ಪಾವಗಡ
ಆಂಧ್ರ್ರದ ಹಂದ್ರಿನಿವಾ ಯೋಜನೆಯಲ್ಲಿ ತಾಲ್ಲೂಕಿನ ಪೇರೂರು ಡ್ಯಾಂಗೆ ನೀರು ಹರಿಸಲು ಕರ್ನಾಟಕ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಸಂಸದ ಎನ್. ನಾರಾಯಣಸ್ವಾಮಿ ತಿಳಿಸಿದರು.
ಅವರು ಮಂಗಳವಾರ ನಾಗಲಮಡಿಕೆಯ ಉತ್ತರ ಪಿನಾಕಿನಿ ನದಿ ಬಳಿ ಹಳ್ಳದಲ್ಲಿ ನಿರ್ಮಾಣವಾಗಿರುವ ತಡೆಗೋಡೆಯನ್ನು ಪರಿಶೀಲಿಸಿ ನಂತರ ಅಂತ್ಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ರೈತರ ಸಭೆಯಲ್ಲಿ ಮಾತನಾಡಿದರು. ಹಂದ್ರಿನಿವಾ ಯೋಜನೆಯಲ್ಲಿ ಈ ಹಿಂದಿನ ಟಿಡಿಪಿ ಸರ್ಕಾರದ ಅವಧಿಯಲ್ಲಿ ಸಚಿವೆಯಾಗಿದ್ದ ಪೆರಿಟಾಲ ಸುನೀತಾ ಈ ಯೋಜನೆಯಲ್ಲಿ ನಾಗಲಮಡಿಕೆ ಮೂಲಕ ನೀರು ಹರಿಸಲು ಒಪ್ಪಿರಲಿಲ್ಲ.
ಆದರೆ ಈಗಿನ ವೈಎಸ್‍ಆರ್ ಪಕ್ಷದ ರಾಪ್ತಾಡು ಶಾಸಕ ತೋಪುದುರ್ತಿ ಪ್ರಕಾಶ್‍ರೆಡ್ಡಿ ಉತ್ಸ್ಸಾಹಕರಾಗಿದ್ದಾರೆ. ಅವರು ಕಳೆದೆರಡು ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಈ ಯೋಜನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದರಿಂದ ನಾನೆ ಖುದ್ದು ಉತ್ತರ ಪಿನಾಕಿನಿ ಹಳ್ಳವನ್ನು ನೋಡಲು ಬಂದಿದ್ದೇನೆ ಎಂದು ತಿಳಿಸಿದರು.
14 ಕಿಲೋಮೀಟ್ ದೂರವಿರುವ ರೊದ್ದಂ ಬಳಿ ತುರುಕುಲಾಪಟ್ಟಣಂ ಗ್ರಾಮದ ಮೂಲಕ ನಾಗಲಮಡಿಕೆಯ ಹಳ್ಳ ದಿಂದ ನೀರು ಹರಿಸಿದರೆ ಪಾವಗಡ ಪಟ್ಟಣಕ್ಕೆ ನೀರು ಸರಬರಾಜು ಮಾಡಬಹುದು. ಸುಮಾರು 40 ಕಿಲೋಮೀಟರ್ ವರೆಗೂ ಅಂರ್ತಜಲ ಹೆಚ್ಚಾಗುತ್ತದೆ. ಆದ್ದರಿಂದ ಈ ಭಾಗದ ರೈತರು ಶ್ರಮದಾನದ ಮೂಲಕ ಕಾಲುವೆಯನ್ನು ಅಭಿವೃದ್ದಿ ಪಡಿಸಲು ಮುಂದಾಗಬೇಕೆಂದು ರೈತರಿಗೆ ಕರೆ ನೀಡಿದರು.
ದೇವಸ್ಥಾನಗಳಿಗೆ ಯಾವ ರೀತಿ ಕೈ ಮುಗಿದು ಪೂಜೆ ಮಾಡುತ್ತೇವೆಯೊ ಅದೇ ರೀತಿ, ಶಾಲೆಗಳಿಗೂ ಪೂಜೆ ಮಾಡಿ ಕೈ ಮುಗಿದಾಗ ದೇಶ ಉದ್ದಾರವಾಗುತ್ತದೆ. ತಾಲ್ಲೂಕಿನ ಬಹಳಷ್ಟು ಸರ್ಕಾರಿ ಶಾಲೆಗಳು ಶಿಥಿಲಗೊಂಡಿವೆ. ಅವುಗಳ ಅಭಿವೃದ್ದಿಗಾಗಿ ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳು ಮುಂದೆ ಬಂದಿವೆ. ಸಿಎಸ್ ಆರ್ ಫಂಡ್‍ನಲ್ಲಿ ಶಾಲೆಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್. ಶಿವಪ್ರಸಾದ್ ಮಾತನಾಡಿ, ಹಂದ್ರಿನಿವಾ ಯೋಜನೆಯಿಂದ ತಾಲ್ಲೂಕಿನ ಸುಮಾರು 70 ಹಳ್ಳಿಗಳಿಗೆ ಅನುಕೂಲವಾಗುತ್ತದೆ. ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಸದಾನಂದಗೌಡರ ಅವಧಿಯಲ್ಲಿ ಭದ್ರಾ ಮೇಲ್ದಂಡೆ, ತುಂಗಭದ್ರಾ ಯೋಜನೆಗಳು ಜಾರಿಯಾದರೂ ಸಹ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಗಳು ನೆನೆಗುದಿಗೆ ಬಿದ್ದವು. ಈಗ ಬಿಜೆಪಿ ಸರ್ಕಾರದಲ್ಲಿ ಈ ಎಲ್ಲಾ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ವರದರಾಜು, ಸಣ್ಣ ನೀರಾವರಿ ಇಲಾಖೆಯ ಎಂಜಿನೀಯರ್ ಚಿತ್ತಯ್ಯ, ಗುರು, ರವಿಚಂದ್ರನ್, ಚಂದ್ರಶೇಖರ್, ಜಿ.ಪಂ. ಎ.ಇ.ಇ. ರಾಮಚಂದ್ರ ದೇಶಪಾಂಡೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಎಂಜಿನೀಯರ್ ಬಿ.ಪಿ. ನಾಗರಾಜ್, ಬಸವಲಿಂಗಪ್ಪ, ಪುರಸಭಾ ಮುಖ್ಯಾಧಿಕಾರಿ ಜಿ. ನವೀನ್ ಚಂದ್ರ, ಬಿ.ಜೆ.ಪಿ. ತಾ. ಅಧ್ಯಕ್ಷ ಜಿ.ಟಿ. ಗಿರೀಶ್, ಮುಖಂಡರಾದ ವಕೀಲ ಕೃಷ್ಣಾನಾಯ್ಕ, ಸಾಕೇಲ್‍ಶಿವಕುಮಾರ್, ಕೊತ್ತೂರು ಹನುಮಂತರಾಯಪ್ಪ, ಕರಿಯಣ್ಣ, ರವಿ, ಆಲ್ಕುಂದ್ ರಾಜ್, ರವಿಶಂಕರ್‍ನಾಯ್ಕ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ