ಹಿರಿಯೂರು : ಸಪ್ಟೆಂಬರ್ 1 ರಿಂದ ಪ್ಲಾಸ್ಟಿಕ್ ನಿಷೇಧ.!

ಹಿರಿಯೂರು :

     ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆಯಂತೆ ರಾಜ್ಯಾದ್ಯಂತ ಎಲ್ಲಾ ರೀತಿಯ ಪ್ಲಾಸ್ಟಿಕ್ ಅನ್ನು ಬರುವ ಸಪ್ಟೆಂಬರ್ 1 ರಿಂದಲೇ ನಿಷೇಧಿಸಲಾಗಿದ್ದು, ಅದರಂತೆ ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ ಎಂಬುದಾಗಿ ನಗರಸಭೆ ಆಯುಕ್ತ ಹೆಚ್.ಮಹಾಂತೇಶ್ ಹೇಳಿದರು.

    ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರದ ಹೋಟೆಲ್ ಹಾಗೂ ಬೇಕರಿ ಮಾಲೀಕರುಗಳು, ಬಟ್ಟೆ ವ್ಯಾಪಾರಿಗಳು, ಕಿರಾಣಿ ಅಂಗಡಿಗಳ ಮಾಲೀಕರು, ಸಗಟು ಮಾರಾಟಗಾರರು ಹಾಗೂ ವಿವಿಧ ವ್ಯಾಪಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯಸರ್ಕಾರದ ಆದೇಶದಂತೆ ಯಾವುದೇ ವ್ಯಕ್ತಿ, ಅಂಗಡಿ ಮಾಲೀಕರು, ಹೋಟೆಲ್ ಮಾಲೀಕರು, ಸಗಟು ಮಾರಾಟಗಾರರು ಹಾಗೂ ಚಿಲ್ಲರೆ ವ್ಯಾಪಾರಿಗಳು ಯಾವುದೇ ರೀತಿಯ ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚಗಳು, ಊಟದ ಮೇಜಿನ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆಗಳು ಹಾಗೂ ಇನ್ನಿತರ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವಂತಿಲ್ಲ ಹಾಗೂ ಮಾರಾಟ ಮಾಡುವಂತಿಲ್ಲ ಎಂಬುದಾಗಿ ಅವರು ಹೇಳಿದರು.

    ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆಯಂತೆ ಬಳಕೆದಾರರು ಹಾಗೂ ಮಾರಾಟಗಾರರಿಗೆ ರೂ.25000/- ದ ವರೆಗೆ ದಂಡ ವಿಧಿಸಲು ಬೈಲಾ ದಲ್ಲಿ ಅವಕಾಶವಿದ್ದು, ಹಾಗೂ ನಿಯಮಾವಳಿಯಂತೆ ಈ ಸರ್ಕಾರ ಆದೇಶವನ್ನು ಉಲ್ಲಂಘಿಸಿದಲ್ಲಿ ಪರಿಸರ ಸಂರಕ್ಷಣೆ ಕಾಯ್ದೆ 1986ರ ಸೆಕ್ಷನ್ 19ರ ಅನ್ವಯ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಸಹಾ ಹೂಡಲಾಗುತ್ತದೆ ಎಂಬುದಾಗಿ ಅವರು ಎಚ್ಚರಿಕೆ ನೀಡಿದರು.

     ಈ ಸಂದರ್ಭದಲ್ಲಿ ಕೆಲವು ಜವಳಿ ವರ್ತಕರು ಹಾಗೂ ಅಂಗಡಿ ಮಾಲೀಕರುಗಳು ನಮ್ಮಲ್ಲಿ ಈಗಾಗಲೇ ನಮ್ಮ ಅಂಗಡಿಯ ಹೆಸರು ಪ್ರಿಂಟ್ ಮಾಡಿರುವ ಬಹಳಷ್ಟು ಪ್ಲಾಸ್ಟಿಕ್ ಕವರ್ ಗಳು ಸ್ಟಾಕ್ ಇದ್ದು, ಅವುಗಳು ಮುಗಿಯುವವರೆಗೆ ಕನಿಷ್ಠ ಡಿಸೆಂಬರ್ 1 ರವರೆಗೆ ನಮಗೆ ಕಾಲಾವಕಾಶ ನೀಡಬೇಕು ಎಂಬುದಾಗಿ ಮನವಿ ಮಾಡಿದರು.

     ಇವರ ಮನವಿಗೆ ಒಪ್ಪದ ಆಯುಕ್ತ ಮಹಾಂತೇಶ್ ರವರು, ಪರಿಸರ ಸಂರಕ್ಷಣೆ ಇಂದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಸರ್ಕಾರದ ಆದೇಶದಂತೆ ಈ 2019 ನೇ ಸೆಪ್ಟೆಂಬರ್ 1 ರಿಂದಲೇ ಜಿಲ್ಲಾದ್ಯಂತ ಎಲ್ಲಾ ರೀತಿಯ ಪ್ಲಾಸ್ಟಿಕನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಆದೇಶಿಸಿರುತ್ತದೆ ಎಂಬುದಾಗಿ ಅವರು ತಿಳಿಸಿದರಲ್ಲದೆ ಈ ಆದೇಶವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ನಗರದ ಎಲ್ಲಾ ವರ್ತಕ ಸಮುದಾಯದವರು, ಮಾರಾಟಗಾರರು, ಈ ನಮ್ಮ ಕಾರ್ಯಕ್ಕೆ ಸಹಕರಿಸುವ ಮೂಲಕ “ಪ್ಲಾಸ್ಟಿಕ್ ಮುಕ್ತ ನಗರ” ವನ್ನಾಗಿಸಲು ನಮ್ಮೊಂದಿಗೆ ಕೈಜೋಡಿಸಿ ಎಂಬುದಾಗಿ ಮನವಿ ಮಾಡಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap