ಸಮಸ್ಯೆಗೆ ಅಧಿಕಾರಿಗಳೇ ಹೊಣೆಗಾರರು : ಶಾಸಕ ಟಿ.ರಘುಮೂರ್ತಿ

0
4

ಚಳ್ಳಕೆರೆ

         ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕೇಂದ್ರಗಳೂ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಕುಡಿಯುವ ನೀರಿನ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ವಿಶೇಷ ತುರ್ತು ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ನೂತನ ಸಭಾಂಗಣದಲ್ಲಿ ಶುಕ್ರವಾರ ನಡೆಸಲಾಯಿತು.

       ಈ ವಿಶೇಷ ಸಭೆಗೆ ಪರಿಹಾರವನ್ನು ರೂಪಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೊಟ್ರಬಸಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಈಶ್ವರಪ್ರಸಾದ್ ಎಲ್ಲರನ್ನೂ ಸ್ವಾಗತಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷತೆ ಕವಿತಾರಾಮಣ್ಣ, ಉಪಾಧ್ಯಕ್ಷೆ ತಿಪ್ಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತಿ ವಹಿಸಿದ್ದರು.

         ಸಭೆಯ ಪ್ರಾರಂಭದಲ್ಲೇ ಶಾಸಕ ಟಿ.ರಘುಮೂರ್ತಿ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮಲೆಕ್ಕಾಧಿಕಾರಿ ಹಾಗೂ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಕೂಲಂಕುಷ ಚರ್ಚೆ ನಡೆಸಿದರು. ಪ್ರಸ್ತುತ ಮಳೆ ಕಡಿಯಾಗಿದ್ದು, ಎಲ್ಲೆಡೆ ನೀರಿನ ಅಭಾವ ಎದ್ದು ಕಾಣುತ್ತಿದೆ. ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದ ಕೆಲವು ಗ್ರಾಮಗಳಲ್ಲಿ ತೀರ್ವ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಬೋರ್‍ವೆಲ್‍ಗಳಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ಟ್ಯಾಂಕರ್‍ಗಳ ಮೂಲಕವಾದರೂ ನೀರು ಸರಬರಾಜು ಮಾಡುವಂತೆ ಸೂಚನೆ ನೀಡಿದರು.

         ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ರವೀಂದ್ರ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿಯೇ ಪ್ರತ್ಯೇಕ ಹಣದ ವ್ಯವಸ್ಥೆಯನ್ನು ಮಾಡಲಾಗಿದೆ. ಚಳ್ಳಕೆರೆ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಅಂದಾಜು 2 ಕೋಟಿ ಹಣವನ್ನು ಕುಡಿಯುವ ನೀರು ಸರ¨ರಾಜಿಗಾಗಿ ಇಲಾಖೆ ಮೀಸಲಿಟ್ಟಿದೆ. ತಾಲ್ಲೂಕು ಮಟ್ಟದ ಕುಡಿಯುವ ನೀರು ಇಲಾಖೆಯ ಇಂಜಿನಿಯರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮಲೆಕ್ಕಾಧಿಕಾರಿ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತಂದು ತಹಶೀಲ್ದಾರರು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ವಾಸ್ತಸ್ಥಿತಿಯ ಬಗ್ಗೆ ವರದಿ ನೀಡಿ ಹಣವನ್ನು ಮಂಜೂರಾತಿ ಪಡೆದು ಟ್ಯಾಂಕ್ ಅಥವಾ ಖಾಸಗಿಯಾಗಿ ನೀರು ಸರಬರಾಜು ಮಾಡುವಂತೆ ಸೂಚಿಸಿದರು.

        ಯಾವುದೇ ಕಾರಣಕ್ಕೂ ಯಾವ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗದಂತೆ ಎಚ್ಚರಿಕೆ ವಹಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಖಾಸಗಿ ವ್ಯಕ್ತಿಗಳಿಂದ ನೀರು ಪಡೆದಲ್ಲಿ ಅವರಿಗೆ ಮಾಸಿಕ ಕನಿಷ್ಟ 15 ಸಾವಿರ ನೀಡಲು ಅವಕಾಶವಿದ್ದು, ಇದನ್ನು ಸಹ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.

         ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೊಟ್ರಬಸಪ್ಪ ಮಾತನಾಡಿ, ಒಟ್ಟು 123 ಕೋಟಿಗಳ ಅಂದಾಜು ಯೋಜನೆಯನ್ನು ಮಂಜೂರಾತಿಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಅಭಾವ ನಿರೀಕ್ಷೆಗೂ ಮೀರಿ ಹೆಚ್ಚಾಗಲಿದೆ. ಅದ್ದರಿಂದ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕು ಮಟ್ಟದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹಣ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದರು.

          ಕೃಷಿ ಇಲಾಖೆ ಅಧಿಕಾರಿ ಎನ್.ಮಾರುತಿ ಮಾಹಿತಿ ನೀಡಿ, ತಾಲ್ಲೂಕಿನಾದ್ಯಂತ ಬೆಳೆನಷ್ಟ ಅಂದಾಜು 56 ಕೋಟಿ ಎಂದು ಈಗಾಗಲೇ ಇಲಾಖೆಗೆ ಮಾಹಿತಿ ನೀಡಲಾಗಿದೆ. ಬಿತ್ತಿದ ಎಲ್ಲಾ ಶೇಂಗಾ ಬೆಳೆ ಸಂಪೂರ್ಣವಾಗಿ ಒಣಗಿ ನೆಲಕಚ್ಚಿದೆ. ಬೆಳೆ ನಷ್ಟವನ್ನು ಆಫ್ ಮೂಲಕ ಅಂದಾಜಿಸಲಾಗಿದೆ.

          ಸ್ವ್ಲಿಂಕ್ಲರ್ ಸೆಟ್ ಮತ್ತು ತಾಡಪಾಲುಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಬೆಳೆ ನಷ್ಟ ಪರಿಹಾರ ಕುರಿತು ನೀಡಿದ ವರದಿ ಅನುಷ್ಠಾನಗೊಳಿಸುವಂತೆ ಜಾಗೃತೆ ವಹಿಸಬೇಕು ಎಂದರು. ರೈತ ಸಮುದಾಯಕ್ಕೆ ಸೂಕ್ತ ಸಂದರ್ಭದಲ್ಲಿ ಮಾಹಿತಿ ನೀಡಬೇಕೆಂದು ಸೂಚಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಮಾತನಾಡಿ, ಇತ್ತೀಚಿಗಷ್ಟೇ ತಾಲ್ಲೂಕಿನ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೊಸದಾಗಿ ವೈದ್ಯರನ್ನು ನೇಮಿಸಲಾಗಿದ್ದು, ಎರಡು ಕಡೆ ಮಾತ್ರ ವೈದ್ಯರು ಕರ್ತವ್ಯಕ್ಕೆ ಹಾಜರಾಗಿಲ್ಲವೆಂದರು.

        ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ, ಪ್ರತಿಗ್ರಾಮಗಳಿಗೂ ಕಂದಾಯ ಇಲಾಖೆ ಹಾಗೂ ಇತರೆ ಇಲಾಖೆಗಳ ಸಿಬ್ಬಂದಿ ಜಮೀನುಗಳಿಗೆ ಭೇಟಿ ನೀಡಿ ಬೆಳೆ ನಷ್ಟವನ್ನು ದೃಢೀಕರಿಸಲಾಗಿದೆ. ಆದರೆ, ಇತ್ತೀಚಿಗೆ ಕೆಲವೊಂದು ಗ್ರಾಮಗಳಲ್ಲಿ ಮಾತ್ರ ರೈತರು ಸಮೀಕ್ಷೆ ನಡೆಸಿಲ್ಲವೆಂದು ಆರೋಪಿಸಿದ್ಧಾರೆ. ಆದರೆ, ಈ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ ಸಮೀಕ್ಷೆ ನಡೆಸಲಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ಮಾಹಿತಿ ನೀಡಿ, ಸರ್ಕಾರ ಇದೇ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಲು ಸೂಚನೆ ನೀಡಿದೆ.

          ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಅವಕಾಶ ದೊರಕಿದ್ದು 1 ರಿಂದ 16ನೇ ವಯಸ್ಸಿನ ಮಕ್ಕಳು ಸೇರ್ಪಡೆಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ನ.14ರಂದು ತಾಲ್ಲೂಕು ಮಟ್ಟದಲ್ಲಿ ವಿಶೇಷ ದಾಖಲಾತಿ ಅಂದೋಲನ ನಡೆಸಲಿದ್ದು ಎಲ್ಲಾ ಅಧಿಕಾರಿಗಳು ಸಹಕಾರ ನೀಡುವಂತೆ ಮನವಿ ಮಾಡಿದರು.

        ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಿ.ಆರ್.ಮಂಜಪ್ಪ ಮಾಹಿತಿ ನೀಡಿ, ಪ್ರಸ್ತುತ ಈಗಿರುವ ಎಲ್ಲಾ ಹಾಸ್ಟಲ್‍ಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಕೆಲವೆಡೆ ಸಿಸಿ ಟಿ.ವಿ.ಅಳವಡಿಸುವ ಯೋಜನೆ ಇದೆ. ಪ್ರಸ್ತುತ ಹಾಸ್ಟಲ್‍ಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಹೆಚ್ಚುವರಿಯಾಗಿ ಹಾಸ್ಟಲ್ ವ್ಯವಸ್ಯೆ ಕಲ್ಪಿಸುವಂತೆ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.

        ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಎಇಇ ಮುಜೀಬ್ ಮಾತನಾಡಿ, ಅಂಗನವಾಡಿ ಕಟ್ಟದ ನಿರ್ಮಾಣಕ್ಕೆ 1 ಕಟ್ಟಡಕ್ಕೆ 8 ಲಕ್ಷ ಹಣವನ್ನು ಸರ್ಕಾರ ನಿಗದಿಗೊಳಿಸಿದೆ. ಎನ್‍ಆರ್‍ಇಜಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ತಾಲೂಕು ವ್ಯಾಪ್ತಿಯಲ್ಲಿ 13 ಅಂಗನವಾಡಿ ಕಟ್ಟಡ ನಿರ್ಮಾಣವಾಗಬೇಕಿದೆ ಎಂದರು. ಶಾಸಕರು ಮಾತನಾಡಿ, ಎಲ್ಲಿಯೂ ಯಾವ ಕಾಮಗಾರಿ ಕಳಪೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಳಪೆ ಕಾಮಗಾರಿಯಾದಲ್ಲಿ ಅಧಿಕಾರಿಯನ್ನೇ ಹೊಣೆ ಮಾಡಲಾಗುವುದು ಎಂದರು.

         ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ಸಣ್ಣ ಸೂರಯ್ಯ, ನಾಗೇಂದ್ರಪ್ಪ, ಸಿ.ಕರಡಪ್ಪ, ಉಮಾ, ಸುವರ್ಣಮ್ಮ, ತಿಪ್ಪೇಸ್ವಾಮಿ, ತಿಪ್ಪಕ್ಕ, ಕಾಲುವೇಹಳ್ಳಿ ಶ್ರೀನಿವಾಸ್, ಎಚ್.ಆಂಜನೇಯ, ಜಿ.ವೀರೇಶ್, ಸಮರ್ಥರಾಯ ಮತ್ತು ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here