ಜ್ಞಾನ ಗಳಿಕೆಯೇ ಶಿಕ್ಷಣದ ಗುರಿಯಾಗಬೇಕು : ಮಂಜುನಾಥ ಕರ್ಕಿ

ದಾವಣಗೆರೆ :

     ಜ್ಞಾನ ಗಳಿಕೆಯೇ ಶಿಕ್ಷಣದ ಗುರಿ ಆಗಬೇಕೇ ಹೊರತು, ಹಣ ಗಳಿಕೆಯಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ ಕುರ್ಕಿ ಅಭಿಪ್ರಾಯಪಟ್ಟರು.

    ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಸಿದ್ಧಗಂಗಾ ಮಕ್ಕಳ ಲೋಕ, ಜಿಲ್ಲಾ ಮಕ್ಕಳ ಸಾಹಿತ್ಯ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ಮಕ್ಕಳ ಲೋಕದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಇಂದು ಬಹುತೇಕರು ಒಳ್ಳೆಯ ನೌಕರಿ ಹಿಡಿದು, ಕೈ ತುಂಬ ಸಂಪಾದನೆ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಂಡು ಶಿಕ್ಷಣ ಪಡೆಯುತ್ತಿರುವುದು ಸರಿಯಲ್ಲ. ಇವೆಲ್ಲವುದಕ್ಕಿಂತ ಜ್ಞಾನ ಗಳಿಕೆಯೇ ಶಿಕ್ಷಣದ ಮೂಲ ಗುರಿಯನ್ನಾಗಿಸಿಕೊಂಡು ಶಿಕ್ಷಣ ಪಡೆಯಬೇಕೆಂದು ಕಿವಿಮಾತು ಹೇಳಿದರು.

    ಪ್ರಸ್ತುತ ಬದಲಾವಣೆಗೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಬೇಕು ಹಾಗೂ ಅವುಗಳನ್ನು ಮಕ್ಕಳಿಗೆ ಅರ್ಥ ಆಗುವಂತೆ ರೂಪಿಸಬೇಕೆಂಬುದು ಕಸಾಪದ ಆಶಯವಾಗಿದೆ ಎಂದ ಅವರು, ಮಕ್ಕಳು ಒಳ್ಳೆಯ ಅಂಕಗಳಿಸಿ, ಉನ್ನತ ಹುದ್ದೆಗೇರಿ ಕೈತುಂಬ ದುಡಿಯಬೇಕೆಂಬ ದುರಾಸೆಯಿಂದ ಪೋಷಕರು ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಿ, ಅವರ ಬಾಲ್ಯದ ಹಕ್ಕು ಕಿತ್ತುಕೊಂಡು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಧಕ್ಕೆ ತರುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ಮಾನವೀಯ ಸಂಬಂಧ ಹಾಗೂ ಮೌಲ್ಯಗಳು ಅಧಃಪತನ ಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬಬೇಕಾಗಿರುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಮಕ್ಕಳಿಗೆ ಮೌಲ್ಯಯುತ ಹಾಗೂ ಸಂಸ್ಕಾರಯುತ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಆಸ್ತಿಯನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.

     ಇಂದು ತಂತ್ರಜ್ಞಾನ ಬೆಳೆದಂತೆ ಮಕ್ಕಳು ಸಹ ತಮಗೆ ಬೇಕಾದ ಮಾಹಿತಿಗಳನ್ನು ಶಿಕ್ಷಕರಿಂದ ಪಡೆಯುವ ಬದಲು, ಅಂತರ್ಜಾಲಗಳ ಮೊರೆ ಹೋಗಿದ್ದಾರೆ. ಹೀಗಾಗಿ ಶಿಕ್ಷಕರು ಕೇವಲ ಶಾಲೆಯಲ್ಲಿನ ಗುರುವಾಗಿ ಮಾತ್ರವೇ ಉಳಿದಿದ್ದಾರೆ. ಹೀಗಾಗಿ ಗುರು-ಶಿಷ್ಯರ ಸಂಬಂಧ ಅಷ್ಟು ಗಟ್ಟಿಯಾಗಿ ಉಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ತನ್ನನ್ನು ತಾನು ಅರಿತ ವ್ಯಕ್ತಿ ಸಮಾಜದ ಆಸ್ತಿ ಆಗಬಲ್ಲ. ಆದ್ದರಿಂದ ಕಸಾಪ ಮತ್ತು ಮಕ್ಕಳ ಲೋಕ ಸಂಸ್ಥೆಗಳು ಶಾಲಾ-ಕಾಲೇಜು ಅಂಗಳದಲ್ಲಿ ಹಲವು ದತ್ತಿ ಉಪನ್ಯಾಸಗಳನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ತನ್ನನ್ನು ತಾನು ಅರಿಯುವಂತಹ ಜ್ಞಾನವನ್ನು ಬಿತ್ತುವ ಕೆಲಸ ಮಾಡಲಾಗುತ್ತಿದೆ. ಅಲ್ಲದೇ, ಮಕ್ಕಳಿಗೆ ನೈತಿಕತೆ, ಸದ್ಗುಣದ ಬೀಜಗಳನ್ನು ಬಿತ್ತುತ್ತಾ ಸಾಧಕರ ಜೀವನ ಚರಿತ್ರೆಗಳನ್ನು ಮಕ್ಕಳಿಂದ ಓದಿಸುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸಲಾಗುತ್ತಿದೆ ಎಂದರು.

   ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಕಸಾಪ ಜಿಲ್ಲಾ, ತಾಲೂಕು ಘಟಕಗಳು ಜಿಲ್ಲೆಯ ಪ್ರತಿ ಶಾಲೆ ,ಕಾಲೇಜುಗಳಿಗೆ ತೆರಳಿ ದತ್ತಿ ಉಪನ್ಯಾಸ ನೀಡುವ ಮೂಲಕ ದೇಶ ಭಕ್ತಿ, ಕಲೆ, ಸಾಹಿತ್ಯ, ಶಿಕ್ಷಣದ ಬಗ್ಗೆ ಬೋಧನೆ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ದಾರ್ಶನಿಕರ, ಆದರ್ಶ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಜೀವನ ನಡೆಸಲು ಸಹ ಪ್ರೇರಣೆ ನೀಡಬೇಕಾದ ಅವಶ್ಯಕತೆ ಇದೆ ಎಂದು ನುಡಿದರು.ಇದೇ ಸಂದರ್ಭದಲ್ಲಿ ನಾಟ್ಯ ಭಾರತಿ ನೃತ್ಯ ಸಂಗೀತ ಶಾಲೆ ಪ್ರಾಚಾರ್ಯೆ ರಜನಿ ರಘುನಾಥ ಕುಲಕರ್ಣಿ, ವಾಣಿ ಆರ್.ಮಳಲಿ, ಪಿ.ಆರ್.ಜಯಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಕಸಾಪ ತಾಲೂಕು ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀಸಿದ್ದಗಂಗಾ ಮಕ್ಕಳ ಲೋಕದ ಸಂಸ್ಥಾಪಕ ಕೆ.ಎನ್.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ಚಂದ್ರಶೇಖರ ಅಡಿಗ, ಕಲಾಕುಂಚ ಸಾಂಸ್ಕøತಿಕ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಜಿ.ಸಿ. ಶಿಲ್ಪ, ಜಿ.ಸಿ.ನಿರ್ಮಲ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link