ತುಮಕೂರು
ತಾ.ಪಂ. ಸದಸ್ಯರ ಬಹುಕಾಲದ ಆಗ್ರಹಕ್ಕೆ ಸ್ಪಂದಿಸಿ ಇದೇ ಮೊದಲ ಬಾರಿಗೆ ತುಮಕೂರು ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆಗೆ ತುಮಕೂರು ತಾಲ್ಲೂಕಿನ ನೂತನ ತಹಸೀಲ್ದಾರ್ ಹಾಜರಾಗಿದ್ದಲ್ಲದೆ, ಸದಸ್ಯರ ಬೇಡಿಕೆಯಂತೆ ಗ್ರಾಮಾಂತರ ಪ್ರದೇಶದ ಸಮಸ್ಯೆಗಳನ್ನು ಚರ್ಚಿಸಲು ದಿನಾಂಕವೊಂದನ್ನು ಸ್ವತಃ ನಿಗದಿಪಡಿಸಿದ ಅಪರೂಪದ ಬೆಳವಣಿಗೆ ಬುಧವಾರ ನಡೆಯಿತು.
ಬುಧವಾರ ಬೆಳಗ್ಗೆ ತುಮಕೂರು ನಗರದಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ತಾ. ಪಂ. ಅಧ್ಯಕ್ಷ ಗಂಗಾಂಜನೇಯ (ಸ್ವಾಂದೇನಹಳ್ಳಿ- ಬಿಜೆಪಿ) ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಾಮಾನ್ಯ ಸಭೆ ಏರ್ಪಟ್ಟಿತ್ತು. ಈ ಸಭೆಗೆ ನೂತನ ತಹಸೀಲ್ದಾರ್ ಯೋಗಾನಂದ್ ಅವರು ಆಗಮಿಸಿದರು. ಸದಸ್ಯರು ಮುಂದಿಟ್ಟ ಹಲವು ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದರು. ತಾವೂ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.
ಕೊನೆಗೆ ಸೆಪ್ಟೆಂಬರ್ 11 ರಂದು ವಿಶೇಷ ಸಭೆಯೊಂದನ್ನು ನಡೆಸಲು ಸಲಹೆಯಿತ್ತರು. “ಈ ಸಭೆಗೆ ನಾನೂ ಬರುತ್ತೇನೆ. ತಾ.ಪಂ. ಇ.ಓ. ಸಹ ಇರುತ್ತಾರೆ. ಸದಸ್ಯರಾದ ನೀವೂ ಬನ್ನಿ. ಶಾಲೆ ಜಾಗ, ನೀರಿನ ಸಮಸ್ಯೆ, ಸ್ಮಶಾನದ ಸಮಸ್ಯೆ, ಆಶ್ರಯ ಯೋಜನೆ ಜಾಗದ ಸಮಸ್ಯೆ ಇತ್ಯಾದಿ ಎಲ್ಲದರ ಬಗ್ಗೆ ಚರ್ಚಿಸೋಣ. ನೀವೂ ಸಹ ಪಟ್ಟಿ ಮಾಡಿಕೊಂಡು ಬನ್ನಿ” ಎಂದು ಹೇಳಿದರು. ಈ ಅನಿರೀಕ್ಷಿತ ಬೆಳವಣಿಗೆಯಿಂದ ತಾ.ಪಂ. ಸದಸ್ಯರು ಸಂತೋಷಗೊಂಡು, ವಿಶೇಷ ಸಭೆಗೆ ಸಹಮತ ಸೂಚಿಸಿದರು.
“ನಾನು ಮೂಲತಃ ಮಂಡ್ಯದವನು. ಅಪ್ಪಟ ರೈತ. ಕೃಷಿ ಕಾರ್ಯ ನನ್ನ ಉಸಿರು. ಈವರೆಗೆ ಆರು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ” ಎಂಬ ಸ್ವಪರಿಚಯದೊಂದಿಗೇ ಸಭೆಯಲ್ಲಿ ಮಾತು ಆರಂಭಿಸಿದ ಅವರು, “ಈಗಲೂ ಕರ್ತವ್ಯದ ಮಧ್ಯ ನನಗೆ ಬಿಡುವು ದೊರೆತಾಗ ನಾನು ಕೃಷಿಯಲ್ಲಿ ತೊಡಗುತ್ತೇನೆ. ರೈತರ ಬಗ್ಗೆ ನನಗೆ ಅಪಾರ ಕಾಳಜಿಯಿದೆ. ಕೇವಲ ಮೂರೂವರೆ ಎಕರೆ ಜಮೀನಿನಲ್ಲಿ 18 ವಿಧದ ಬೆಳೆಗಳನ್ನು ಬೆಳೆದು ರಾಜ್ಯ ಪ್ರಶಸ್ತಿ ಪಡೆದಿದ್ದೇನೆ. ಕೃಷಿ ಬಗ್ಗೆ ರೈತಾಪಿಗಳಿಗೆ ಮಾಹಿತಿ ನೀಡಲು, ಮಾರ್ಗದರ್ಶನ ಕೊಡಲು ನಾನು ಸದಾ ಸಿದ್ಧನಿದ್ದೇನೆ” ಎಂದು ಹೇಳಿಕೊಂಡು ತಮ್ಮ ಮಾತನ್ನು ಮುಂದುವರೆಸಿದರು. ಅದೇ ಹೊತ್ತಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನೂ ಕೊಟ್ಟರು. ಜೊತೆಗೆ “ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳಿ” ಎಂದೂ ಸೇರಿಸಿದರು.
“ತುಮಕೂರು ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಸ್ಮಶಾನ ಮತ್ತು ಬಡವರಿಗೆ ಸೂರು ಒದಗಿಸುವ ಆಶ್ರಯ ಯೋಜನೆಗೆ ಜಾಗ ಒದಗಿಸಲು ನನ್ನ ಅವಧಿಯಲ್ಲಿ ಆದ್ಯ ಗಮನ ನೀಡಲು ಉದ್ದೇಶಿಸಿದ್ದೇನೆ. ತಾ.ಪಂ. ಸದಸ್ಯರ ಬೇಡಿಕೆಯಂತೆ ಸರ್ಕಾರಿ ಶಾಲೆಗಳ ಜಾಗದ ಬಗೆಗೂ ಆದ್ಯತೆ ನೀಡುತ್ತೇನೆ” ಎಂದು ಅವರು ತಾ.ಪಂ. ಸದಸ್ಯರಿಗೆ ಭರವಸೆ ನೀಡಿದರು.
“ಸರ್ಕಾರಿ ಶಾಲೆ, ಅಂಗನವಾಡಿ ಜಾಗದ ಒತ್ತುವರಿ ಆಗಿರುವ ಬಗ್ಗೆ ನಿಮ್ಮ ದೂರುಗಳಿವೆ. ಈ ಬಗ್ಗೆ ಸವಿವರವಾದ ಪಟ್ಟಿ ಕೊಡಿ. ಆದ್ಯತೆ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಇದ್ದರೆ ಗ್ರಾಮಗಳ ಪಟ್ಟಿ ಕೊಡಿ. ಕುಡಿಯುವ ನೀರಿನ ಟ್ಯಾಂಕರ್ಗಳ ಬಿಲ್ ಬಾಕಿ ಉಳಿದು, ಸಮಸ್ಯೆ ಎದುರಾಗಿದ್ದರೆ ಮಾಹಿತಿ ಕೊಡಿ. ಇವೆಲ್ಲದರ ಬಗ್ಗೆ ನಾನು ಕ್ರಮ ಕೈಗೊಳ್ಳುತ್ತೇನೆ” ಎಂದು ಆಶ್ವಾಸನೆ ನೀಡಿದರು.
“ಈ ಮೊದಲು ಯಾವುದೇ ಸರ್ವೆ ಕಾರ್ಯ ಮಾಡುವವರ ನಿಯಂತ್ರಣ ನಮ್ಮಲ್ಲಿತ್ತು. ಆದರೆ ಈಗ ಸರ್ವೆ ಇಲಾಖೆಯನ್ನು ಪ್ರತ್ಯೇಕಗೊಳಿಸಲಾಗಿದೆ. ಆದ್ದರಿಂದ ಸರ್ವೆ ಇಲಾಖೆಯವರನ್ನೂ ನಿಮ್ಮ ಸಭೆಗೆ ಕರೆಸಿಕೊಂಡು ಚರ್ಚಿಸಿ” ಎಂದು ಸಲಹೆಯಿತ್ತರು.
ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಕಾಂಗ್ರೆಸ್ನ ಎಸ್.ರಂಗಸ್ವಾಮಯ್ಯ (ಸಿರಿವರ ಕ್ಷೇತ್ರ) ಮಾತನಾಡಿ, ಜಿ.ಎಚ್.ರಿಸಾಲ ಎಂಬ ಗ್ರಾಮದಲ್ಲಿ ಶಾಲೆಗೆ ಸೇರಿದ ಜಾಗದಲ್ಲಿ ಪೆಟ್ಟಿಗೆ ಅಂಗಡಿ ಇರುವುದನ್ನು ಹಾಗೂ ಸಾರ್ವಜನಿಕರಿಗೆ ಮನೆ ನಿರ್ಮಿಸಲು ನಿಗದಿಯಾದ ಜಮೀನಿಗೆ ಹದ್ದುಬಸ್ತು ನಿಗದಿಪಡಿಸದಿರುವುರ ಬಗ್ಗೆ ಗಮನ ಸೆಳೆದರು. ರಿಸಾಲಾ ಗ್ರಾಮದ ಸಮಸ್ಯೆ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಯೋಗಾನಂದ್ “ನಾಳೆ ಸಂಜೆಯೊಳಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ” ಎಂದು ಭರವಸೆ ಕೊಟ್ಟರು.
ಬಿಜೆಪಿಯ ಆರ್.ಕವಿತಾ ರಮೇಶ್ (ಕೋರಾ ಕ್ಷೇತ್ರ) ಮಾತನಾಡಿ, ತಮ್ಮ ಕ್ಷೇತ್ರವ್ಯಾಪ್ತಿಯ ರೈತರುಗಳ ಬ್ಯಾಂಕ್ ಅಕೌಂಟ್ಗಳು ಬ್ಲಾಕ್ ಆಗಿದ್ದು, ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಬರದಂತೆ ಆಗಿದೆ. ಇದರಿಂದ ರೈತರು ನೊಂದಿದ್ದಾರೆ ಎಂದು ಸಭೆಯ ಹಾಗೂ ತಹಸೀಲ್ದಾರ್ರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಆಶ್ವಾಸನೆ ನೀಡಿದರು.
ಬಿಜೆಪಿಯ ಆರ್.ಸಿ. ಶಿವಕುಮಾರ್ (ಬಿಸಿಲಹಳ್ಳಿ ಕ್ಷೇತ್ರ) ಮಾತನಾಡುತ್ತ, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ಕಳೆದ ಆರು ತಿಂಗಳುಗಳಿಂದ ಲಭಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ತಹಸೀಲ್ದಾರ್ ,ಫಲಾನುಭವಿಗಳ ಆಧಾರ್ ಕಾರ್ಡ್ ಲಿಂಕ್ ಆಗದೆ ಈ ಸಮಸ್ಯೆ ತಲೆದೋರಿದೆ ಎಂದು ಸಮಜಾಯಿಷಿ ಕೊಟ್ಟರು.
ಬಿಜೆಪಿಯ ಆರ್.ವಿಜಯಕುಮಾರ್ (ಊರುಕೆರೆ ಕ್ಷೇತ್ರ) ತಾಲ್ಲೂಕು ಕಚೇರಿಯಲ್ಲಿ ಬೇರು ಬಿಟ್ಟಿರುವ ಹಾಗೂ ಕೆಳಹಂತದ ಸಿಬ್ಬಂದಿಯನ್ನು ಸರಿಪಡಿಸಿದರೆ ಅನೇಕ ಸಮಸ್ಯೆಗಳು ತಾನೇ ತಾನಾಗಿ ಬಗೆಹರಿಯುತ್ತದೆ ಎಂದು ಸೂಚ್ಯವಾಗಿ ಹೇಳಿದರು.
ಹಿರೇಹಳ್ಳಿ ಸುತ್ತಮುತ್ತ ಹೊಂಡು ನೀರು ಪೂರೈಕೆ
ತಹಸೀಲ್ದಾರ್ ಆಗಮನಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಹಿರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಮಾತನಾಡಿ, ಹಿರೇಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಮೈದಾಳ ಕೆರೆಯಿಂದ ನೀರನ್ನು ಸರಬರಾಜು ಮಾಡುತ್ತಿದ್ದು, ಈ ನೀರು ಹೊಂಡು ನೀರಿನಂತೆ ಅಶುದ್ಧವಾಗಿದೆ. ಹಿರೇಹಳ್ಳಿ ಮತ್ತು ಮಂಚಕಲ್ ಕುಪ್ಪೆ ಗ್ರಾಮಗಳಲ್ಲಿ ಈ ಹೊಂಡು ನೀರು ಬೇಡ ಎಂದು ಜನರು ಗಲಾಟೆ ಮಾಡುತ್ತಿದ್ದಾರೆ ಎಂದು ಸಭೆಯ ಗಮನ ಸೆಳೆದರು.
ತಾ.ಪಂ.ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿಜೆಪಿಯ ಪಿ.ಎಲ್.ರಮೇಶ್ (ಹಿರೇಹಳ್ಳಿ ಕ್ಷೇತ್ರ) ಇದಕ್ಕೆ ದನಿಗೂಡಿಸುತ್ತ ಹಿರೇಹಳ್ಳಿ ಭಾಗದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಧಿಕಾರಿಗಳನ್ನು ಆಗ್ರಹಿಸಿದರು.
ಬಿಜೆಪಿಯ ಆರ್.ಸಿ. ವಿಜಯಕುಮಾರ್ (ಬಿಸಿಲಹಳ್ಳಿ ಕ್ಷೇತ್ರ) ತಮ್ಮ ಕ್ಷೇತ್ರ ವ್ಯಾಪ್ತಿಯ ತಿಮ್ಮಸಂದ್ರ, ರಾಮಕೃಷ್ಣಾಪುರ, ಕಣಕುಪ್ಪೆ ಮೊದಲಾದ ಗ್ರಾಮಗಳಲ್ಲಿ ಕಳೆದ ಎರಡೂವರೆ ತಿಂಗಳುಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆಯೆತ್ತಿದೆ. ಟ್ಯಾಂಕರ್ಗಳಿಂದ ನೀರು ಪೂರೈಸುತ್ತಿರುವುದೂ ಸಹ ಅಸಮರ್ಪಕವಾಗಿದೆ. ಜೊತೆಗೆ ಟ್ಯಾಂಕರ್ ನೀರು ಶುದ್ಧವಾಗಿಯೂ ಇರುವುದಿಲ್ಲ ಎಂದು ಕಳವಳದಿಂದ ಹೇಳಿದರು. ಜೊತೆಗೆ “ಜನರಿಂದ ಗೆದ್ದುಬಂದಿರುವ ನಾವು ಈಗ ಅದೇ ಜನರಿಂದ ನಿಂದನೆಗೆ ಒಳಗಾಗುವಂತಾಗಿದೆ” ಎಂದು ನೊಂದು ನುಡಿದರು.
ಮನೆಬಾಗಿಲಿಗೇ ಸೌಲಭ್ಯ ತಲುಪಿಸಬೇಕು
“ರೈತರೂ ಒಳಗೊಂಡು ಗ್ರಾಮೀಣ ಭಾಗದ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಲಭಿಸುವ ಸೌಲಭ್ಯಗಳನ್ನು ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಆಗಬೇಕು. ರೈತರನ್ನು ಕಚೇರಿಯಿಂದ ಕಚೇರಿಗೆ ಅಲೆಸಿ ಸೌಲಭ್ಯ ಕೊಡುವುದನ್ನು ತಪ್ಪಿಸಬೇಕು. ಯಾವ ರೀತಿಯಲ್ಲಿ ಫಲಾನುಭವಿಗಳ ಆಯ್ಕೆಯು ಆಯಾ ಗ್ರಾ.ಪಂ.ವ್ಯಾಪ್ತಿಯಲ್ಲಿ ಆಗುತ್ತದೋ, ಅದೇ ರೀತಿ ಫಲಾನುಭವಿಗಳಿಗೆ ಸೌಲಭ್ಯವೂ ಆಯಾ ಹಳ್ಳಿಯಲ್ಲೇ ತಲುಪಬೇಕು” ಎಂದು ಬಿಜೆಪಿಯ ಆರ್.ಸಿ. ವಿಜಯಕುಮಾರ್ (ಬಿಸಿಲಹಳ್ಳಿ ಕ್ಷೇತ್ರ) ಒತ್ತಾಯಿಸಿದ್ದು, ಸಭೆಯಲ್ಲಿ ಕೆಲಕಾಲ ಬಿಸಿಬಿಸಿ ಚರ್ಚೆಗೆ ಎಡೆಮಾಡಿತು.
ಇದಕ್ಕೆ ಕಾಂಗ್ರೆಸ್ನ ಎಸ್.ರಂಗಸ್ವಾಮಯ್ಯ (ಸಿರಿವರ ಕ್ಷೇತ್ರ) ಸಹಮತ ವ್ಯಕ್ತಪಡಿಸಿದರು. “ಹೌದು, ಶಾಸಕರು, ಸಂಸದರು ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಆದರೆ ಜನಪ್ರತಿನಿಧಿಗಳಾದ ನಾವು ಹೇಳಿದಂತೆಯೂ ಅಧಿಕಾರಿಗಳು ಕೆಲಸ ಮಾಡಬೇಕಲ್ಲವೇ?” ಎಂದು ಪ್ರಶ್ನಿಸಿದರು. ಇವರ ವಾದಕ್ಕೆ ಬಿಜೆಪಿಯ ವಿಜಯಕುಮಾರ್ (ಊರುಕೆರೆ ಕ್ಷೇತ್ರ) ಸಹ ಒಪ್ಪಿಗೆ ಸೂಚಿಸುತ್ತ, ತಾಲ್ಲೂಕು ಪಂಚಾಯಿತಿಯಿಂದಲೇ ಒಂದು ವಾಹನದ ವ್ಯವಸ್ಥೆ ಮಾಡಿ ಪರಿಕರಗಳನ್ನು ಫಲಾನುಭವಿಯ ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಸಲಹೆಯಿತ್ತರು. ಚರ್ಚೆಯ ಕೊನೆಯಲ್ಲಿ ಅಧ್ಯಕ್ಷ ಗಂಗಾಂಜನೇಯ ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜೈಪಾಲ್ ಇದಕ್ಕೆ ಒಪ್ಪಿಗೆ ಸೂಚಿಸಿದರು.
ನಿರುಪಯುಕ್ತ ಹಾಸ್ಟೆಲ್
ಸಭೆಯಲ್ಲಿ ಕಾಂಗ್ರೆಸ್ನ ಎಸ್.ರಂಗಸ್ವಾಮಯ್ಯ (ಸಿರಿವರ) ತಮ್ಮ ಕ್ಷೇತ್ರವ್ಯಾಪ್ತಿಯ ಸಿರಿವರ, ಸೋಪನಹಳ್ಳಿಗಳಲ್ಲಿ ಲಕ್ಷಾಂತರ ರೂ.ಗಳನ್ನು ವಿನಿಯೋಗಿಸಿ ಸರ್ಕಾರ ನಿರ್ಮಿಸಿರುವ ಪ.ಜಾತಿ-ವರ್ಗದ ಹಾಸ್ಟೆಲ್ಗಳು ನಿರುಪಯುಕ್ತವಾಗಿರುವುದರ ಬಗ್ಗೆ ಸಭೆಯ ಗಮನ ಸೆಳೆದು, ಇವುಗಳನ್ನು ಹಿಂದುಳಿದ ವರ್ಗಗಳ ಹಾಸ್ಟೆಲ್ಗಳನ್ನಾಗಿಯಾದರೂ ಪರಿವರ್ತಿಸಿ ಇವುಗಳನ್ನು ಸದ್ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಜೆಡಿಎಸ್ನ ಸಿ.ಮಂಜುನಾಥ್ (ಬಿಟ್ಟನಕುರಿಕೆ ಕ್ಷೇತ್ರ), ತಾ.ಪಂ. ಅಧ್ಯಕ್ಷರು ನಿಯಮಿತವಾಗಿ ಹಾಸ್ಟೆಲ್ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿರಬೇಕು ಎಂದು ಸಲಹೆ ನೀಡಿದರು.
ಹಲವು ಸದಸ್ಯರುಗಳು ಸಭೆಯಲ್ಲಿ ಮಾತನಾಡಿದರು. ತಾ.ಪಂ. ಉಪಾಧ್ಯಕ್ಷ ಬಿಜೆಪಿಯ ಕೆ.ಎನ್.ಶಾಂತಕುಮಾರ್ (ಕೆಸರಮಡು ಕ್ಷೇತ್ರ), ತಾ.ಪಂ.ನ ಯೋಜನಾಧಿಕಾರಿ ಆದಿಲಕ್ಷ್ಮಮ್ಮ ವೇದಿಕೆಯಲ್ಲಿದ್ದರು. ತಾ.ಪಂ. ಸದಸ್ಯರು, ನಿರ್ದಿಷ್ಟ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ನಾಡಗೀತೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು.