ಚಿತ್ರದುರ್ಗ:
ವರ್ಷವಿಡಿ ನೆಲ್ಲಕ್ಕಿ ತಿಂದು ಬಿಪಿ, ಶುಗರ್ ತರಿಸಿಕೊಳ್ಳುವ ಬದಲು ಸಿರಿಧಾನ್ಯವನ್ನು ಸೇವಿಸಿ ನಿರೋಗಿಗಳಾಗಿರುವಂತೆ ಮುರುಘಾಮಠದ ಡಾ.ಶಿವಮೂರ್ತಿ ಶರಣರು ಬ್ರಹ್ಮಪುರ(ದಗ್ಗೆ) ಗ್ರಾಮಸ್ಥರಿಗೆ ತಿಳಿಸಿದರು.ಹೊಳಲ್ಕೆರೆ ತಾಲೂಕು ಬ್ರಹ್ಮಪುರ(ದಗ್ಗೆ)ಯಲ್ಲಿ ಭಾನುವಾರ ನಡೆದ ಶ್ರಾವಣ ಮಾಸದ ವಿಶೇಷ ಕಲ್ಯಾಣ ದರ್ಶನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಬ್ಬ ರೈತ ಜಮೀನಿನಲ್ಲಿ ಯಾವ ಬೆಳೆ ಬಿತ್ತುತ್ತಾನೋ ಇನ್ನುಳಿದ ರೈತರೆಲ್ಲಾ ಅದನ್ನೇ ಬಿತ್ತುವ ರೂಢಿಯಾಗಿರುವುದರಿಂದ ಏಕ ಬೆಳೆ ಪದ್ದತಿ ಜಾಸ್ತಿಯಾಗಿ ಅನ್ನದಾತ ರೈತ ಅಸಹಾಯಕನಾಗಿದ್ದು, ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾನೆ. ಎಲ್ಲಾ ರೈತರು ಮೆಕ್ಕೆಜೋಳ ಬೆಳೆಯುವುದು. ಅಡಿಕೆ ತೋಟ ಹೀಗೆ ಒಂದೇ ಬೆಳೆಗೆ ಅವಲಂಭಿಸಿರುವುದರಿಂದ ಆರ್ಥಿಕ ವ್ಯವಸ್ಥೆ ಕುಗ್ಗಿದೆ.
ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ರೈತ ಬೆಳಯುತ್ತಿದ್ದ ಬೆಳೆಗಳ ವಿಧಾನ ವಿಭಿನ್ನವಾಗಿತ್ತು. ರಾಗಿ, ಜೋಳ, ಸಜ್ಜೆ, ತೊಗರಿ, ಅವರೆ, ಹಲಸಂದೆ, ಉದ್ದು ಬೆಳೆ ತೆಗೆಯುತ್ತಿದ್ದರು. ಇದರಿಂದ ಭೂಮಿ ಕೂಡ ಫಲವತ್ತಾಗಿರುತ್ತಿತ್ತು. ಈಗ ಎಲ್ಲವೂ ಮಾಯವಾಗಿ ಒಂದೆ ಬೆಳೆಗೆ ರೈತ ಜೋತು ಬಿದ್ದಿರುವುದರಿಂದ ಭೂಮಿ ಸತ್ವವನ್ನು ಕಳೆದುಕೊಂಡಿರುವುದು ಒಂದೆಡೆಯಾದರೆ ಮಾನವ ಶರೀರ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾಧಿಸಿದರು.
ನಾನು ಮುರುಘಾಮಠಕ್ಕೆ ಓದಲು ಬಂದಾಗ ಹುಳ್ಳಿಕಾಳು ಸಾರು, ರಾಗಿ ಮುದ್ದೆ ಬಿಟ್ಟರೆ ಬೇರೆ ಏನನ್ನು ಕಂಡಿರಲಿಲ್ಲ. ವರ್ಷಕ್ಕೊಮ್ಮೆ ಶ್ರಾವಣ ಮಾಸದಲ್ಲಿ ಗೋಧಿ ಪಾಯಸ, ನೆಲ್ಲಕ್ಕಿ ಅನ್ನ, ಕೋಸಂಬರಿ, ಪಲ್ಯ ಸಿಗುತ್ತಿತ್ತು. ಹುಳ್ಳಿ ಕಾಳು ಸಾರು, ರಾಗಿ ಮುದ್ದೆಯಲ್ಲಿರುವ ರುಚಿ ನೆಲ್ಲಕ್ಕಿಯಲ್ಲಿಲ್ಲ. ಅನ್ನಭಾಗ್ಯ ಯೋಜನೆಯಡಿ ಎಲ್ಲಾ ಕಡೆ ಅಕ್ಕಿ ಸಿಗುತ್ತಿರುವುದರಿಂದ ಜನ ಸಿರಿಧಾನ್ಯವೆಂದರೆ ಮೂಗು ಮುರಿಯುವಂತಾಗಿದೆ.
ಇದರಿಂದ ಒಬ್ಬೊಬ್ಬರು ಒಂದೊಂದು ರೀತಿಯ ಕಾಯಿಲೆ ನೋವು, ಸಂಕಟಗಳಿಂದ ಬಳಲುತ್ತಿದ್ದಾರೆ. ಒಂದೆ ಆಹಾರ ಪದ್ದತಿಯ ಬದಲು ವಿಭಿನ್ನ ರೀತಿಯ ಆಹಾರ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ದಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಿದ ಮುರುಘಾ ಶರಣರು ಕೆಲವರು ಆಹಾರವನ್ನು ಔಷಧಿಯಂತೆ ಸ್ವೀಕರಿಸುತ್ತಿದ್ದರೆ ಇನ್ನು ಕೆಲವರಿಗೆ ಔಷಧಿಯೇ ಆಹಾರವಾಗಿದೆ. ತರಕಾರಿ, ಜೋಳದ ರೊಟ್ಟಿ, ಮುದ್ದೆ ಬಳಸಿ ಆರೋಗ್ಯವಂತರಾಗಿರಿ ಎಲ್ಲಾ ಸಂಪತ್ತಿಗಿಂತ ಆರೋಗ್ಯ ಬಹುದೊಡ್ಡ ಸಂಪತ್ತು ಎಂದು ತಿಳಿಸಿದರು.
900 ವರ್ಷಗಳ ಹಿಂದೆ ಬಸವಣ್ಣನವರು ಸಮ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿ ಮಾಡಿದರು. ಅವರ ತತ್ವ ಸಿದ್ದಾಂತಗಳು ವಚನಗಳಲ್ಲಿದೆ. ಬಸವಣ್ಣನವರ ಆಶಯದಂತೆ ಕಳೆದ ಮೂವತ್ತು ವರ್ಷಗಳಿಂದಲೂ ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣವನ್ನು ವಚನಗಳ ಮೂಲಕ ನೆರವೇರಿಸುತ್ತಿದ್ದೇವೆ. ಸಾವಿರಾರು ಅಂರ್ತಜಾತಿ ವಿವಾಹಗಳನ್ನು ಮಾಡಿಸಿದ್ದೇನೆ. ಬಸವಣ್ಣನವರ ಆಸೆಯಂತೆ ನುಡಿದಂತೆ ನಡೆಯುವುದು, ನಡೆದಂತೆ ನುಡಿಯುವುದೇ ನಮ್ಮ ಕಾಯಕ. ಶಿವಯೋಗ ಕೂಡ ಮಾಡಲಾಗುತ್ತಿದೆ ಎಂದರು.ಶಿಕ್ಷಕ ಉಮೇಶ್ ತೊಡರನಾಳು ಉಪನ್ಯಾಸ ನೀಡಿದರು.
ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ.ವೀರೇಶ್, ಬಿಜೆಪಿ.ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಕುಂಚಿಗ ವೀರಶೈವ ಸಮಾಜದ ಕಾರ್ಯದರ್ಶಿಗಳಾದ ಎಲ್.ಬಿ.ರಾಜಶೇಖರ್, ಹೆಚ್.ಕುಬೇರಪ್ಪ, ಸಮಾಜದ ಮುಖಂಡ ಗುರುಸ್ವಾಮಿ, ತಾ.ಪಂ.ಸದಸ್ಯ ಪರಮೇಶ್ವರಪ್ಪ, ಮಠದ ಆಡಳಿತಾಧಿಕಾರಿ ಎ.ಜಿ.ಪರಮಶಿವಯ್ಯ, ದೊರೆಸ್ವಾಮಿ, ಬಿ.ಟಿ.ವಿಶ್ವನಾಥ್, ಎಂ.ಎಲ್.ಲೋಕೇಶ್ವರಪ್ಪ, ಟಿ.ಪರಮಶಿವಪ್ಪ ಇನ್ನು ಮುಂತಾದವರು ಉಪಸ್ಥಿತರಿದ್ದರು.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ