ಹುಳಿಯಾರು
ಹುಳಿಯಾರು ಹೋಬಳಿ ಕೆಂಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಡಿತರ ಪಡೆಯಲು ಬಯೋಮೆಟ್ರಿಕ್‍ಗಾಗಿ ಪಡಿತರ ಚೀಟಿದಾರರು ಜಾಗರಣೆ ಮಾಡುವ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದು ಗ್ರಾಮದ ಈ.ಚನ್ನಬಸವಯ್ಯ ಆರೋಪಿಸಿದ್ದಾರೆ.ಕೆಂಕೆರೆ ಸೊಸೈಟಿಯಲ್ಲಿ ಸರಿಸುಮಾರು 800 ಕುಟುಂಬದ ರೇಷನ್ ಕಾರ್ಡ್‍ಗಳಿವೆ. ಈ ಕಾರ್ಡ್‍ಗಳಿಗೆ ಪಡಿತರ ನೀಡುವ ಸಲುವಾಗಿ ಪ್ರತಿ ಮಾಹೆ ಬಯೋಮೆಟ್ರಿಕ್ ಪಡೆಯಬೇಕಿದೆ. ಹಾಗಾಗಿ ತಿಂಗಳ ಕೊನೆಯಲ್ಲಿ ನೆಟ್‍ವರ್ಕ್ ತೊಂದರೆಯಾಗುವ ಕಾರಣದಿಂದ ಪ್ರತಿ ಮಾಹೆ 15 ರಿಂದ ಬಯೋಮೆಟ್ರಿಕ್ ಪಡೆಯುವಂತೆ ಇಲಾಖೆಯ ಸೂಚಿಸಿದೆ. ಆದರೆ ಈ ಸೊಸೈಟಿಯಲ್ಲಿ ಪ್ರತಿ ತಿಂಗಳೂ 25 ರಿಂದ ಬಯೋಮೆಟ್ರಿಕ್ ಪಡೆಯುತ್ತಾರೆ.
ಬಯೋಮೆಟ್ರಿಕ್ ಪಡೆಯಲು ಆಯಾ ತಿಂಗಳ ಕೊನೆ ತಾರೀಖು ಕೊನೆ ದಿನವಾಗಿರುವುದರಿಂದ ಹೆಬ್ಬೆಟ್ಟು ನೀಡದಿದ್ದರೆ ಪಡಿತರ ರದ್ದಾಗುವ ಭಯದಿಂದ ಮುಂಜಾನೆ 3 ರಿಂದಲೇ ಸೊಸೈಟಿ ಎದುರಿನಲ್ಲಿ ಜನ ಕ್ಯೂ ನಿಲ್ಲುತ್ತಾರೆ. ಆದರೂ ಕಲವೊಂದು ಬಾರಿ ನೆಟ್‍ವರ್ಕ್ ತೊಂದರೆಯಾಗಿ ಹೆಬ್ಬೆಟ್ಟು ನೀಡಲಾಗದೆ ಹಿಂದಿರುಗುತ್ತಾರೆ. ಮರುದಿನ ಮತ್ತೆ ಮುಂಜಾನೆ ನಿದ್ರಾಹಾರ ಇಲ್ಲದೆ ಕ್ಯೂ ನಿಲ್ಲುತ್ತಾರೆ. ಮೊದಲೆ ಇವರೆಲ್ಲರೂ ಕೂಲಿಕಾರ್ಮಿಕರಾಗಿರುವುದಿಂದ ಕೂಲಿ ಬಿಟ್ಟು ಕ್ಯೂ ನಿಲ್ಲುವಂತ್ತಾಗಿದೆ.
ಕಳೆದ ಮಾಹೆಯಲ್ಲಿ 25 ಮಂದಿಗೆ ನೆಟ್‍ವರ್ಕ್ ಪ್ರಾಬ್ಲಮ್‍ನಿಂದ ಬಯೋಮೆಟ್ರಿಕ್ ಮಾಡಲಾಗದೆ ಪಡಿತರದಿಂದ ವಂಚಿತರಾಗಿದ್ದಾರೆ. ಈ ತಿಂಗಳೂ ಸಹ ಇನ್ನೂ ನೂರಾರು ಮಂದಿಯ ಬಯೋಮೆಟ್ರಿಕ್ ಬಾಕಿ ಉಳಿದಿದ್ದು ಸೋಮವಾರ ನೆಟ್‍ವರ್ಕ್ ಸಮಸ್ಯೆಯಾದರೆ ಇವರೆಲ್ಲರೂ ಪಡಿತರದಿಂದ ವಂಚಿತರಾಗುತ್ತಾರೆ.
ಹಾಗಾಗಿ ಪ್ರತಿ ತಿಂಗಳು 15 ರಿಂದ ಬಯೋಮೆಟ್ರಿಕ್ ಆರಂಭಿಸಿದರೆ ಜನ ತಮ್ಮ ಬಿಡುವಿನ ಸಮಯದಲ್ಲಿ ಆಗಮಿಸಿ ಹೆಬ್ಬೆಟ್ಟು ನೀಡುತ್ತಾರೆ. ಈ ಬಗ್ಗೆ ತಾಲೂಕು ಆಹಾರಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಆಹಾರಾಧಿಕಾರಿಗಳಾದರೂ ಇತ್ತ ಗಮನ ಹರಿಸಿ ಬಯೋಮೆಟ್ರಿಕ್‍ಗಾಗಿ ಜನ ಜಾಗರಣೆ ಮಾಡುವುದನ್ನು ತಪ್ಪಿಸಲಿ ಎಂದು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
