ಬೆಂಗಳೂರು
ರಾಜ್ಯದ ಹಣಕಾಸು ಪರಿಸ್ಥಿತಿ ತೀರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.ಇನ್ನು ಮುಂದೆ ಅನಗತ್ಯವಾಗಿ ಹೆಲಿಕಾಪ್ಟರ್ ಇಲ್ಲವೇ ವಿಶೇಷ ವಿಮಾನ ಬಳಕೆ ಮಾಡದೆ ಸಾಧ್ಯವಾದಷ್ಟು ರಸ್ತೆ ಮಾರ್ಗದಲ್ಲಿ ಸಂಚರಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿರುವ ಆರ್ಥಿಕ ಹೊರೆಯನ್ನು ತಡೆಗಟ್ಟಲು ತೀರ್ಮಾನಿಸಿದ್ದಾರೆ.
ರಾಜ್ಯದಲ್ಲಿ ಕಳೆದ ತಿಂಗಳು ಉಂಟಾದ ಭೀಕರ ಪ್ರವಾಹದಿಂದಾಗಿ 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನೆರೆ ಉಂಟಾಗಿದ್ದರೆ, ಇನ್ನು ಕೆಲವು ಕಡೆ ಸಕಾಲಕ್ಕೆ ಸರಿಯಾಗಿ ಮಳೆಯಾಗದೆ ಬರಗಾಲ ಆವರಿಸಿದೆ. ಈಗಲೂ ಅನೇಕ ಕಡೆ ಕುಡಿಯಲು ನೀರು, ಜಾನುವಾರುಗಳಿಗೆ ಮೇವು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಮುಖ್ಯಸ್ಥರಾಗಿರುವ ತಾವು ಇತರರಿಗೆ ಮಾದರಿಯಾಗಲು ಚಿಂತನೆ ನಡೆಸಿದ್ದಾರೆ.
100 ಕಿ.ಮೀ ವ್ಯಾಪ್ತಿಯಲ್ಲಿರುವ ಪ್ರದೇಶಗಳಿಗೆ ತೆರಳುವಾಗ ಹೆಲಿಕಾಪ್ಟರ್ ಬಳಕೆ ಮಾಡದೆ ರಸ್ತೆ ಮಾರ್ಗದ ಮೂಲಕ ಸಂಚರಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ದೂರದ ಪ್ರದೇಶಗಳಿಗೆ ಮಾತ್ರ ಹೆಲಿಕಾಪ್ಟರ್ ಬಳಸಬೇಕು, ಎಷ್ಟು ಸಾಧ್ಯವೋ ಅಷ್ಟು ರಸ್ತೆಯಲ್ಲೇ ಸಂಚರಿಸಲು ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಇದೇ ರೀತಿ ದೆಹಲಿಗೆ ವಿಶೇಷ ವಿಮಾನ ಬಳಸದೆ ಸಾಮಾನ್ಯ ವಿಮಾನದಲ್ಲೇ ತೆರಳುವ ನಿರ್ಧಾರವನ್ನು ಸಿಎಂ ತೆಗೆದುಕೊಂಡಿದ್ದು, ವಿಶೇಷ ವಿಮಾನಕ್ಕೆ ಭಾರೀ ವೆಚ್ಚ ತಗುಲುತ್ತಿರುವುದನ್ನು ತಪ್ಪಿಸಲು ಈ ತೀರ್ಮಾನಕ್ಕೆ ಬಂದಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿಎಂ ರಾಜ್ಯದ ಹಣಕಾಸು ಪರಿಸ್ಥಿತಿ ತೀರ ಹದಗೆಟ್ಟಿದೆ ಎಂಬುದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








