ಚಿತ್ರದುರ್ಗ:
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮ ಸೆ. 01 ರಿಂದ 30 ರವರೆಗೆ ನಡೆಯಲಿದ್ದು, ಮತದಾರರ ಪಟ್ಟಿ ಪರಿಶೀಲನೆಗಾಗಿ ಮನೆ ಮನೆಗೆ ಭೇಟಿ ನೀಡುವ ಮತಗಟ್ಟೆ ಅಧಿಕಾರಿ (ಬಿಎಲ್‍ಒ) ಗಳಿಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ‘ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಕುರಿತು ಶನಿವಾರ ಆಯೋಜಿಸಿದ್ದ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚುನಾವಣಾ ಆಯೋಗವು ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ -2020 ರಡಿಯಲ್ಲಿ ‘ಮತದಾರರ ಪರಿಷ್ಕರಣೆ ಕಾರ್ಯಕ್ರಮವನ್ನು (ಇವಿಪಿ)’ ಸೆ. 01 ರಿಂದ 30 ರವರೆಗೆ ಆಯೋಜಿಸಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಮತಗಟ್ಟೆಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತದೆ.
ಕಾರ್ಯಕ್ರಮದ ಅಂಗವಾಗಿ ಮತದಾರರ ಪಟ್ಟಿಯಲ್ಲಿ ಲೋಪದೋಷಗಳನ್ನು ಸರಿಪಡಿಸುವುದು, ದಾಖಲೆಗಳನ್ನು ಪರಿಶೀಲಿಸುವುದು, ಕುಟುಂಬ ಸದಸ್ಯರ ಮಾಹಿತಿ ಪರಿಶೀಲನೆ, ಮತದಾರರ ದೂರವಾಣಿ ಸಂಖ್ಯೆ, ಮತದಾನ ಕೇಂದ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವಿಕೆ, ಪರಿಶೀಲನೆ ಮತ್ತು ದೃಢೀಕರಣ ಅಥವಾ ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗಾಗಿ ದಾಖಲೆ ಅವಶ್ಯವಿದ್ದು, ಪಾಸ್‍ಪೋರ್ಟ್, ಚಾಲನಾ ಪರವಾನಗಿ, ಆಧಾರ ಕಾರ್ಡ್, ಪಡಿತರ ಚೀಟಿ, ಸರ್ಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್‍ಬುಕ್, ರೈತನ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ಅನುಮೋದಿಸಿರುವ ಯಾವುದೇ ಇತರೆ ದಾಖಲೆಗಳೊಂದಿಗೆ ಹತ್ತಿರದ ಸಾಮಾನ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು.
ಅರ್ಹ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ನಮೂನೆ -6 ರಲ್ಲಿ ಅರ್ಜಿ ಸಲ್ಲಿಸಬೇಕು. ಮರಣ ಮತ್ತು ಖಾಯಂ ಸ್ಥಳಾಂತರಗೊಂಡ ಮತದಾರರ ಹೆಸರನ್ನು ಕೈ ಬಿಡಲು ನಿಗದಿತ ನಮೂನೆ – 7 ರಲ್ಲಿ, ಹಾಗೂ ಮತದಾರರ ಪಟ್ಟಿ ತಿದ್ದುಪಡಿ (ಭಾವಚಿತ್ರ ಸಮೇತ) ನಮೂನೆ – 8 ರಲ್ಲಿ ಅರ್ಜಿ ಸಲ್ಲಿಸಬಹದು.
ಮತದಾರರ ವಿವರ ಪರಿಶೀಲನೆಗಾಗಿ ಜಿಲ್ಲೆಯಲ್ಲಿ ವಿಶೇಷವಾಗಿ ಒಂದು ವಿವರಣಾ ನಮೂನೆ ತಯಾರಿಸಲಾಗಿದ್ದು, ಇದನ್ನು ಮತದಾರರಿಗೆ ನೀಡಲಾಗುತ್ತದೆ. ವಿವರಣಾ ಪಟ್ಟಿಯಲ್ಲಿ ಮತದಾರರು ತಮ್ಮ ಕ್ರಮಸಂಖ್ಯೆ, ಎಪಿಕ್ ಸಂಖ್ಯೆ, ಹೆಸರು, ವಯಸ್ಸು, ಭಾವಚಿತ್ರ, ಸಂಬಂಧ, ಅರ್ಜಿದಾರರ ಸಹಿ ವಿವರ ಸರಿ ಇದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಿ, ವಿವರಣಾ ಪಟ್ಟಿಯಲ್ಲಿ ಭರ್ತಿ ಮಾಡಿ ಡ್ರಾಪ್ ಬಾಕ್ಸ್‍ನಲ್ಲಿ ಹಾಕಬೇಕು. ರಾಜ್ಯದಲ್ಲಿಯೇ ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ವಿಶೇಷ ಕ್ರಮವನ್ನು ಕೈಗೊಳ್ಳ ಲಾಗುತ್ತಿದ್ದು ,ಮತದಾರರ ಪಟ್ಟಿ ದೋಷರಹಿತವಾಗಿರಬೇಕು ಎನ್ನುವುದು ಜಿಲ್ಲಾಡಳಿತದ ಉದ್ದೇಶವಾಗಿದೆ ಎಂದು ತಿಳಿಸಿದರು
ಪದವೀಧರ ಕ್ಷೇತ್ರ ಮತದಾರರ ಪಟ್ಟಿ :
ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದ ಮತದಾರರ ಪಟ್ಟಿ ಸಿದ್ದಪಡಿಸುವ ಬಗ್ಗೆ ಭಾರತ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಇದರನ್ವಯ ಅಕ್ಟೋಬರ್ 01 ರಿಂದ ಪಬ್ಲಿಕ್ ನೋಟೀಸ್ ಹೊರಡಿಸಲಾಗುತ್ತದೆ. ನವೆಂಬರ್ 6 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ನ. 23 ರಿಂದ ಡಿ. 9 ರವರೆಗೆ ಕರಡು ಮತದಾರರ ಪಟ್ಟಿ ಪ್ರಚುರಪಡಿಸಲಾಗುವುದು ಎಂದು ಅವರು ತಿಳಿಸಿದರು
ಡಿ. 30 ರಂದು ಮತದಾರರ ಅಂತಿಮ ಪಟ್ಟಿ ಪ್ರಚುರ ಪಡಿಸಲಾಗುತ್ತದೆ. 2016 ರ ನವೆಂಬರ್ 1 ಕ್ಕೆ ಪದವಿ ಪೂರ್ಣಗೊಳಿಸಿದ ಅರ್ಹ ಮತದಾರರು ನಮೂನೆ -18 ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸಂಬಂಧಪಟ್ಟ ತಾಲ್ಲೂಕು ಕಛೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಎಲ್ಲಾ ರಾಜಕೀಯ ಪಕ್ಷದವರು ಮತಗಟ್ಟೆಗಳಲ್ಲಿನ ಬಿಎಲ್‍ಒ ಗಳೊಂದಿಗೆ ಸಮನ್ವಯತೆಯಿಂದ ಸಹಕಾರ ನೀಡಬೇಕು. ಸಾರ್ವಜನಿಕರು ಕೂಡ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಕರೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವಿಜಯ್‍ಕುಮಾರ್, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು, ಹಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ