ಚಿತ್ರದುರ್ಗ :
ಬಸವ ಸಮಾಜ ಎಂದರೆ ಶರಣ ಸಮಾಜ. ಅದು ಅಕ್ಕರೆ ಸಮಾಜ, ಅಂತಃಕರಣದ ಸಮಾಜ ಮತ್ತು ಅಪ್ಪಿಕೊಳ್ಳುವ ಸಮಾಜವಾಗಿತ್ತು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.ಹೊಳಲ್ಕೆರೆ ತಾಲ್ಲೂಕು ಆವಿನಹಟ್ಟಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು
ಎಲ್ಲ ಸಮಾಜ ಸುಧಾರಕರು ಅಸ್ಪøಶ್ಯತೆಯ ವಿರುದ್ಧ ಹೋರಾಡಿದರು. ಸರ್ವ ದಾರ್ಶನಿಕರ ಆಚಾರ ವಿಚಾರಗಳನ್ನು ನೆನಪಿಸುವ ಕೆಲಸ ಮುರುಘಾಮಠ ಮಾಡುತ್ತಿದೆ. ಎಲ್ಲ ಜನರು ಜಾಗೃತಿಗೆ ಒಳಗಾಗಬೇಕು ಎಂದು ನಾವು ಎಲ್ಲ ಜನಾಂಗದ ಬಳಿಗೆ ಹೋಗಿದ್ದೇವೆ. ಜಾತಿ ನಿವಾರಣೆ ಮಾಡಲು ಬಸವಣ್ಣನವರು ಕಲ್ಯಾಣ ಬಿಡಬೇಕಾಯಿತು. ನಮ್ಮ ದೇಶದಲ್ಲಿ ಜಾತೀಯತೆ ಎನ್ನುವುದು ಜೇನುಗೂಡು ಇದ್ದಂತೆ. ಆದರೆ ಅದರಲ್ಲಿ ಒಂದು ಸಮ ಸಮಾಜದ ಕಳಕಳಿ ಇದೆ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತ ಮುರುಘಾಮಠ ಸಾಗುತ್ತಿದೆ ಎಂದರು.
ಸಾಹಿತಿ ನಿರಂಜನ ದೇವರಮನೆ ಮಾತನಾಡಿ, ವೈಚಾರಿಕತೆ ಜೊತೆ ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಆವಿನಹಟ್ಟಿ ಗ್ರಾಮ ಎಲ್ಲ ಸ್ಥರಗಳಲ್ಲಿ ಮೇಲ್ಪಂಕ್ತಿಯಲ್ಲಿದೆ. ಯಶಸ್ವಿ ಮನುಷ್ಯನಾಗವುದರ ಜೊತೆಗೆ ಯೋಗ್ಯ ವ್ಯಕ್ತಿಯಾಗಬೇಕು. ನಾವು ಮೊದಲು ಮಾನವರಾಗಬೇಕು. ಮೂಢನಂಬಿಕೆಗಳಿಂದ ಮುಕ್ತನಾಗಬೇಕು ಎಂದರು
ಮಾನವ ಜನ್ಮ ದೊಡ್ಡದಲ್ಲ;ಮಾನವೀಯತೆ ದೊಡ್ಡದು.
12ನೇ ಶತಮಾನ ಮಹತ್ವಪೂರ್ಣವಾದುದು. ಸಮಾಜದ ಎಲ್ಲ ಜನರನ್ನು ಒಗ್ಗೂಡಿಸುವುದು ಬಸವಾದಿ ಶರಣರ ಕೆಲಸವಾಗಿತ್ತು. ಅಂದು ಕಾಯಕ ಶ್ರೇಷ್ಠವಾಗಿತ್ತು. ಕಾಯಕದಲ್ಲಿ ದೇವರನ್ನು ಕಾಣಬೇಕು. ಕ್ರಿಯಾಶುದ್ಧಿ, ಭಾವ ಶುದ್ಧಿ ನಮ್ಮದಾಗಬೇಕು. ಕೆಲವು ಧಾರ್ಮಿಕರು ಮೌಢ್ಯ, ಕಂದಾಚಾರಗಳನ್ನು ನಮ್ಮಂತಹ ಜ್ಞಾನವಿಲ್ಲದವರ ಮೇಲೆ ಹೇರಿದರು. ಆದರೆ ವಚನಕಾರರು ಇದನ್ನು ಕಿತ್ತೊಗೆದರು. ಕಂದಾಚಾರಗಳಿಂದ ನಾವು ಮುಕ್ತರಾಗಬೇಕು. ನಾವು ಚಲನಶೀಲರಾಗಬೇಕು. ಸೂತಕಗಳನ್ನು ನಾವು ಬಿಟ್ಟು ಬಿಡಬೇಕು. ಅರಿವನ್ನು ಪಡೆಯಬೇಕು ಎಂದರು.
ಮಾಜಿ ಶಾಸಕ ಉಮಾಪತಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಬಹಳಷ್ಟು ಜನ ಯಾದವ ಸಮುದಾಯಕ್ಕೆ ಸೇರಿದವರು. ನಮ್ಮಲ್ಲಿ ಮೂಢನಂಬಿಕೆ ಜಾಸ್ತಿ ಇದೆ. ಶರಣರು ಬರುವುದರಿಂದ ನಮ್ಮ ಊರು ಆವಿನಹಟ್ಟಿ ಅರಿವಿನ ಹಟ್ಟಿಯಾಗಬೇಕು. ನಮ್ಮ ಊರಿನಲ್ಲಿ ಹಸು ಮತ್ತು ಎತ್ತುಗಳನ್ನು ಸಾಕುತ್ತಿದ್ದರು. ನಮ್ಮೂರಿನ ಎತ್ತುಗಳು ದೆಹಲಿಗೆ ಹೋದಾಗ ಮಹಾರಾಜರು ಬಹುಮಾನ ಕೊಟ್ಟ ಪರಂಪರೆ ನಮ್ಮ ಊರಿನದು. ಸಾಕಷ್ಟು ಮೌಢ್ಯ ಇದ್ದ ನಮ್ಮ ಊರಿನಲ್ಲಿ ಇಂದು ಬಹಳಷ್ಟು ಜನ ವಿದ್ಯಾವಂತರಾಗಿದ್ದಾರೆ. ಆದರೂ ಮೌಢ್ಯ ಇನ್ನೂ ಇದೆ. ನಮ್ಮ ಊರಿಗೂ ಮುರುಘಾಮಠಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಕೇತೇಶ್ವರ ಸ್ವಾಮಿಗಳು, ತಿಪ್ಪೇರುದ್ರ ಸ್ವಾಮಿಗಳು, ತಿಳುವಳ್ಳಿ ಸ್ವಾಮಿಗಳು, ಮುರುಗೇಶ್, ತಿರುಮಲೇಶ್, ನಾಗರಾಜಪ್ಪ, ಬಿ.ಪಿ. ಓಂಕಾರಪ್ಪ ಮತ್ತಿತರರಿದ್ದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ರಾಮಚಂದ್ರಪ್ಪ ಸ್ವಾಗತಿಸಿದರು. ಶ್ರೀನಿವಾಸ್ ನಿರೂಪಿಸಿದರು.