ಬಿಬಿಎಂಪಿ ಪರಿಷ್ಕೃತ ಬಜೆಟ್ ಗೆ ಸಿ ಎಂ ಗ್ರೀನ್ ಸಿಗ್ನಲ್.!

ಬೆಂಗಳೂರು

   2019-20ರ ಸಾಲಿಗೆ ತಡೆಹಿಡಿಯಲಾಗಿದ್ದ ಬಿಬಿಎಂಪಿಯ ಪರಿಷ್ಕೃತ ಬಜೆಟ್‍ಗೆ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳುವ ಮುನ್ನ ಒಪ್ಪಿಗೆ ನೀಡಿ ಬಜೆಟ್‍ಗೆ ಸಂಬಂಧಿಸಿದ ಕಡತಕ್ಕೆ ಅಂಕಿತ ಹಾಕುವ ಮೂಲಕ ಬಜೆಟ್ ಯೋಜನೆಗಳ ಜಾರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ಮೂಲ ಬಜೆಟ್‍ನ 11 ಸಾವಿರದ 64 ಕೋಟಿ 937 ಲಕ್ಷ ರೂಪಾಯಿಯ ಬಜೆಟ್‍ನಲ್ಲಿ ಯಾವುದೇ ಅನುದಾನ ಕಡಿತಗೊಳಿಸದೆ, ಅನುಮೋದನೆ ನೀಡಿದ್ದಾರೆ. ಕಾಂಗ್ರೆಸ್‍ನ ಶಾಸಕರಿಗೆ ನೀಡಲಾಗಿದ್ದ ಬಜೆಟ್ ಅನುದಾನಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಸುಮಾರು 500 ಕೋಟಿ ರೂಪಾಯಿಯ ಅನುದಾನವನ್ನು ಕಾಂಗ್ರೆಸ್ ಶಾಸಕರ ನಿಧಿಯಿಂದ ಬಿಜೆಪಿ ಶಾಸಕರ ನಿಧಿಗೆ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಬೆಂಗಳೂರು ನಗರದ ಅನರ್ಹ ಶಾಸಕರ ಅನುದಾನಕ್ಕೆ ಕತ್ತರಿ ಹಾಕದೆ, ಇನ್ನುಳಿದ ಕಾಂಗ್ರೆಸ್ ಶಾಸಕರ ಕ್ಷೇತ್ರದ ಅನುದಾನಕ್ಕೆ ಕತ್ತರಿ ಬಿದ್ದಿದೆ. ಕಾಂಗ್ರೆಸ್ ಹಾಗೂ ಜೆಡಿ(ಎಸ್) ಪಕ್ಷದ ಕೆಲವು ಪ್ರಭಾವಿ ಬಿಬಿಎಂಪಿ ಸದಸ್ಯರ ಅನುದಾನವನ್ನು ಕಡಿತಗೊಳಿಸಿ ಎಲ್ಲಾ ಸದಸ್ಯರಿಗೂ ಅನುದಾನ ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಮಹಾಪೌರರ ಹಾಗೂ ಉಪಮಹಾಪೌರರಿಗೆ ನೀಡಲಾದ ಅನುದಾನದಲ್ಲಿ ಯಾವುದೇ ಬದಲಾವಣೆ ಇಲ್ಲ, ಹಿಂದಿನಂತೆ ಅನುದಾನವನ್ನು ಮುಂದುವರೆಸಲಾಗಿದೆ. ಬೆಂಗಳೂರು ನಗರದ ಅನರ್ಹಗೊಂಡ ಶಾಸಕರುಗಳಾದ ಕಾಂಗ್ರೆಸ್‍ನ ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಮುನಿರತ್ನ ಹಾಗೂ ಜೆಡಿ(ಎಸ್)ನ ಗೋಪಾಲಯ್ಯನವರಿಗೆ ಹಂಚಿಕೆ ಮಾಡಲಾಗಿದ್ದ ಅನುದಾನ ಮೊತ್ತ ಹಾಗೆಯೇ ಉಳಿದಿದೆ.

    13.02.2019 ರಂದು ಜೆಡಿ(ಎಸ್)ನ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯರವರು 2019ರ ಫೆಬ್ರವರಿ 13 ರಂದು 11 ಸಾವಿರದ 64 ಕೋಟಿ 937 ಲಕ್ಷ ರೂ. ಗಳ ಬಜೆಟ್ ಅನ್ನು ಮಂಡಿಸಿದ್ದರು. ಅದೇ ತಿಂಗಳ 23 ರಂದು ಪಾಲಿಕೆ ಸಭೆಯಲ್ಲಿ ಅನುಮೋದಿಸಲಾಗಿತ್ತು. ಅನಂತರ ಬಿಬಿಎಂಪಿಯ ಅಂದಿನ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್, ಸರ್ಕಾರಕ್ಕೆ ಪತ್ರ ಬರೆದು ಬಿಬಿಎಂಪಿಯ ಆದಾಯಕ್ಕಿಂತ ಬಜೆಟ್‍ನ ಗಾತ್ರ ದೊಡ್ಡದಾಗಿದೆ. ಸುಮಾರು 3 ಸಾವಿರ ಕೋಟಿಗಳನ್ನು ಕಡಿತಗೊಳಿಸಬೇಕು ಎಂದು ತಿಳಿಸಿದ್ದರು.

      ಸರ್ಕಾರ, ಮೇ 31 ರಂದು ಪರಿಷ್ಕರಿಸಿ ಅನುಮೋದಿಸಿ ಪಾಲಿಕೆಗೆ ವಾಪಾಸ್ ಕಳುಹಿಸಿತ್ತು. ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾದ ನಂತರ, ಸಮ್ಮಿಶ್ರ ಸರ್ಕಾರದ ಬಿಬಿಎಂಪಿ ಬಜೆಟ್‍ನಲ್ಲಿ ಬಿಜೆಪಿ ಶಾಸಕರಿಗೆ ಅನುದಾನದಲ್ಲಿ ತಾರತಮ್ಯ ವಾಗಿದೆ ಎಂದು ಯಲಹಂಕ ಶಾಸಕ ವಿಶ್ವನಾಥ್ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ನಗರದ ಶಾಸಕರುಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು, 2019-20ರ ಸಾಲಿನ ಬಿಬಿಎಂಪಿಯ ಬಜೆಟ್ ಅನ್ನು ತಡೆಹಿಡಿದು ಆದೇಶ ಹೊರಡಿಸಿದ್ದರು. ಇದು ಕಾಂಗ್ರೆಸ್ ಹಾಗೂ ಜೆಡಿ(ಎಸ್)ಗೆ ನುಂಗಲಾರದ ತುತ್ತಾಗಿತ್ತು. ಬಿಜೆಪಿ ವಿರುದ್ಧ ಪ್ರತಿಭಟನೆಗಳು ನಡೆದಿತ್ತು. ಕಳೆದ ರಾತ್ರಿ ಬಜೆಟ್‍ಗೆ ಸಹಿ ಹಾಕುವ ಮೂಲಕ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link