನಿಕರೊಬ್ಬರಿಗೆ ಹರಿಹರ ತಾಲೂಕಿನ ಷಂಷಿಪುರ ಗ್ರಾಮದಲ್ಲಿ ಮಂಜೂರು ಮಾಡಿದ್ದ ಜಮೀನಿನಲ್ಲಿ, ಕೆಲ ಗ್ರಾಮಸ್ಥರು ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದು, ಆ ಮನೆಗಳನ್ನು ತೆರವು ಗೊಳಿಸಿ ಜಮೀನು ಬಿಡಿಸಿಕೊಡಬೇಕು. ಇಲ್ಲವೇ ಪರ್ಯಯ ವ್ಯವಸ್ಥೆ ಕಲ್ಪಿಸಬೇಕೆಂದು ದಲಿತ ಸೇನೆ ಜಿಲ್ಲಾಧ್ಯಕ್ಷ ಸೂರ್ಯ ಪ್ರಕಾಶ್ ಆರ್ ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.ದುರ್ಗಪ್ರಸಾದ್ ಎಂಬುವರು ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದ ಹಿನ್ನೆಲೆಯಲ್ಲಿ 1962ರ ಜೂನ್ 27ರಂದು ಅಂದಿನ ಉಪವಿಭಾಗಾಧಿಕಾರಿಗಳು ದುರ್ಗಪ್ರಸಾದ್ ಅವರಿಗೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಷಂಷಿಪುರ ಗ್ರಾಮದಲ್ಲಿ ಮಿಲಿಟರಿ ರೂಲ್ಸ್ ಹಾಗೂ ದರಖಾಸ್ತು ಕಾಯಿದೆಯ ಅಡಿಯಲ್ಲಿ 3 ಎಕರೆ 20 ಗುಂಟೆ ಜಮೀನು ಮಂಜೂರು ಮಾಡಿದ್ದರು. ಆದರೆ, ಈ ಜಮೀನಿನಲ್ಲಿ ಈಗ ಕೆಲ ಗ್ರಾಮಸ್ಥರು ಮನೆ ನಿರ್ಮಿಸಿಕೊಂಡಿದ್ದಾರೆಂದು ಹೇಳಿದರು.
ತಮಗೆ ಜಮೀನು ಮಂಜೂರು ಆಗಿರುವುದನ್ನು ತಿಳಿದ ಮಾಜಿ ಸೈನಿಕ ದುರ್ಗಪ್ರಸಾದ್ ಅವರು 1970ರಲ್ಲಿ ತಮ್ಮ ಗ್ರಾಮಕ್ಕೆ ತೆರಳಿ, ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಮುಂದಾದಾಗ ಕೆಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಅವರು ಆಗ ಪೊಲೀಸ್ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳಿಗೂ ದೂರು ನೀಡಿದ್ದರು. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಈ ಕೊರಗಿನಲ್ಲಿಯೇ ದುರ್ಗಪ್ರಸಾದ್ ಅವರು 2001ರಲ್ಲಿ ಮೃತಪಟ್ಟಿದ್ದಾರೆ. ಇವರ ವಾರಸುದಾರರಾದ ಇವರ ಪತ್ನಿ ಸುಶೀಲಾ ಬಾಯಿ ಹಾಗೂ ಮಕ್ಕಳು ತಮ್ಮ ಕುಟುಂಬಕ್ಕೆ ಮಂಜೂರಾದ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಈ ವರೆಗೂ ಪ್ರಯತ್ನಿಸುತ್ತಲೇ ಬಂದಿದದ್ದಾರೆ. ಆದರೆ, ಆ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವವರು ಇವರಿಗೆ ಜೀವ ಬೆದರಿಕೆ ಒಡ್ಡಿ ಊರಿಗೆ ಕಾಲು ಇಡದಂತೆ ಮಾಡಿದ್ದಾರೆ. ಆದರೂ ಸಹ ಇವರ ಕುಟುಂಬದ ಸದಸ್ಯರು ಕಳೆದ ಆರು ತಿಂಗಳ ಹಿಂದೆ ಷಂಷಿಪುರಕ್ಕೆ ಹೋದಾಗ ಕಾರು ಅಡ್ಡಗಟ್ಟಿ ಹಲ್ಲೆಗೂ ಯತ್ನಿಸಿದ್ದಾರೆಂದು ದೂರಿದರು.
1962ರಿಂದ ಇಲ್ಲಿಯ ವರೆಗೂ ಈ ಜಮೀನಿಗೆ ಸಂಬಂಧಪಟ್ಟ ಪಹಣಿಯಲ್ಲಿ ದುರ್ಗಪ್ರಸಾದ್ ಅವರ ಹೆಸರು ಬರುತ್ತಿದೆ. ಆದರೂ ಸಹ ಬನ್ನಿಕೋಡು ಗ್ರಾ.ಪಂ. ಅಧ್ಯಕ್ಷರು, ಪಿಡಿಓ ಹಾಗೂ ಕಾರ್ಯದರ್ಶಿಗಳು ಯಾರ ಅನುಮತಿಯನ್ನೂ ಪಡೆಯದೇ, ಈ ಜಮೀನನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸುವ ಮೂಲಕ. ಈ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ.
ಈಗ ಹೋಗಿ ವಿಚಾರಿಸಿದರೇ, ಈ ಭೂಮಿ ಬೀಳು ಬಿದ್ದಿರುವ ಕಾರಣಕ್ಕೆ ಮನೆಗಳನ್ನು ನಿರ್ಮಿಸಿಕೊಂಡಿದ್ದೇವೆ ಎಂಬುದಾಗಿ ಜವಾಬು ನೀಡುತ್ತಿದ್ದಾರೆ. ಆದರೆ, ಅಲ್ಲಿ ಬಡವರ್ಯಾರೂ ಮನೆ ನಿರ್ಮಿಸಿಕೊಂಡಿಲ್ಲ. ಸ್ಥಿತಿವಂತರೇ ಮನೆ ಕಟ್ಟಿಕೊಂಡಿದ್ದಾರೆಂದು ಮಾಹಿತಿ ನೀಡಿದರು.
ಯುದ್ಧ ನಡೆಯುವಾಗ, ಯುದ್ಧ ಭೂಮಿಯಲ್ಲಿ ಸೈನಿಕ ವೀರ ಮರಣ ಅಪ್ಪುವಾಗ ಅನುಕಂಪವನ್ನು ವ್ಯಕ್ತಪಡಿಸುತ್ತೇವೆ. ಆದರೆ, ಇಲ್ಲಿ ದೇಶ ಸೇವೆ ಮಾಡಿ, ನಿವೃತ್ತಿಯಾಗಿರುವ ಮಾಜಿ ಸೈನಿಕರ ಕುಟುಂಬಕ್ಕೆ ಅನ್ಯಾಯವಾಗಿದ್ದರೂ ಯಾರೂ ಸ್ಪಂದಿಸದಿರುವುದು ಬೇಸರದ ಸಂಗತಿಯಾಗಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಆ ಜಮೀನಿನಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ತೆರವುಗೊಳಿಸಿ, ಮಾಜಿ ಸೈನಿಕ ದುರ್ಗಪ್ರಸಾದ್ ಅವರ ಕುಟುಂಬ ವರ್ಗದವರ ಸ್ವಾಧೀನಕ್ಕೆ ನೀಡಬೇಕು ಅಥವಾ ಬೇರೆ ಕಡೆಯಲ್ಲಿ ಜಮೀನು ನೀಡುವ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ದಲಿತ ಸೇನೆ ಬೀದಿಗೆ ಇಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸೈನಿಕ ದುರ್ಗಪ್ರಸಾದ್ ಅವರ ಪತ್ನಿ ಸುಶೀಲಾ ಬಾಯಿ, ಸೇನೆಯ ಮುಖಂಡರಾದ ಮಾಗಡಿ ದ್ವಾರಕೀಶ್, ಮಂಜುನಾಥ್, ವಾಗೀಶ್, ನಳಿನಾ ಮತ್ತಿತರರು ಹಾಜರಿದ್ದರು.