ರಾಜಧಾನಿಯಲ್ಲಿ ಮತ್ತೆ ರೌಡಿಗಳ ಅಟ್ಟಹಾಸ.!

ಬೆಂಗಳೂರು

     ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳು ಅಟ್ಟಹಾಸ ಮರೆದಿದ್ದು ಪುಟ್ಟೇನಹಳ್ಳಿಯ ನಡು ರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ರೌಡಿ ಸೇರಿ ಇಬ್ಬರನ್ನು ಅಟ್ಟಾಡಿಸಿ ಕೊಂಡು ಹೋಗಿ ಮಚ್ಚು ಲಾಂಗ್‌ಗಳಿಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

     ವಾರಾಂತ್ಯದ ಭಾನುವಾರ ಮಧ್ಯರಾತ್ರಿ ನಡೆದ ಈ ಕೃತ್ಯದಿಂದ ಜೆಪಿನಗರದ ಸುತ್ತಮತ್ತಲ ಜನತೆ ಬೆಚ್ಚಿ ಬಿದ್ದಿದ್ದಾರೆ.ತಲಘಟ್ಟಪುರದ ರೌಡಿ ಮಂಜ(೩೦) ಹಾಗೂ ಆತನ ಸ್ನೇಹಿತ ಮಡಿವಾಳದ ವರುಣ್‌ರೆಡ್ಡಿ(೨೪)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ.ಜೆಪಿ ನಗರದ ೨೪ ನೇ ಮುಖ್ಯರಸ್ತೆಯ ಪುಟ್ಟೇನಹಳ್ಳಿ ಜಂಕ್ಷನ್ ಬಳಿ ರಾತ್ರಿ ೧೨ರ ಸುಮಾರಿನಲ್ಲಿ ಸಿನಿಮೀಯ ರೀತಿಯಲ್ಲಿ ಐದಾರು ಮಂದಿ ದುಷ್ಕರ್ಮಿಗಳು ಕೊಲೆ ಮಾಡಿದ್ದು ಸ್ಥಳದಲ್ಲಿ ರಕ್ತ ಕೋಡಿಯಂತೆ ಹರಿದಿದೆ

      ಪುಟ್ಟೇನಹಳ್ಳಿ ಬಳಿ ಊಟ ಮುಗಿಸಿ ವರುಣ್‌ರೆಡ್ಡಿ ಹಾಗೂ ರೌಡಿ ಮಂಜು ಬೈಕ್‌ನಲ್ಲಿ ಪುಟ್ಟೇನಹಳ್ಳಿ ಜಂಕ್ಷನ್ ಬಳಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಅಡ್ಡಗಟ್ಟಿದ ಐದಾರು ಮಂದಿ ದುಷ್ಕರ್ಮಿಗಳು ೨೪ನೇ ಕ್ರಾಸ್ ನಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಬಳಿ ವರುಣ್‌ರೆಡ್ಡಿ ಕೊಲೆ ಮಾಡಿದರೆ,ಪುಟ್ಟೇನಹಳ್ಳಿ ಜಂಕ್ಷನ್ ಸಮೀಪದ ನಂದನಿ ಹೋಟೆಲ್ ಬಳಿ ತಮ್ಮ ಮಂಜನನ್ನು ಕೊಚ್ಚಿ ಕೊಲೆಗೈದಿದ್ದಾರೆ.

     ಸುಮಾರು ೨೦೦ ಮೀಟರ್ ಅಂತರದಲ್ಲಿ ಹಂತಕರ ತಂಡ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡಿದೆ,ವರುಣ್‌ರೆಡ್ಡಿ ಗುತ್ತಿಗೆದಾರನಾಗಿದ್ದು ಆತನಿಗೆ ಯಾವುದೇ ರೀತಿಯ ಅಪರಾಧದ ಹಿನ್ನಲೆ ಹೊಂದಿಲ್ಲದಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ತಿಳಿಸಿದ್ದಾರೆ.

     ಟ್ಯಾಬ್ಲೆಟ್ ರಘು ಕೊಲೆ,ಮತ್ತೊಂದು ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಮಂಜ ತಲಘಟ್ಟಪುರ ಪೊಲೀಸ್ ಠಾಣಾ ರೌಡಿಪಟ್ಟಿಯಲ್ಲಿದ್ದಾನೆ,ರಾಮನಗರ ಮೂಲದ ಆತ ತಲಘಟ್ಟಪುರದಲ್ಲಿ ವಾಸಿಸುತ್ತಿದ್ದು ಅಪರಾಧ ಕೃತ್ಯವೊಂದರಲ್ಲಿ ಜೈಲಿಗೆ ಹೋಗಿದ್ದ ಆತ ೬ ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ.

     ಟ್ಯಾಬ್ಲೆಟ್ ರಘು ಕೊಲೆಯ ಹಿನ್ನಲೆಯಲ್ಲಿ ದ್ವೇಷದಿಂದ ಕುದಿಯುತ್ತಿದ್ದ ಆತನ ಸಹಚರರು ಸೇರಿ ಎರಡು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

     ರೌಡಿ ಮಂಜು ಊಟ ಮುಗಿಸಿಕೊಂಡು ಸ್ನೇಹಿತನ ಬೈಕ್‌ನಲ್ಲಿ ಹೋಗುತ್ತಿದ್ದರುವುದನ್ನು ತಿಳಿದು ಸಂಚು ರೂಪಿಸಿದ ಐದಾರು ಮಂದಿ ದುಷ್ಕರ್ಮಿಗಳು ಸ್ಯಾಂಟ್ರೊ ಸ್ಪೋರ್ಟ್ಸ್ ಕಾರಲ್ಲಿ ಬಂದು ಪುಟ್ಟೇನಹಳ್ಳಿ ಜಂಕ್ಷನ್ ಬಳಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಕಾರಿನಲ್ಲಿ ಅಟ್ಟಾಡಿಸುವ ರಭಸಕ್ಕೆ ಲೈಟ್ ಕಂಬ ಮುರಿದು ಬಿದ್ದಿದೆ. ಕೃತ್ಯ ನಡೆಸಲು ಬಳಸಿದ ಸ್ಯಾಂಟ್ರೊ ಸ್ಪೋರ್ಟ್ಸ್ ಕಾರು ಅಪಘಾತಗೊಂಡು ಜಖಂ ಆಗಿದ್ದು ದುಷ್ಕರ್ಮಿಗಳು ಅದನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

     ಕೃತ್ಯಕ್ಕೆ ಬಳಸಿದ ಕಾರು ವೀರಭಧ್ರಸ್ವಾಮಿ ಎಂಬವರ ಹೆಸರಿನಲ್ಲಿದೆ. ಘಟನೆ ನಡೆದ ಜಾಗದಲ್ಲಿ ಒಂದು ಪೀಠೋಪಕರಣ ಮಳಿಗೆ ಇದ್ದು, ಸಿಸಿ ಕ್ಯಾಮೆರಾ ಇದೆ. ಆದರೆ ಕಳೆದ ೮ ದಿನಗಳಿಂದ ಕೆಲಸ ಮಾಡುತ್ತಿಲ್ಲ. ಪ್ರಕರಣವನ್ನು ಜೆಪಿನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ದುಷ್ಕರ್ಮಿಗಳ ಬಂಧನಕ್ಕೆ ರಚಿಸಿರುವ ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆ ತೀವ್ರಗೊಳಿಸಿವೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link