ರಾಣೇಬೆನ್ನೂರು
ಮಹಾರಾಷ್ಟ್ರಾದ ಮಹಾಮಳೆಯಿಂದಾಗಿ ಹೆಚ್ಚು ನೀರು ಹರಿದು ಬಂದ ಪರಿಣಾಮವಾಗಿ ಸಾವಿರಾರು ಎಕರೆ ಹೊಲಗಳಲ್ಲಿ ಜಲಾವೃತವಾಗಿದ್ದು ಅನೇಕ ಹಳ್ಳಿಗಳಲ್ಲಿ ಮನೆಗಳು ನೆಲಸಮವಾಗಿದ್ದು ಸರಕಾರಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದರು.
ತಾಲೂಕಿನ ಲಿಂಗದಹಳ್ಳಿ, ನಂದಿಹಳ್ಳಿ, ಯಲಬಡಗಿ, ಗೋಡಿಹಾಳ, ನಿಟ್ಟೂರು, ಕುಪ್ಪೇಲೂರ, ತುಮ್ಮಿನಕಟ್ಟಿ, ಕುಸಗಟ್ಟಿ, ಫತ್ತೇಪೂರ, ನಿಟವಳ್ಳಿ, ಕೋಟಿಹಾಳ, ಹೊಳೆ ಆನ್ವೇರಿ, ಮುಸ್ಟೂರ, ಮುದೇನೂರ, ನಾಗೇನಹಳ್ಳಿ, ಮಾಕನೂರ ಗ್ರಾಮಗಳ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ಜನರ ಧ್ವನಿಯಾಗಿ ನೊಂದವರಿಗಾಗಿ ಸರ್ಕಾರಕ್ಕೆ ಪರಿಹಾರ ನೀಡಲು ಒತ್ತಾಯಿಸುವೆ. ಆದರೆ ಈಗಿನ ರಾಜ್ಯ ಸರ್ಕಾರಕ್ಕೆ ಕಾಲು-ಕೈ, ಕಿವಿ, ಮೂಗು ಇಲ್ಲದಂತಾಗಿ ಒಂಟೆತ್ತಿನ ಸರ್ಕಾರವಾಗಿ ಕುಂಟುತ್ತಾ ಸಾಗಿದೆ. ಮಂತ್ರಿಮಂಡಲ ವಿಸ್ತರಣೆ ಮಾಡುವ ಭರವಸೆಯು ಇಲ್ಲವಾಗಿ ವಿಶ್ವಾಸ ಕಳೆದುಕೊಂಡಿದ್ದು ಒಂದು ವೇಳೆ ಮಂತ್ರಿಮಂಡಲ ರಚನೆಯಾದರೂ ಹೆಚ್ಚು ಕಾಲ ಉಳಿಯದೇ ರಾಜ್ಯದಲ್ಲಿ ಅತೀ ಶೀಘ್ರದಲ್ಲಿಯೇ ಮಧ್ಯಂತರ ಚುನಾವಣೆ ಆಗಲಿದೆ ಎಂದು ಭವಿಷ್ಯ ನುಡಿದರು.
ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀರು ನುಗ್ಗಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚರಣೆ ಹೊರತು ಪಡಿಸಿ ಗಂಜಿಕೇಂದ್ರದಂಥಹ ಪರಿಸ್ಥಿತಿಯೇನು ನಿರ್ಮಾಣವಾಗಿಲ್ಲ. ಅವಶ್ಯಕತೆ ಇದ್ದಲ್ಲಿ ಸರ್ಕಾರದ ಮಾಹಿತಿ ಆಧರಿಸಿ ಗಂಜಿಕೇಂದ್ರ ತೆರೆಯಲು ಒತ್ತಾಯಿಸುವೆ ಎಂದರು.
ತಾಲೂಕ ಕಾಂಗ್ರೇಸ್ ಘಟಕದ ಅಧ್ಯಕ್ಷ ಮಂಜನಗೌಡ ಪಾಟೀಲ, ಜಿ.ಪಂ.ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಸದಸ್ಯೆ ಗಿರಿಜಮ್ಮ ಬ್ಯಾಲದಹಳ್ಳಿ, ತಾ.ಪಂ. ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರಮ್ಮ ಹೊನ್ನಾಳಿ, ನೀಲಕಂಠಪ್ಪ ಕುಸಗೂರ, ಪುಟ್ಟಪ್ಪ ಮರಿಯಮ್ಮನವರ, ಪ್ರಕಾಶ ಜೈನ್, ಕೃಷ್ಣಪ್ಪ ಕಂಬಳಿ, ಇಕ್ಬಾಲ್ಸಾಬ್ ರಾಣೇಬೆನ್ನುರು, ತಿರುಪತಿ ಅಜ್ಜನವರ, ಹನುಮಂತಪ್ಪ ಬ್ಯಾಲದಹಳ್ಳಿ, ಸಣ್ಣತಮ್ಮಪ್ಪ ಬಾರ್ಕಿ, ಗಿರೀಶ ಮಾಗನೂರ, ಸುರೇಶ ಭಾನುವಳ್ಳಿ ಸೇರಿದಂತೆ ಮತ್ತಿತರರು ಇದ್ದರು.