ದಾವಣಗೆರೆ:
ಜೀವನದಲ್ಲಿ ಕಷ್ಟಗಳನ್ನು ಉಂಡವರೇ ಸಾಧಕರಾಗಿ ಹೊರಹೊಮ್ಮಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅಭಿಪ್ರಾಯಪಟ್ಟರು.
ನಗರದ ರಾಜನಹಳ್ಳಿ ಸೀತಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಯಾವುದೇ ರೀತಿಯ ಕಷ್ಟ ಪಡದೇ ಇರುವವರು ದೊಡ್ಡ ಸಾಧನೆ ಮಾಡಲಾಗಿಲ್ಲ.
ಆದರೆ, ಬದುಕಿನಲ್ಲಿ ಕಷ್ಟ, ಸಮಸ್ಯೆಗಳನ್ನು ಉಂಡವರೆ ಸಾಧಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.
ಇಂದು ಸಮಸ್ಯೆಗಳು ಇಲ್ಲದ ಮನುಷ್ಯರೇ ಸಿಗುವುದಿಲ್ಲ. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ರೀತಿಯ ಸಮಸ್ಯೆ ಇದ್ದೇ ಇರುತ್ತದೆ. ಆದರೆ, ಸಮಸ್ಯೆಗಳು ಬಂದಾಗ ಎದೆಗುಂದದೆ ಮುನ್ನುಗ್ಗುವ ಆತ್ಮಸ್ಥೈರ್ಯವನ್ನು ಪ್ರತಿಯೊಬ್ಬರೂ ಬೆಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬದುಕಿನಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಕಲಿಯಬೇಕು. ಏಕೆಂದರೆ, ಪರಿಹಾರ ಹುಡುಕಿಕೊಂಡು ಹೋದವರಿಂದಲೇ ಜಗತ್ತಿನಲ್ಲಿ ಸಂಶೋಧನೆ, ಆವಿಷ್ಕಾರಗಳು ನಡೆದಿವೆ ಎಂದ ಅವರು, ವಿದ್ಯಾರ್ಥಿಗಳು ಹೆಚ್ಚಾಗಿ ಜ್ಞಾನವನ್ನು ಪಡೆಯುವುದರ ಜತೆಗೆ ಆರೋಗ್ಯ, ಸ್ವಚ್ಛತೆ, ಶಿಸ್ತು, ಯೋಚನೆ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಇವುಗಳಿಗೆ ಸೀಮಿತವಾಗದೆ, ನಿಮ್ಮ ಮುಂದಿರುವ ಸಾಕಷ್ಟು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧನೆಯತ್ತ ಮುಖ ಮಾಡಬೇಕೆಂದು ಕರೆ ನೀಡಿದರು.ಹಿಂದೆ ಮಹಿಳೆಯರು ಮಿಲಿಟ್ರಿಯಲ್ಲಿ ಅಲ್ಪಾವಧಿಗೆ ಮಾತ್ರ ಕೆಲಸ ಮಾಡಲು ಸವಕಾಶವಿತ್ತು. ಎರಡು ವರ್ಷ ತರಬೇತಿ, ಐದು ವರ್ಷ ಕೆಲಸ ಒಟ್ಟು ಏಳು ವರ್ಷಗಳಿಗೆ ಸೀಮಿತವಾಗಿತ್ತು. ಆದರೆ, ಮಹಿಳೆಯರು ಕಾಯಂ ಆಗಿ ಕೆಲಸ ಮಾಡಬಹುದು ಮತ್ತು ಮುಂಬಡ್ತಿಯೂ ಪಡೆಯಬಹುದು ಎಂಬುದಾಗಿ ಭಾರತದ ಸರ್ವೋಚ್ಛ ನ್ಯಾಯಾಲಯ ಆದೇಶ ಮಾಡಿದೆ. ಆದ್ದರಿಂದ ನೀವು(ವಿದ್ಯಾರ್ಥಿನಿಯರು) ಸೈನ್ಯದಲ್ಲಿ ಕೂಡ ಸಾಧನೆ ಮಾಡಲು ಅವಕಾಶವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್‍ಪಿ ಎನ್.ರುದ್ರಮುನಿ ಮಾತನಾಡಿ, ಹಲವು ಸಾರ್ವಜನಿಕರಲ್ಲಿ ಪೊಲೀಸರು ಎಂದಾಕ್ಷಣ ಭಯ ಪಡುತ್ತಾರೆ. ಆದ್ದರಿಂದ ಈ ಭಯವನ್ನು ಹೋಗಲಾಡಿಸಲು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯನ್ನು ಆರಂಭಿಸಲಾಗಿದೆ. ಮಹಿಳೆಯರನ್ನು ಪುರುಷರು ವಿಚಿತ್ರವಾಗಿ ನಡೆಸಿಕೊಳ್ಳುವುದು ನಿಲ್ಲಬೇಕು ಎಂಬುದನ್ನು ಇದರ ಮೂಲಕ ಅರಿವು ಮೂಡಿಸಲಾಹಗುತ್ತಿದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಓದಿದರೂ ಸಾಲದು. ಪ್ರತಿಯೊಬ್ಬರಲ್ಲಿ ಛಲ, ಧೈರ್ಯ ಬಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗಲಿದೆ. ಮಹಿಳೆಯರಿಗೆ ಸಾಕಷ್ಟು ಸವಲತ್ತುಗಳು ಇವೆ. ಅವುಗಳನ್ನು ಉಪಯೋಗಿಸಿಕೊಂಡು ಮುಂದೆ ಬರಬೇಕು ಎಂದ ಅವರು, ಸಾಧನೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ಮೊಬೈಲ್ ಅನ್ನು ಅಗತ್ಯಕ್ಕೆ ತಕ್ಕಷ್ಟೇ ಬಳಸಬೇಕು. ಮೊಬೈಲ್ ಬಳಕೆ ಕಡಿಮೆಯಾದಷ್ಟು ಸಾಧನೆ ದೊಡ್ಡದಾಗಲಿದೆ ಎಂದರು.
ಕಾಲೇಜಿನ ಉಪ ಪ್ರಾಂಶುಪಾಲ ಎ.ಆರ್.ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪ ನಿರ್ಧೇಶಕರ ಕಚೇರಿಯ ಶಿಕ್ಷಣಾಧಿಕಾರಿ ನಿರಂಜನಮೂರ್ತಿ, ಪ್ರಾಚಾರ್ಯ ಎನ್.ರಾಜು, ಶಿವಮೊಗ್ಗ ಕೆಎಸ್‍ಆರ್‍ಪಿ ಅಸಿಸ್ಟೆಂಟ್ ಕಮಾಂಡೆಂಟ್ ದಾವುಲ್ ಸಾಬ್, ಶಿವಮೊಗ್ಗ ಕೆಎಸ್‍ಆರ್‍ಪಿ 8ನೇ ಪಡೆ ಪಿಎಸ್‍ಐ ರಮೇಶ್ ಪಿ.ಎಂ, ಸುರೇಶ್ ಎಚ್.ಬಿ. ಮತ್ತಿತರರು ಉಪಸ್ಥಿತರಿದ್ದರು.ತ್ರಿವೇಣಿ ಶಿರಹಟ್ಟಿ ಪ್ರಾರ್ಥಿಸಿದರು. ಕೆ.ಎಂ.ಕೊಟ್ರೇಶ್ ಸ್ವಾಗತಿಸಿದರು. ಲಕ್ಷ್ಮಪ್ಪ ಬಣಗಾರ ವಂದಿಸಿದರು. ಪುಟ್ಟಪ್ಪ ಎಸ್.ಟಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
