ಬಳ್ಳಾರಿ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಅನಧಿಕೃತವಾಗಿ ನುಗ್ಗಿದ ಆರೋಪದಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಗ್ರಾಮೀಣ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ತೆಲುಗು ಸಾಕ್ಷಿ ಪತ್ರಿಕೆಯ ವರದಿಗಾರ ಗುರುಶಾಂತ ಅವರ ವಿರುದ್ಧ ಇಲ್ಲಿನ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯ ಸಹಾಯಕ ನಿರ್ದೇಶಕರಾದ ಬಿ.ಕೆ. ರಾಮಲಿಂಗಪ್ಪ ಅವರು ಶನಿವಾರ ತಡರಾತ್ರಿ ಇಲ್ಲಿನ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ತೆರಳಿ, ಕಚೇರಿಗೆ ಅನಧಿಕೃತ ಪ್ರವೇಶ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ, ಪ್ರಾಣ ಬೆದರಿಕೆ ನೀಡಿರುವ ಕುರಿತು ಬಂಗ್ಲೆ ಮಲ್ಲಿಕಾರ್ಜುನ ಮತ್ತು ವರದಿಗಾರ ಗುರುಶಾಂತ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಜನಶ್ರೀ ವಾಹಿನಿಯಲ್ಲಿ ಬಳ್ಳಾರಿ ವರದಿಗಾರರಾಗಿ ಕೆಲಸ ಮಾಡುವ ಎಂ.ಇ.ಜೋಷಿ ಅವರಿಗೆ ನೀಡಿದ ಮಾನ್ಯತೆ ಕಾರ್ಡ್ ಅನ್ನು ಜನಶ್ರೀ ವಾಹಿನಿ ಮುಚ್ಚಿದ ಕಾರಣ ವಾಪಾಸ್ಸು ಕೊಡುವಂತೆ ಜೂನ್ 6, 2019 ರಂದು ಖಡಕ್ ಸೂಚನೆ ನೀಡಿದ್ದರಿಂದ ಅವರು ಮಾನ್ಯತೆ ಕಾರ್ಡ್ ತಂದು ಕೊಟ್ಟಿದ್ದಾರೆ.
ಮಾನ್ಯತೆ ಕಾರ್ಡ್ ಅನ್ನು ವಾಪಾಸ್ಸು ಪಡೆದಿದ್ದನ್ನು ಸಹಿಸಿಕೊಳ್ಳದ ಎಂ.ಇ.ಜೋಷಿರವರ ಸ್ನೇಹಿತನಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಗ್ರಾಮೀಣ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ಸಾಕ್ಷಿ ಪತ್ರಿಕೆ ವರದಿಗಾರ ಗುರುಶಾಂತ ಅವರು ನನ್ನ ಮೇಲೆ ದ್ವೇಷ ಹೊಂದಿ, ಜೂನ್ 19ರಂದು ಬೆಳಿಗ್ಗೆ 11ಗಂಟೆ ಸುಮಾರಿಗೆ ಏಕಾಏಕಿ ನನ್ನ ಕಚೇರಿಯ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಬಿ.ಕೆ. ರಾಮಲಿಂಗಪ್ಪ ತಿಳಿಸಿದ್ದಾರೆ.ಈ ದೂರಿನ ಮೇರೆಗೆ ಠಾಣಾ ಎನ್ ಸಿ ನಂ.53/19 ಕಲಂ 186, 506 ಮತ್ತು 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ