ಚಿತ್ರದುರ್ಗ:
ನಗರದ ಸುತ್ತಲೂ ಸುರಿದಿರುವ ಹಳೇ ಮನೆಗಳ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛಗೊಳಿಸಲು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ನಗರಸಭೆ ಅಧಿಕಾರಿಗಳಿಗೆ 15 ದಿನ ಗಡುವು ನೀಡಿದ್ದಾರೆ.
ಸೋಮವಾರ ನಗರಸಭೆ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ವೇಳೆ ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ಕಂಡು ಶಾಸಕರು ಬೆಸ್ತು ಬಿದ್ದರು. ಚಿತ್ರದುರ್ಗದ ಹೊಳಲ್ಕೆರೆ ರಸ್ತೆ ಸೇರಿದಂತೆ ಹಲವೆಡೆ ಸುರಿದಿರುವ ಮನೆಗಳ ತ್ಯಾಜ್ಯವನ್ನು ತಕ್ಷಣ ತೆರವು ಮಾಡಬೇಕು ಎಂದು ಪರಿಸರ ಇಂಜಿನಿಯರ್ ಜಾಫರ್ ಅವರಿಗೆ ಸೂಚಿಸಿದರು.
ಸುಮಾರು ಏಳೆಂಟು ಸಾವಿರ ಲೋಡು ಮನೆಯ ತ್ಯಾಜ್ಯವನ್ನು ಚಂದ್ರವಳ್ಳಿ, ಎಸ್‍ಜೆಎಂ ಕಾಲೇಜು ಬಳಿ ಸುರಿಯಲಾಗಿದೆ. ಹೀಗೆ ಬಿಟ್ಟರೆ ಕನಕ ವೃತ್ತದವರೆಗೆ ಸುರಿಯುತ್ತಾರೆ. ಮಣ್ಣು ತಂದು ಸುರಿಯುವವರ ಮೇಲೆ ಕೇಸು ಹಾಕಿ ಎಂದು ತಾಕೀತು ಮಾಡಿದರು.ಪರಿಸರ ಇಂಜಿನಿಯರ್‍ಗೆ ನಗರದ ಸ್ವಚ್ಛತೆ ಗಮನಿಸಲು ಕಾರು ಹಾಗೂ ಆರು ಜನ ಸಹಾಯಕರನ್ನು ಕೊಡಲಾಗಿದೆ. ಆದರೆ, ಎಲ್ಲರೂ ಏನು ಮಾಡುತ್ತಿದ್ದಿರಿ. ಬರೀ ಹೋಟೆಲ್ ಸ್ವಚ್ಛತೆ ನೋಡಿಕೊಂಡು ಮಜಾ ಮಾಡುತ್ತಿದ್ದಿರಾ ಎಂದು ಪ್ರಶ್ನಿಸಿದರು.
ಬೆಂಗಳೂರು ಮುಂಬೈ ನಗರಗಳಲ್ಲಿ ಈ ರೀತಿಯ ತ್ಯಾಜ್ಯದ್ದೇ ದೊಡ್ಡ ತಲೆನೋವಾಗಿದೆ. ಹೀಗಿದ್ದು ನೀವು ಆರಾಮಾಗಿದ್ದಿರಿ. 15 ದಿನದಲ್ಲಿ ಎಲ್ಲವೂ ಕ್ಲೀನ್ ಆಗದಿದ್ದರೆ ಡಿಸಿಗೆ ಹೇಳಿ ರಿಲಿವ್ ಮಾಡಿಸುತ್ತೇನೆ ಎಂದು ಎಚ್ಚರಿಸಿದರು.
ಬೀದಿ ದೀಪ ನಿರ್ವಹಣೆಗೆ 48 ಲಕ್ಷ:
ನಗರದಲ್ಲಿರುವ ಸುಮಾರು 7100 ಬೀದಿ ದೀಪಗಳ ನಿರ್ವಹಣೆಗೆ ಬೆಂಗಳೂರು ಮೂಲದ ವ್ಯಕ್ತಿಗೆ ತಿಂಗಳಿಗೆ 4 ಲಕ್ಷದಂತೆ ವರ್ಷಕ್ಕೆ 48 ಲಕ್ಷ ರೂ. ಪಾವತಿ ಮಾಡುತ್ತಿರುವುದನ್ನು ಕೇಳಿ ಶಾಸಕರು ಅಚ್ಚರಿ ವ್ಯಕ್ತಪಡಿಸಿದರು
.
ಇಲ್ಲಿ ದುಡ್ಡು ಸೋರಿ ಹೋಗುತ್ತಿದೆ. ಲೂಟಿ ಹೊಡಿತಾ ಇದಾರೆ. ಲೈಟ್‍ಗಳು ಹಾಳಾಗಿದ್ದರೆ ಹೊಸ ಬಲ್ಪ್ ಅಳವಡಿಸಿದಾಗ ಹೆಚ್ಚು ಖರ್ಚು ಬರಬಹುದು. ಆದರೆ, ಬಲ್ಪುಗಳು ಹಾಳಾಗದಿದ್ದರೂ ಅಷ್ಟೇ ಹಣ ಕೊಡುವುದು ಸರಿಯಲ್ಲ. ನಗರದ ಹಲವೆಡೆ ಬೀದಿ ದೀಪಗಳು ಬೆಳಗುತ್ತಿಲ್ಲ. ನಮ್ಮ ಮನೆಯ ರಸ್ತೆಯಲ್ಲಿ ಲೈಟ್ ಕೆಟ್ಟು 6 ತಿಂಗಳಾಗಿದೆ. ಹೀಗಿದ್ದು ತಿಂಗಳಿಗೆ 4 ಲಕ್ಷ ರೂ. ಯಾಕೆ ಕೊಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ಬೀದಿ ದೀಪ ನಿರ್ವಹಣೆಗೆ 2 ವಾಹನ, 6 ಜನ ಕೆಲಸಗಾರರು ಎಲ್ಲಾ ಸೇರಿ 2 ಲಕ್ಷ ಖರ್ಚು ಬಂದರೆ ಹೆಚ್ಚು. ಅಂಥದ್ದರಲ್ಲಿ ಪ್ರತಿ ತಿಂಗಳು 2 ಲಕ್ಷ ರೂ. ಹೆಚ್ಚು ಹಣ ಕೊಡಲಾಗುತ್ತಿದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ವಿವರವಾಗಿ ಚರ್ಚಿಸಲು ಸಂಬಂಧಪಟ್ಟ ಅಗ್ರಿಮೆಂಟ್ ಹಾಗೂ ಗುತ್ತಿಗೆದಾರರನ್ನು ಕರೆಯಿಸಲು ಸೂಚಿಸಿದರು.
ಯೂನಿಯನ್ ಪಾರ್ಕ್ ನಿರ್ವಹಣೆಗೆ ಅಸಮದಾನ:
ಕೇಂದ್ರ ಸರ್ಕಾರ ಅಮೃತ್ ಯೋಜನೆಯಡಿ ಪಾರ್ಕ್‍ಗಳ ಸುವ್ಯವಸ್ಥೆಗೆ ಕೋಟ್ಯಾಂತರ ರೂಪಾಯಿ ಹಣ ಕೊಟ್ಟಿದೆ. ಆದರೆ, ಪಾರ್ಕಿನಲ್ಲಿ ಕಾರು, ಟ್ಯಾಕ್ಸಿ ನಿಲ್ಲುತ್ತಿವೆ. ದನಗಳು ಮಲಗಿರುತ್ತವೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಪಾರ್ಕಿನಲ್ಲಿ ಹಾಕಿರುವ ಗ್ರಾಸ್ ಕೂಡಾ ಸರಿಯಾಗಿಲ್ಲ ಎಂದರು.
ನಗರದ ಯುಜಿಡಿ ಕೆಲಸಗಳಿಗಾಗಿ ಕೆಯುಡಬ್ಲ್ಯುಎಸ್ 80 ಕೋಟಿ ರೂ. ಕೊಟ್ಟು 8 ವರ್ಷವಾದರೂ ಕೆಲಸ ಮುಗಿದಿಲ್ಲ. ಕುಡಿಯುವ ನೀರಿನ ಪೈಪ್‍ಲೈನ್‍ಗೆ 112 ಕೋಟಿ ರೂ. ಕೊಡಲಾಗಿದೆ. ಅದೂ ಸರಿಯಾಗಿ ಆಗಿಲ್ಲ. ಪೈಪ್‍ಲೈನ್‍ಗೆ ರಸ್ತೆ ಅಗೆದಾಗ ತಕ್ಷಣ ರಿಪೇರಿ ಮಾಡಲು 13 ಕೋಟಿ ರೂ. ಇದೆ. ಆದರೆ, ರಸ್ತೆಗಳು ಎಲ್ಲಿಯೂ ರಿಪೇರಿ ಆಗಿಲ್ಲ ಎಂದು ಇಡೀ ವ್ಯವಸ್ಥೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ನಗರದಲ್ಲಿ ನೀರು ಬಿಡುವ ಆಪರೇಟರ್‍ಗಳಿಗೆ 8 ತಿಂಗಳಿಂದ ವೇತನ ನೀಡಿಲ್ಲ ಎಂಬ ವಿಷಯ ಕೇಳಿ ಸಿಡಿಮಿಡಿಗೊಂಡ ಶಾಸಕರು, ಅವರು ಉಪವಾಸ ಇರಬೇಕಾ. ಅವರ ಮಕ್ಕಳು ಶಾಲೆಗೆ ಹೋಗೋದು ಬೇಡವಾ. ತಕ್ಷಣ ವೇತನ ನೀಡಿ ಎಂದು ತಾಕೀತು ಮಾಡಿದರು . ಪೌರಾ ಯುಕ್ತ ಚಂದ್ರಪ್ಪ, ನಗರಸಭೆ ಸದಸ್ಯರಾದ ಶಶಿ, ನವೀನ್ ಚಾಲುಕ್ಯ ಮತ್ತಿತರರು ಸಭೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ