ಹೂವಿನಹಡಗಲಿ :
ಪ್ರಕೃತಿ ವಿಕೋಪದಿಂದ ತುಂಗಭದ್ರಾ ನದಿ ತೀರದ ರೈತರ ಜಮೀನಿಗೆ ಹಿನ್ನೀರಿನಿಂದ ಅಂದಾಜು 500 ಹೆಕ್ಟೇರ್ ಬೆಳೆ ನಾಶವಾಗಿದ್ದು, ಶೀಘ್ರ ಪರಿಶೀಲನೆ ನಂತರ 5 ದಿನಗಳಲ್ಲಿ ಬೆಳೆಹಾನಿ ಪರಿಹಾರದ ಚೆಕ್ಕನ್ನು ವಿತರಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ನಕುಲ್ ತಿಳಿಸಿದರು.
ಹರಪನಹಳ್ಳಿ ತಾಲೂಕಿನ ಹಲವಾಗಲು, ನಿಟ್ಟೂರು, ಗರ್ಭಗುಡಿ ಹಾಗೂ ಹೂವಿನಹಡಗಲಿ ತಾಲೂಕಿನ ಹರವಿ, ಸಿದ್ದಾಪುರ, ಕುರುವತ್ತಿ, ಬ್ಯಾಲಹುಣ್ಸಿ ಸೇರಿದಂತೆ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಹೂವಿನಹಡಗಲಿ ತಾಲೂಕಿನಲ್ಲಿ ಇದುವರೆಗೆ 259 ಮನೆಗಳು ಹಾನಿಗೀಡಾಗಿವೆ. ಮತ್ತು ಹರಪನಹಳ್ಳಿ ತಾಲೂಕಿನಲ್ಲಿ 179 ಮನೆಗಳು ಹಾನಿಯಾಗಿದ್ದು, ಹರಪನಹಳ್ಳಿ ತಾಲೂಕಿನ ನಿಟ್ಟೂರು, ಹಾಗೂ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮಗಳಲ್ಲಿ ಮುಳುಗಡೆಗೊಂಡ ವಾಸಿಗಳಿಗೆ ಪರ್ಯಾಯ ಸ್ಥಳದಲ್ಲಿ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಪ್ರವಾಹ ಕಡಿಮೆಯಾಗುವವರೆಗೂ ಕೂಡಾ ಇವರನ್ನು ಅದೇ ಸ್ಥಳದಲ್ಲಿ ವಾಸ್ತವ್ಯ ಹೂಡಲು ಸೂಚಿಸಿದ್ದು, ಮೂಲ ಸೌಕರ್ಯಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗಿದೆ ಎಂದರು.
ಹಾನಿಗೊಳಗಾದ ಮನೆಗಳಿಗೆ ಈಗಾಗಲೇ ಪರಿಹಾರ ನೀಡಲು ಚೆಕ್ ಸಿದ್ದಗೊಂಡಿದ್ದು, ಮೂರು ದಿನಗಳಲ್ಲಿ ಎಲ್ಲಾ ಸಂತ್ರಸ್ಥರಿಗೆ ಚೆಕ್ ವಿತರಣೆ ಮಾಡಲಾಗುವುದು ಎಂದ ಜಿಲ್ಲಾಧಿಕಾರಿಗಳು, ಗ್ರಾಮ ಪಂಚಾಯಿತಿವಾರು 3 ಪೊಲೀಸ್ ಒಂದು ಸಿವಿಲ್ ಸಿಬ್ಬಂದಿ ಮತ್ತು ಅಂಬ್ಯೂಲೆನ್ಸ ಸೇರಿದಂತೆ ರಕ್ಷಣಾ ತಂಡ ರಚಿಸಿದ್ದು, ಎಲ್ಲಾ ರೀತಿಯ ಮುಂಜಾಗ್ರತೆ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ತಾಲೂಕಿನಲ್ಲಿ 26 ಗ್ರಾಮಗಳು ನೆರೆ ಹಾವಳಿಗೆ ತುತ್ತಾಗಿದ್ದು, ಕೆಲವುಕಡೆ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಮಾಹಿತಿ ಬಂದಿದ್ದು, ಈಗಾಗಲೇ ತುಂಗಭದ್ರಾ ಡ್ಯಾಂನಿಂದ 25 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ. 2 ದಿನದಿಂದ ಡ್ಯಾಂನಿಂದ ಕಾಲುವೆ ಮತ್ತು ಕುಡಿಯುವ ನೀರಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿರುವುದರಿಂದ ಕ್ರಮೇಣವಾಗಿ ತುಂಗಭದ್ರಾ ಡ್ಯಾಂನ ನೀರಿನ ಮಟ್ಟ ಕಡಿಮೆಯಾಗುತ್ತಿರುವುದರಿಂದ ನದಿ ತೀರದ ಅಪಾಯದಲ್ಲಿರುವ ಗ್ರಾಮಗಳು ಮತ್ತು ಸಂಪರ್ಕ ಕಡಿತಗೊಂಡ ರಸ್ತೆಗಳು ಸಂಚಾರ ಸುವ್ಯವಸ್ಥಿತಗೊಳ್ಳಬಹುದು ಎಂದರು. ನೆರೆಹಾವಳಿಯಿಂದ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಉಂಟಾದ ಹಾನಿಯ ಬಗ್ಗೆ ಸಂಪೂರ್ಣ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಜಿ.ಪಂ.ಸದಸ್ಯ ಎಸ್.ಕೊಟ್ರೇಶ ಹೊಳಲು ಗ್ರಾ.ಪಂ. ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಜಿ.ಪಂ. ಸಿಇಓ ನಿತೀಶ, ತಹಶೀಲ್ದಾರ ರಾಘವೇಂದ್ರರಾವ್, ಇಓ ಯು.ಎಚ್.ಸೋಮಶೇಖರ, ಡಿ.ವೈ.ಎಸ್.ಪಿ. ಮಲ್ಲನಗೌಡ ಹೊಸಮನಿ, ಸಿಪಿಐ ಮಾಲತೇಶ ಕೋನಬೇವು, ಟಿ.ಹೆಚ್.ಓ. ಬದ್ಯನಾಯ್ಕ, ಸೇರಿದಂತೆ ಹಲವರು ಇದ್ದರು.