ಬೀದಿದೀಪ ಹಗರಣ: ಪಾಲಿಕೆಯಲ್ಲಿ ಕೋಲಾಹಲ

ತುಮಕೂರು
   ತುಮಕೂರು ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಅಳವಡಿಸಿರುವ ಬೀದಿದೀಪ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ಸಂಬಂಧಿಸಿದ ಗುತ್ತಿಗೆದಾರರಿಂದ ಕೋಟ್ಯಂತರ ರೂ.ಗಳ ಹಗರಣ ನಡೆದಿದೆಯೆಂಬ ಆರೋಪ ಬುಧವಾರ ಏರ್ಪಟ್ಟಿದ್ದ ತುಮಕೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೋಲಾಹಲ ಉಂಟುಮಾಡಿ, ಕಾವೇರಿದ ಚರ್ಚೆಗೆ ಎಡೆಮಾಡಿತು.
    ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮುಂದುವರೆದ ನಾಲ್ಕನೇ ದಿನದ ಸಾಮಾನ್ಯ ಸಭೆಯಲ್ಲಿ ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು ತಮ್ಮ ವಾರ್ಡ್‍ನ ಬೀದಿದೀಪದ ಸಮಸ್ಯೆ ಕುರಿತು ಚರ್ಚಿಸುವಾಗ ಚರ್ಚೆಯ ಮಧ್ಯೆ ಪ್ರವೇಶಿಸಿದ ಪಕ್ಷೇತರ ಸದಸ್ಯ ವಿಷ್ಣುವರ್ಧನ ಬೀದಿದೀಪ ಹಗರಣವನ್ನು ಎಳೆಎಳೆಯಾಗಿ ದಾಖಲೆಯ ಸಹಿತ ಸಭೆಯಲ್ಲಿ ಬಿಡಿಸಿಟ್ಟರು.
    ಬೀದಿ ದೀಪಗಳಿಗೆ ಸಂಬಂಧಿಸಿದಂತೆ ಈ ಹಿಂದೆ ವಿನಾಯಕ ಎಲೆಕ್ಟ್ರಿಕಲ್ಸ್ ಎಂಬ ಸಂಸ್ಥೆಗೆ ಗುತ್ತಿಗೆ ಲಭಿಸಿದ್ದು, ಆ ಸಂಸ್ಥೆಯೇ ಈಗಲೂ ಮುಂದುವರೆಸಿದೆ. ಬೀದಿದೀಪಗಳ ಅಳವಡಿಕೆ ಮತ್ತು ನಿರ್ವಹಣೆಗಾಗಿ ನಾಲ್ಕು ಪ್ಯಾಕೇಜ್ ಮಾಡಲಾಗಿದೆ. ಸದರಿ ಗುತ್ತಿಗೆದಾರರಿಗೆ ಇದಕ್ಕಾಗಿ ತಿಂಗಳಿಗೆ 28 ಲಕ್ಷ ರೂ.ಗಳನ್ನು ಪಾಲಿಕೆಯು ಪಾವತಿಸುತ್ತಿದೆ. ಆದರೆ ಸದರಿ ಗುತ್ತಿಗೆದಾರರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ.
   ನಿಯಮದಂತೆ ನಾಲ್ಕು ಪ್ಯಾಕೇಜ್‍ಗಳಿಗೆ ಅನುಗುಣವಾಗಿ ನಾಲ್ಕು ಕಚೇರಿಯನ್ನು ತೆರೆದಿಲ್ಲ. ಸಂಪರ್ಕಿಸಬೇಕಾದ ದೂರವಾಣಿ ನಮೂದಿಸಿಲ್ಲ. ಗುಣಮಟ್ಟದ ಬಲ್ಬ್‍ಗಳನ್ನು ಅಳವಡಿಸುತ್ತಿಲ್ಲ. ಕಳಪೆ ದರ್ಜೆಯ ಹಾಗೂ ಕಡಿಮೆ ದರದ ಬಲ್ಬ್‍ಗಳನ್ನು ಹಾಕಲಾಗುತ್ತಿದೆ. ಕೆಟ್ಟುಹೋದ ಬೀದಿದೀಪಗಳನ್ನು ಸಕಾಲದಲ್ಲಿ ದುರಸ್ಥಿಗೊಳಿಸುತ್ತಿಲ್ಲ. ಸ್ವಿಚ್ ಮತ್ತು ಚೋಕ್‍ಗಳ ಗುಣಮಟ್ಟದಲ್ಲಿ ಅವ್ಯವಹಾರ ಆಗುತ್ತಿದೆ. ಎಷ್ಟೋಕಡೆ ಸ್ವಿಚ್ ಇಲ್ಲವೇ ಇಲ್ಲ.
   ನಿಯಮದಂತೆ ಕಾಪರ್ ಚೋಕ್ ಇಲ್ಲ ಎಂದು ದಾಖಲೆಗಳ ಸಮೇತ ವಿಷ್ಣುವರ್ಧನ ವಿವರಿಸಿದರು. ಮಾತಿನುದ್ದಕ್ಕೂ ವಿದ್ಯುತ್ ವಿಭಾಗದ ಇಂಜಿನಿಯರ್‍ಗಳನ್ನು ಪ್ರಶ್ನಿಸುತ್ತ ಹೋದಾಗ, ಕೆಲವು ಸಂದರ್ಭಗಳಲ್ಲಿ ಕೆಲವು ಕಿರಿಯ ಇಂಜಿನಿಯರ್‍ಗಳು ಸಮಂಜಸ ಉತ್ತರ ಕೊಡಲಾಗದೆ ತಡವರಿಸಿದರು. 
    ತಮ್ಮ ಬಡಾವಣೆಯ ಅನೇಕ ಸ್ಥಳಗಳಲ್ಲಿ ಬೀದಿದೀಪಗಳ ಸ್ವಿಚ್‍ಗಳ ದುಸ್ಥಿತಿಯ ಫೋಟೋಗಳನ್ನು ಪ್ರದರ್ಶಿಸಿದ ಅವರು, ಯಾರಾದರೂ ಅಮಾಯಕ ಸಾರ್ವಜನಿಕರು, ಮಕ್ಕಳು ಇದನ್ನು ಆಕಸ್ಮಿಕವಾಗಿ ಮುಟ್ಟಿ ಜೀವಹಾನಿ ಆದರೆ ಅದಕ್ಕೆ ಯಾರು ಹೊಣೆಗಾರರಾಗುತ್ತಾರೆ? ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.
ಎ.ಇ.ಇ. ಸ್ಪಷ್ಟನೆ
   ಚರ್ಚೆಯ ನಡುವೆ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ವಸಂತ್, ಬೀದಿದೀಪ ವ್ಯವಸ್ಥೆಗೆ ಸಂಬಂಧಿಸಿದಂತೆ ಈವರೆಗಿನ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಅಷ್ಟೇ ಸವಿವರವಾಗಿ ಸಭೆಯ ಗಮನಕ್ಕೆ ತಂದರು. ಈ ಹಿಂದಿನ ಪಾಲಿಕೆಯ ಚುನಾಯಿತ ಮಂಡಲಿ ಅವಧಿಯಲ್ಲಿ ವಿನಾಯಕ ಎಲೆಕ್ಟ್ರಿಕಲ್ಸ್‍ಗೆ ನೀಡಲ್ಪಟ್ಟಿದ್ದ ಗುತ್ತಿಗೆಯನ್ನು ಮುಂದುವರೆಸುವಂತೆ ನಿರ್ಣಯ ಅಂಗೀಕರಿಸಿದ್ದು, ಈ ವಿಷಯದಲ್ಲಿ ಪಾಲಿಕೆ ಆಡಳಿತವು ಕಾನೂನು ನಿಯಮಗಳ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ನಂತರದಲ್ಲಿ ಜಿಲ್ಲಾಧಿಕಾರಿಗಳು ಪಾಲಿಕೆಗೆ ನೀಡಿದ ಆದೇಶ, ಆ ಬಳಿಕ ನಡೆದಿರುವ ಬೆಳವಣಿಗೆ ಕುರಿತು ದಾಖಲೆ ಸಹಿತ ವಿವರ ಕೊಟ್ಟರು. ಅಲ್ಲದೆ ಸದರಿ ವಿನಾಯಕ ಎಲೆಕ್ಟ್ರಿಕಲ್ಸ್ ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಗುರುತಿಸಿ, ಕಾನೂನಿನ ಪ್ರಕಾರ ನೋಟೀಸ್ ನೀಡಿರುವ ಹಾಗೂ ಬಿಲ್‍ಗಳನ್ನು ತಡೆಹಿಡಿದಿರುವುದರ ಬಗ್ಗೆ ಸಭೆಯ ಗಮನ ಸೆಳೆದರು. ಈ ವಿಷಯದಲ್ಲಿ ಸಭೆಯು ಮುಂದಿನ ನಿರ್ಣಯ ಅಂಗೀಕರಿಸಬಹುದು ಎಂದು ಸಲಹೆಯಿತ್ತರು.
 
   ಮತ್ತೆ ಮಾತು ಮುಂದುವರೆಸಿದ ವಿಷ್ಣುವರ್ಧನ, ಒಂದು ಹಂತದಲ್ಲಿ ಸದರಿ ಗುತ್ತಿಗೆದಾರರು ಶೇ.30 ರಷ್ಟಾದರೂ ಕಾಪರ್ ಚೋಕ್‍ಗಳನ್ನೇ ಬಳಸಿರುವುದು ಕಂಡುಬಂದಲ್ಲಿ ತಾವು ಸದಸ್ಯತ್ವಕ್ಕೆ ರಾಜಿನಾಮೆ ನೀಡುವುದಾಗಿ ಸವಾಲು ಹಾಕಿದರು. ಬೀದಿದೀಪಗಳ ನಿರ್ವಹಣೆಯಲ್ಲಿ ಇಷ್ಟೆಲ್ಲ ಲೋಪದೋಷಗಳಿರುವಾಗ ಸಂಬಂಧಿಸಿದ ಇಂಜಿನಿಯರ್‍ಗಳ ಮೇಲೂ ಕ್ರಮ ಆಗಬೇಕಲ್ಲವೇ ಎಂದು ಪಾಲಿಕೆ ಆಡಳಿತವನ್ನು ಪ್ರಶ್ನಿಸಿದರು.
ಭೂಪಾಲನ್ ಆಶೀರ್ವಾದದಿಂದ
   ಹಿಂದಿನ ಆಯುಕ್ತ ಟಿ.ಭೂಪಾಲನ್ ಅವರ ಆಶೀರ್ವಾದದಿಂದ ನಾನು ಸರ್ಕಾರದ ಸುತ್ತೋಲೆಗಳನ್ನು ಓದುವ ಹಾಗೂ ಪಾಲಿಕೆಯ ಕಾನೂನುಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದೇನೆ ಎಂದು ಮಾತಿನ ನಡುವೆ ವಿಷ್ಣುವರ್ಧನ ಹೇಳಿದಾಗ, ಬಿಜೆಪಿಯ ಎಚ್.ಮಲ್ಲಿಕಾರ್ಜುನಯ್ಯ  ಸಹ ದನಿಗೂಡಿಸುತ್ತ ತಾವೂ ಸಹ ಭೂಪಾಲನ್ ಅವರಿಂದ ಪ್ರಭಾವಿತರಾಗಿ ಕಾನೂನು-ನಿಯಮಾವಳಿಗಳನ್ನು ಓದುತ್ತಿರುವುದಾಗಿ ಹೇಳಿಕೊಂಡರು.
ಬ್ಲಾಕ್ ಲಿಸ್ಟ್‍ಗೆ ಹಾಕಿ
   ಇದು ಕೋಟ್ಯಂತರ ರೂ.ಗಳ ಹಗರಣ ಆಗಿದೆ. ಆದ್ದರಿಂದ ಇದರ ಬಗ್ಗೆ ತನಿಖೆ ಆಗಬೇಕು. ಸದರಿ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‍ಗೆ ಹಾಕಬೇಕು. ಬಾಕಿ ಇರುವ ಬಿಲ್ ಮೊತ್ತವನ್ನು ಪಾವತಿಸಬಾರದು ಎಂದು ವಿಷ್ಣುವರ್ಧನ ಆಗ್ರಹಿಸಿದರು. ಸದಸ್ಯರುಗಳಾದ ಬಿ.ಎಸ್.ಮಂಜುನಾಥ್ , ಇನಾಯತ್ ಉಲ್ಲಾ ಖಾನ್ , ಶಕೀಲ್ ಅಹಮದ್ ಶರೀಫ್ , ಎಸ್.ಮಂಜುನಾಥ್ , ಟಿ.ಕೆ.ನರಸಿಂಹಮೂರ್ತಿ , ಎಂ.ಕೆ.ಮನು , ಜೆ.ಕುಮಾರ್ , ವಿರೋಧ ಪಕ್ಷದ ನಾಯಕ ಸಿ.ಎನ್.ರಮೇಶ್ , ಎ.ಶ್ರೀನಿವಾಸ್ , ಧರಣೇಂದ್ರ ಕುಮಾರ್ , ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್  ಮೊದಲಾದವರು ಇದಕ್ಕೆ ದನಿಗೂಡಿಸಿದರು.
ಗೊಂದಲಕ್ಕೆ ಬಿದ್ದ ಸಭೆ
   ಆಗ ಪ್ರಭಾರ ಆಯುಕ್ತ ಯೋಗಾನಂದ್ ಪ್ರತಿಕ್ರಿಯಿಸಿ, ಒಂದು ವೇಳೆ ಸದರಿ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‍ಗೆ ಹಾಕಬೇಕೆಂದು ನಿರ್ಣಯಿಸಿದರೆ, ನಾಳೆಯಿಂದ ಬೀದಿದೀಪ ನಿರ್ವಹಣೆಗೆ ಏನು ಮಾಡಬೇಕು ಎಂಬುದನ್ನೂ ಆಲೋಚಿಸಬೇಕು ಎಂದು ಹೇಳಿದಾಗ ಇಡೀ ಸಭೆ ಗೊಂದಲದಲ್ಲಿ ಮುಳುಗಿತು. ಒಮ್ಮೆ ಬ್ಲಾಕ್ ಲಿಸ್ಟ್‍ಗೆ ಹಾಕಿದರೆ, ನಾಳೆಯಿಂದ ಆ ಗುತ್ತಿಗೆದಾರರನ್ನು ಕೆಲಸ ಮಾಡುವಂತೆ ನಾವು ಕೇಳಲು ಸಾಧ್ಯವಾಗದು. ಆಗ ಸಾರ್ವಜನಿಕರು ಬೀದಿದೀಪಗಳ ಬಗ್ಗೆ ಸದಸ್ಯರ ಬಳಿ ಬರುತ್ತಾರೆ ಹಾಗೂ ಅಧಿಕಾರಿಗಳ ಬಳಿ ಬರುತ್ತಾರೆ. ಆಗ ಏನು ಮಾಡಬೇಕು ಎಂಬುದನ್ನು ನೀವೇ ಈಗಲೇ ತೀರ್ಮಾನಿಸಿ ಎಂದು ಸಲಹೆ ನೀಡಿದರು. 
    ಇದರಿಂದ ಸದಸ್ಯರು ಗೊಂದಲಕ್ಕೆ ಬಿದ್ದರು. ಮತ್ತೆ ಚರ್ಚೆ ಮುಂದುವರೆಯಿತು. ಮಧ್ಯೆ ಪ್ರವೇಶಿಸಿದ ಸೈಯದ್ ನಯಾಜ್  ಬೀದಿದೀಪಗಳ ಬಗ್ಗೆ ಹೊಸ ಟೆಂಡರ್ ಆಗುವವರೆಗೂ ಪಾಲಿಕೆಯಿಂದಲೇ ನಿರ್ವಹಿಸಬಹುದು. ಬೀದಿದೀಪಗಳನ್ನು ಖರೀದಿಸಿ, ಹೊಸದಾಗಿ ನಾಲ್ಕು ವಾಹನ ಖರೀದಿಸಿ ಪಾಲಿಕೆ ಸಿಬ್ಬಂದಿ ಮೂಲಕವೇ ಆ ಕೆಲಸ ಮಾಡಿಸಬಹುದು. ಇದರಿಂದ ಪಾಲಿಕೆಗೆ ತಿಂಗಳಿಗೆ ಲಕ್ಷಾಂತರ ರೂ. ಉಳಿಕೆಯಾಗುವುದು ಎಂದು ಹೇಳಿದರು. 
     ಆದರೆ ಈ ಸಲಹೆಗೆ ಕಾನೂನಾತ್ಮಕವಾಗಿ ಅವಕಾಶವಿಲ್ಲ ಎಂದು ಇಂಜಿನಿಯರ್ ವಸಂತ್ ಮತ್ತು ಪ್ರಭಾರ ಆಯುಕ್ತ ಯೋಗಾನಂದ್ ಸ್ಪಷ್ಟಪಡಿಸಿದರು. ಮತ್ತೆ ಚರ್ಚೆ ಮುಂದುವರೆಯಿತು. ಅಷ್ಟರಲ್ಲಿ ಮತ್ತೆ ಮಾತಿಗಿಳಿದ ಸೈಯದ್ ನಯಾಜ್, ಈ ಹಿಂದೆ ಪಾಲಿಕೆಯಲ್ಲಿ ಇದೇ ಕೆಲಸ ನಿರ್ವಹಿಸುತ್ತಿದ್ದವರು ಅತಿ ಕಡಿಮೆ ದರದಲ್ಲಿ ಕೆಲಸ ಮಾಡಿದ ಉದಾಹರಣೆ ಇದೆ. ಅವರಿಗೇ ಏಕೆ ಅನುವುಮಾಡಿಕೊಡಬಾರದು ಎಂದು ಹೇಳಿದರು. ಆಗ ಪುನಃ ಚರ್ಚೆ ಉಂಟಾಯಿತು. ಅಷ್ಟರಲ್ಲಿ ವೇಳೆ 3 ಗಂಟೆ ಆಗುತ್ತಿದ್ದುದರಿಂದ ಭೋಜನ ವಿರಾಮಕ್ಕೆಂದು ಸಭೆಯನ್ನು ಮುಂದೂಡಲಾಯಿತು. 
ಹೊಂಡು ನೀರು ಪೂರೈಕೆ
    ಇದಕ್ಕೂ ಮೊದಲು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು  ತಮ್ಮ ವಾರ್ಡ್‍ನಲ್ಲಿ ನಲ್ಲಿಗಳ ಮೂಲಕ ಹೊಂಡು ನೀರು ಸರಬರಾಜಾಗುತ್ತಿದೆ ಎಂದು ಹೇಳಿದ್ದು ಸಭೆಯ ಆರಂಭದಲ್ಲಿ ಭಾರಿ ಚರ್ಚೆಗೆ ಆಸ್ಪದ ನೀಡಿತು.ಮೇಯರ್ ಆದಿಯಾಗಿ ಬಹುತೇಕ ಎಲ್ಲ ಸದಸ್ಯರುಗಳೂ ತಮ್ಮ ತಮ್ಮ ವಾರ್ಡ್‍ಗಳಲ್ಲಿ ಇಂತಹುದೇ ಸಮಸ್ಯೆ ಎದುರಾಗಿದೆಯೆಂದು ಏರಿದ ದನಿಯಲ್ಲೇ ಹೇಳಿದರು. ಆಲಂ ಗುಣಮಟ್ಟದಿಂದ ಕೂಡಿಲ್ಲ. ಮೋಟಾರ್ ಪಂಪುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
 
     ಹೇಮಾವತಿ ನೀರು ಲಭ್ಯವಿದ್ದರೂ 7 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ ಎಂಬಿತ್ಯಾದಿಯಾಗಿ ಸದಸ್ಯರುಗಳು ದೂರುತ್ತಾ ಹೋದರು. ನೀರು ಪೂರೈಕೆ ವಿಭಾಗದ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ಪ್ರವೀಣ್ ನೀಡಿದ ಸಮಜಾಯಿಷಿಗೆ ಸದಸ್ಯರು ಒಪ್ಪಲಿಲ್ಲ. ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಲಿಯ ಎ.ಇ.ಇ. ಚಂದ್ರಶೇಖರ್ ನೀಡಿದ ಸ್ಪಷ್ಟನೆಗೂ ಸದಸ್ಯರು ಸಮಾಧಾನಿತರಾಗಲಿಲ್ಲ. 
    ಈ ಮಧ್ಯೆ ಪಾಲಿಕೆಯ ಎ.ಇ.ಇ. ವಸಂತ್ ಪ್ರತಿಕ್ರಿಯಿಸುತ್ತ ಬುಗುಡನಹಳ್ಳಿಯಿಂದ, ಪಿ.ಎನ್.ಪಾಳ್ಯದಿಂದ ಶುದ್ಧ ನೀರು ಪೂರೈಕೆಯಾಗುತ್ತಿದೆ. ಈ ಘಟಕಗಳಲ್ಲಿ ವೈಜ್ಞಾನಿಕವಾಗಿ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಸದಸ್ಯರು ಯಾವುದೇ ಹೊತ್ತಿನಲ್ಲೂ ಇದನ್ನು ಪರಿಶೀಲಿಸಬಹುದು ಎಂದು ಸ್ಪಷ್ಟಪಡಿಸಿದರೂ, ಸದಸ್ಯರು ಒಪ್ಪಲಿಲ್ಲ. ಅಲ್ಲಿ ಶುದ್ಧವಿದ್ದರೂ, ನಮ್ಮ ನಲ್ಲಿಗಳಲ್ಲೇಕೆ ಹೊಂಡು ನೀರು ಬರುತ್ತಿದೆ ಎಂದು ಪ್ರಶ್ನಿಸುತ್ತ ಹೋದರು. 
ಪೈಪ್ ಒಡೆದು ಪ್ರಮಾದ
      ಈ ಹಂತದಲ್ಲಿ ಸೈಯದ್ ನಯಾಜ್  ಮಧ್ಯೆಪ್ರವೇಶಿಸಿ, ಬುಗುಡನಹಳ್ಳಿ ಮತ್ತು ಪಿ.ಎನ್.ಪಾಳ್ಯದಿಂದ ಶುದ್ಧವಾದ ನೀರೇ ಪೂರೈಕೆಯಾಗುತ್ತಿದೆ. ಆದರೆ ನಡುವೆ ಪೈಪ್ ಒಡೆದು ಇಂತಹ ಸಮಸ್ಯೆಗಳು ತಲೆಯೆತ್ತುತ್ತಿವೆ. ಇತ್ತೀಚೆಗೆ ಅಗ್ರಹಾರದ ಬಳಿ 10 ಇಂಚಿನ ಪೈಪ್ ಒಡೆದು, ಅದರಲ್ಲಿ ಸುಮಾರು 500 ಕೆ.ಜಿ. ಪ್ರಮಾಣದಷ್ಟು ಕೆಂಪು ಮಣ್ಣು ತುಂಬಿಕೊಂಡುಬಿಟ್ಟಿತು.
     ಆ ನೀರೇ ಇಲ್ಲಿನ ಸಂಪ್‍ಗೆ ಬಂದ ಪರಿಣಾಮ, ವಾರ್ಡ್‍ಗಳ ನಲ್ಲಿಗಳಿಗೂ ಸರಬರಾಜಾಯಿತು ಎಂಬ ಸಂಗತಿಯನ್ನು ಸಭೆಯ ಗಮನಕ್ಕೆ ತಂದಾಗ ಇಡೀ ಸಭೆ ಶಾಂತವಾಯಿತು. ಮತ್ತೆ ಮಾತು ಮುಂದುವರೆಸಿದ ಸೈಯದ್ ನಯಾಜ್, ಮೊದಲಿಗೆ ಸಂತೆಪೇಟೆ, ಟೌನ್ ಹಾಲ್, ವಿದ್ಯಾನಗರದಲ್ಲಿರುವ ನೀರಿನ ಸಂಪ್‍ಗಳನ್ನು ಶುಚಿಗೊಳಿಸಬೇಕು. ಆಗ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ಸಲಹೆಯಿತ್ತರು. ಇದಕ್ಕೆ ಸದಸ್ಯರುಗಳೂ ಸಹಮತ ಸೂಚಿಸಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link