ದುಬಾರಿ ದಂಡದ ವಿರುದ್ಧ ಚಾಲಕರ ಪ್ರತಿಭಟನೆ .!

ಬೆಂಗಳೂರು

    ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವುದನ್ನು ವಿರೋಧಿಸಿ ವಾಹನ ಚಾಲಕರು ಪ್ರತಿಭಟನೆ ನಡೆಸುತ್ತಿರು ವುದನ್ನು ತೀವ್ರವಾಗಿ ಖಂಡಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು,ಸಂಚಾರ ನಿಯಮ ಉಲ್ಲಂಘನೆ ಮಾಡದಿದ್ದರೆ, ಏಕೆ ದಂಡ ಬೀಳುತ್ತದೆ ಎಂದು ಪ್ರಶ್ನಿಸಿದರು.

    ನಗರದಲ್ಲಿನ ರಸ್ತೆ ಹಾಗೂ ಸಂಚಾರ ಶಿಸ್ತು ತರಲು ದುಬಾರಿ ದಂಡ ವಿಧಿಸುವುದು ಅನಿವಾರ್ಯವಾಗಿದೆ. ದುಬಾರಿ ದಂಡದಿಂದ ರಾಜ್ಯದ ಬೊಕ್ಕಸ ತುಂಬಬೇಕಾದ ಅಗತ್ಯವಿಲ್ಲ. ಕಾನೂನಿಗೆ ಎಲ್ಲರೂ ಗೌರವ ನೀಡಬೇಕಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಹೊಸ ಮೋಟಾರು ಕಾಯ್ದೆ ಅನ್ವಯ ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 5 ಕೋಟಿ ಕರಪತ್ರಗಳನ್ನು ಮುದ್ರಿಸಿ ಹಂಚಲಾಗುವುದು,ನಗರದ ಪ್ರತಿ ಮನೆಮನೆಗೆ ದಿನಪತ್ರಿಕೆಗಳ ಜೊತೆ ಕರಪತ್ರಗಳನ್ನು ಹಂಚಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಇನ್ನಿತರ ಮಾಧ್ಯಮಗಳ ಮೂಲಕ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

   ಸಂಚಾರ ನಿಯಮ ಉಲ್ಲಂಘಿಸಿ ಏಕೆ ದಂಡ ಕಟ್ಟುತ್ತೀರ? ಎಂದು ವಾಹನ ಸವಾರರನ್ನು ಪ್ರಶ್ನಿಸಿದ ಅವರು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಜೀವದ ಅಪಾಯ ಹಾಗೂ ಬೇರೊಬ್ಬರ ಜೀವಕ್ಕೆ ತರುವುದನ್ನು ತಡೆಗಟ್ಟಿ ಎಂದು ಸಲಹೆ ಮಾಡಿದರು.

    ದುಬಾರಿ ದಂಡ ಜಾರಿಗೆ ಬಂದ ನಂತರ, ಅಪಾಯಕಾರಿ ಚಾಲನೆ, ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚಾರ, ವಾಹನ ನಿಲುಗಡೆ ಇಲ್ಲದ ಕಡೆಗಳಲ್ಲಿ ವಾಹನ ನಿಲ್ಲಿಸುವುದು, ಇನ್ನಿತರ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ, ದಂಡ ವಿಧಿಸಲಾಗುತ್ತಿದೆ ಎಂದರು.ಎರಡು ದಿನಗಳ ಹಿಂದೆ ಸ್ಕೂಲ್ ವಾಹನದ ಚಾಲಕನೊಬ್ಬ 14 ಮಂದಿ ಮಕ್ಕಳನ್ನು ಕೂರಿಸಿಕೊಂಡು ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಸಂಚರಿಸಿದ್ದ. ಕೂಡಲೇ ಆತನಿಗೆ 14 ಸಾವಿರ ರೂ. ಗಳ ದಂಡ ವಿಧಿಸಲಾಗಿದೆ ಎಂದು ಹೇಳಿದರು.

ಡಿಜಿ ಲಾಕರ್ ಜಾರಿ

    ವಾಹನ ತಪಾಸಣೆ ನಡೆಸುವ ಸಂಚಾರ ಪೊಲೀಸರಿಗೆ ವಾಹನ ಚಾಲಕರು ಚಾಲನಾ ಪರವಾನಗಿ, ಇನ್ನಿತರ ದಾಖಲಾತಿಗಳನ್ನು ಡಿಜಿ ಲಾಕರ್‍ನಲ್ಲಿರುವುದನ್ನು ತೋರಿಸಬಹುದು. ಇಲ್ಲದಿದ್ದರೆ, ದಾಖಲಾತಿಗಳ ನಕಲು ಪ್ರತಿಗಳನ್ನು ತೋರಿಸಿದರೆ ಸಾಕು. ಯಾವುದೇ ದಂಡ ವಿಧಿಸುವುದಿಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದರು.

     ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸದೆ, ಶಿಸ್ತನ್ನು ಕಾಪಾಡಿಕೊಂಡಿದ್ದರೆ, ಉಳಿದ ದಾಖಲಾತಿಗಳ ಬಗ್ಗೆ ಸದ್ಯಕ್ಕೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಅವರು, ಗಣ್ಯರು ಸಂಚಾರ ಉಲ್ಲಂಘನೆ ಮಾಡಿದರೆ, ಮುಂದಿನ ದಿನಗಳಲ್ಲಿ ಅವರಿಗೂ ದಂಡ ವಿಧಿಸಲಾಗುವುದು ಎಂದು ಹೇಳಿದರು.

ಮೊಬೈಲ್ ಕಳವು ಪತ್ತೆ

    ನಗರದಲ್ಲಿ ಇತ್ತೀಚೆಗೆ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಕಳವು ಮಾಡಿದ ಕೂಡಲೇ ಪ್ರಕರಣ ದಾಖಲಿಸಿ, ದುಷ್ಕರ್ಮಿಗಳ ಪತ್ತೆ ಕಾರ್ಯ ಕೈಗೊಳ್ಳಲಾಗುವುದು. ಕಳವು ಪ್ರಕರಣಗಳಲ್ಲಿ ಶೇ. 70 ರಷ್ಟು ಪತ್ತೆಯಾಗಿವೆ. ಉಳಿದವುಗಳನ್ನು ಪತ್ತೆಮಾಡಲು ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ ಎಂದರು.

ಅಕ್ರಮ ವಲಸೆ

    ನಗರದಲ್ಲಿ ಅಕ್ರಮ ವಲಸಿಗರು ಇರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೂ ಪೊಲೀಸರು ಗಸ್ತು ತಿರುಗುವ ವೇಳೆ ಮಾಹಿತಿ ಸಂಗ್ರಹಿಸಿದ್ದು, ಅಕ್ರಮ ವಾಸಿಗಳು ನೆಲೆಸಿರುವುದು ಕಂಡುಬಂದರೆ, ಕೂಡಲೇ ಅವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link