ಪ್ರಮಾಣ ಪತ್ರ ಉಪ್ಪಿನಕಾಯಿ ಇಲ್ಲದ ಊಟವಿದ್ದಂತೆ

ದಾವಣಗೆರೆ:

    ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ಪ್ರಮಾಣ ಪತ್ರಗಳು ಉಪ್ಪಿನಕಾಯಿ ಇಲ್ಲದ ಊಟವಿದ್ದಂತೆ ಎಂದು ಬೆಳ್ಳೂಡಿಯ ಕಾರ್ಗಿಲ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಬಸವರಾಜ ಅಂಗಡಿ ವಿಶ್ಲೇಷಿಸಿದರು.

    ನಗರದ ಬಿಐಇಟಿ ಕಾಲೇಜಿನ ಬಯೋ ಟೆಕ್ನಾಲಜಿ ವಿಭಾಗದಲ್ಲಿ ಸೋಮವಾರದಿಂದ ಮಾ.15ರ ವರೆಗೆ ಏರ್ಪಡಿಸಿರುವ ಹಾಂಡ್ಸಾನ್ ವರ್ಕ್‍ಶಾಪ್ ಆನ್ ಟೆಕ್ನಿಕ್ಸ್ ಇನ್ ಬಯೋ ಟೆಕ್ನಾಲಜಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಶಿಕ್ಷಣ ಸಂಸ್ಥೆಗಳು ನೀಡುವ ಪ್ರಮಾಣಪತ್ರಗಳು ಉಪ್ಪಿನಕಾಯಿ ಇಲ್ಲದ ಊಟದಂತೆ ಇರಲಿವೆ. ಈ ಊಟಕ್ಕೆ ಬೇಕಾಗಿರುವ ಉಪ್ಪಿನಕಾಯಿಯನ್ನು ಹೇಗೆ ತಯಾರಿಸಬೇಕೆಂಬ ಕೌಶಲ್ಯವನ್ನು ಮತ್ತು ಸ್ಪರ್ಧಾತ್ಮಕತೆಯನ್ನು ನೀವೇ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಇಲ್ಲದ ಸ್ಥಳವೇ ಇಲ್ಲವಾಗಿ. ಈ ಸ್ಪರ್ಧೆಯನ್ನು ಹೇಗೆ ಎದುರಿಸಬೇಕೆಂಬುದನ್ನು ಅರಿತು ಪೈಪೋಟಿ ನೀಡಲು ಸಶಕ್ತರಾಗಲು ಕಾರ್ಯಗಾರ, ತರಬೇತಿ, ವಿಚಾರ ಸಂಕಿರಣಗಳಂತಹ ಕಾರ್ಯಕ್ರಮಗಳ ಅಗತ್ಯತೆ ಇದೆ. ಇಂತಹ ಕಾರ್ಯಕ್ರಮಗಳ ಮೂಲಕ ಪ್ರಾಯೋಗಿಕ ಜ್ಞಾನ ಪಡೆದರೆ ಮಾತ್ರ ದಕ್ಷವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಪ್ರತಿಪದಿಸಿದರು.

    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನ ಎಂದೂ ನಿಂತಲ್ಲೇ ನಿಲ್ಲುವುದಿಲ್ಲ. ಹೀಗಾಗಿ ಕಲಿಯುವಿಕೆಗೆ ಎಂದೂ ಕೊನೆ ಎಂಬುದೇ ಇಲ್ಲ. ಕಲಿಕೆಗೆ ಅವಕಾಶ ನಿರಾಕರಣೆಯಾದಾಗಲೂ ಹಿನ್ನಡೆ ಎಂಬುದಾಗಿ ಭಾವಿಸಬಾರದು. ದ್ರೋಣಾಚಾರ್ಯರಿಂದ ತಿರಸ್ಕೃತರಾದ ನಂತರವೂ ಏಕಲವ್ಯ ಛಲ ಬಿಡದೆ, ದ್ರೋಣನ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬಿಲ್ವಿದ್ಯೆ ಕಲಿತು ಸಾಧನೆ ಮಾಡಿದ್ದನ್ನು ವಿದ್ಯಾರ್ಥಿಗಳು ಸ್ಫೂರ್ತಿಯನ್ನಾಗಿ ಪಡೆದು ಸಾಧನೆಯತ್ತ ದಾಪುಗಾಲು ಹಾಕಬೇಕೆಂದು ಸಲಹೆ ನೀಡಿದರು.

    ದಾವಣಗೆರೆ ವಿಶ್ವ ವಿದ್ಯಾನಿಲಯದ ಬಯೋ ಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ. ಗೋಪಿನಾಥ್ ಮಾತನಾಡಿ, ಶೈಕ್ಷಣಿಕ ಕಲಿಕೆ ಹಾಗೂ ಕೈಗಾರಿಕಾ ಅಗತ್ಯಗಳ ನಡುವಿನ ಅಂತರವನ್ನು ಸರಿದೂಗಿಸಲು ನಮ್ಮ ವಿವಿಯು ಕ್ರಮ ಕೈಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಬಿಡುವಿನ ಸಮಯ ಎಂಬುದು ಯಾವುದೂ ಇರುವುದಿಲ್ಲ. ಸಮಯ ಸಿಕ್ಕಾಗಲೆಲ್ಲಾ ಉದ್ಯಮಗಳ ಅಗತ್ಯ ಬಯಸುವ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಏಕೆಂದರೆ, ಕೌಶಲ್ಯ ಇದ್ದವರಿಗೆ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳು ದೊರೆಯಲಿವೆ ಎಂದರು.

    ಬಿಐಇಟಿ ಕಾಲೇಜಿನ ಪ್ರಾಂಶುಪಾಲ ಕೆ.ಸದಾಶಿವಪ್ಪ ಮಾತನಾಡಿ, ಪ್ರಸ್ತುತ ದೇಶದಲ್ಲಿ ಫಲಿತಾಂಶ ಆಧರಿತ ಶಿಕ್ಷಣ ವ್ಯವಸ್ಥೆ ಇದೆ. ಕಪ್ಪು ಹಲಗೆಯ ಹಿಂದಿನ ವ್ಯವಸ್ಥೆಯಲ್ಲಿ ಬಾಯಿಪಾಠ, ಅರ್ಥ ಮಾಡಿಕೊಳ್ಳುವುದು ಹಾಗೂ ಅನ್ವಯಿಸುವುದಕ್ಕೆ ಸೀಮಿತವಾಗಿತ್ತು. ಆದರೆ, ಈಗ ಹೊಸ ಅಗತ್ಯಗಳು ವಿಶ್ಲೇಷಣೆ, ಮೌಲ್ಯಮಾಪನ ಹಾಗೂ ಸೃಜನಶೀಲತೆಯನ್ನು ಬಯಸಲಾಗುತ್ತಿದೆ ಎಂದು ತಿಳಿಸಿದರು.

    ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ ಮಾತನಾಡಿ, ಭಾರತದಲ್ಲಿ ಏಳು ಸಾವಿರ ಅಪರೂಪದ ರೋಗಗಳಿವೆ. ಇವುಗಳನ್ನು ಕೆ-7 ಎಂದು ಗುರುತಿಸಲಾಗಿದೆ. ರೀತಿ ಅಪರೂಪದ ರೋಗಗಳ ಚಿಕಿತ್ಸಾ ವೆಚ್ಚ ದುಬಾರಿಗೆ. ಒಂದು ರೋಗದ ಔಷಧಿಯ ವೆಚ್ಚವೂ ಲಕ್ಷ ರೂ.ಗಳಾಗುತ್ತದೆ. ಇಂತಹ ರೋಗಗಳ ವೆಚ್ಚ ಕಡಿಮೆ ಮಾಡುವತ್ತಲೂ ಬಯೋ ಟೆಕ್ನಾಲಜಿ ಇಂಜಿನಿಯರ್‍ಗಳು ಹೆಚ್ಚಿನ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಸೌಜನ್ಯ ಮತ್ತು ಅರ್ಪಿತಾ ಪ್ರಾರ್ಥಿಸಿದರು. ಡಾ| ಬಿ.ಇ.ರಂಗಸ್ವಾಮಿ ಸ್ವಾಗತಿಸಿದರು. ಸುಷ್ಮಾ ಹೆಚ್.ಸಿ. ಅತಿಥಿಗಳನ್ನು ಪರಿಚಯಿಸಿದರು. ಪೂಜಾ ವಂದಿಸಿದರು. ನಿಹಾರಿಕಾ ರೆಡ್ಡಿ ಹಾಗೂ ಸಹನ ಗೌಡರ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link