ರಾಜಕಾರಣ ಜನರಿಗಾಗಿ ಬದಲಾವಣೆಯಾಗಬೇಕು : ಬಸವರಾಜ ಬೊಮ್ಮಾಯಿ

ಬೆಂಗಳೂರು

     ರಾಜಕಾರಣ ಎಂದರೆ ಆಡಳಿತ ಪಕ್ಷ, ವಿರೋಧ ಪಕ್ಷವೆಂಬಂತಾಗಿದೆ. ರಾಜಕಾರಣ ಜನರಿಗಾಗಿ ಎಂಬುದು ಹಿನ್ನೆಲೆಗೆ ಸರಿದಿದ್ದು ರಾಜಕಾರಣ ಜನರಿಗಾಗಿ ಎಂಬ ಬದಲಾವಣೆ ಆಗಬೇಕಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರತಿಪಾದಿಸಿದರು.

    ನಗರದ ಗಾಂಧಿಭವನದಲ್ಲಿ ಶನಿವಾರ ಭಾರತ ಯಾತ್ರಾ ಕೇಂದ್ರ ಮತ್ತು ಬಯಲು ಪರಿಷತ್ ಆಯೋಜಿಸಿದ್ದ ರಾಜ್ಯಸಭೆಯ ಉಪಸಭಾಪತಿ ಹರಿವಂಶರಾಯ್ ಮತ್ತು ರವಿದತ್ತ ವಾಜಪೇಯಿ ಬರೆದಿರುವ ಚಂದ್ರಶೇಖರ್ ‘ದಿ ಲಾಸ್ಟ್ ಐಕಾನ್ ಆಫ್ ದಿ ಐಡಿಯಾ ಲಾಜಿಕಲ್ ಪಾಲಿಟಿಕ್ಸ್’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ರಾಜಕಾರಣ ಜನರಿಗಾಗಿ ಬದಲಾವಣೆಯಾಗಬೇಕು ಇದರಿಂದ ಜನ ಭಾಗವಹಿಸುವಿಕೆಯ ರಾಜಕಾರಣ ದೇಶದಲ್ಲಿ ಆರಂಭವಾಗಬೇಕಾಗಿದೆ ಎಂದರು.

    ಜನ ಭಾಗವಹಿಸುವಿಕೆಯ ರಾಜಕಾರಣ ದೇಶದಲ್ಲಿ ಆರಂಭವಾದಾಗ ಮಾತ್ರ ಪ್ರಜಾಪ್ರಭುತ್ವದ ಘನತೆ ಉಳಿಯಲು ಸಾಧ್ಯ ಎಂದ ಅವರು ದೇಶದ ರಾಜಕೀಯ ಬಿಕ್ಕಟ್ಟು ಸಮಸ್ಯೆಗಳಿಗೆ ಮಾಜಿ ಪ್ರಧಾನಿ ಚಂದ್ರಶೇಖರ್‌ರವರ ರಾಜಕೀಯ ಸಿದ್ಧಾಂತ, ನೀತಿ, ಅವರು ನಂಬಿದ ಮೌಲ್ಯಗಳು ಪರಿಹಾರ ತೋರುವ ಮಾರ್ಗದರ್ಶಿಗಳು ಎಂದು ಹೇಳಿದರು.

     ಚಂದ್ರಶೇಖರ್ ಅವರು ಎಂದೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ, ಜನರಿಗಾಗಿ ರಾಜಕಾರಣ ಮಾಡಿದವರು. ಅವರ ನೀತಿ, ಸಿದ್ಧಾಂತಗಳು ವರ್ತಮಾನ, ಭವಿಷ್ಯದ ರಾಜಕೀಯ ಬಿಕ್ಕಟ್ಟುಗಳಿಗೆ ಪರಿಹಾರ ತೋರುವ ಮಾರ್ಗದರ್ಶಿಯಾಗಿದೆ ಅಧಿಕಾರದ ಹಿಂದೆ ಹೋಗದೇ ಹಾತೊರೆಯದೇ ದೇಶದ ರಾಜಕಾರಣದಲ್ಲಿ ಚಂದ್ರಶೇಖರ್ ದೊಡ್ಡ ಶಕ್ತಿಯಾಗಿದ್ದರು ಎಂದರು.

ವಿಶಿಷ್ಠ ನಾಯಕ

      ಮಾಜಿ ಪ್ರಧಾನಿ ಚಂದ್ರಶೇಖರ್ ಅವರು ತಾವು ನಂಬಿದ ಸಿದ್ಧಾಂತ-ನೀತಿಗಳನ್ನು ಅನುಷ್ಠಾನಗೊಳಿಸಲು ಅವರಿಗೆ ದೊಡ್ಡ ಸಂಘಟನೆಯ ಬಲ ಸಿಗಲಿಲ್ಲ. ಸಂಘಟನೆಯ ಬಲ ಸಿಗದೆ ಇದ್ದದ್ದು ಅವರ ಸಿದ್ಧಾಂತಗಳು, ನೀತಿಗಳು ದೇಶದಲ್ಲಿ ಹಿನ್ನೆಲೆಗೆ ಸರಿಯುವಂತಹ ಪರಿಸ್ಥಿತಿಗೆ ಕಾರಣವಾದವು ಯಾವುದೇ ಕ್ರಾಂತಿಯ ಯಶಸ್ಸು ಆ ಕ್ರಾಂತಿ ಆದ ನಂತರ ಅದನ್ನು ನಿಭಾಯಿಸುವ ನಾಯಕತ್ವದ ಮೇಲೆ ನಿಂತಿರುತ್ತದೆ. ದೇಶಕ್ಕೆ ಸುಧಾರಿತ ನಾಯಕತ್ವದ ಅಗತ್ಯವಿದೆ ಎಂದು ಅವರು ಹೇಳಿದರು.

    ಯಂಗ್‌ಟರ್ಕ್ ಎಂದರೆ ಚಂದ್ರಶೇಖರ್ ಎಂಬುದು ದೇಶದಲ್ಲಿ ಜನಜನಿತವಾಗಿತ್ತು. ಚಂದ್ರಶೇಖರ್ ಅವರ ಭಾರತಯಾತ್ರಾ ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿತ್ತು. ಅವರನ್ನು ಎಂದೂ ನೋಡದವರು ಭೇಟಿಯಾಗದವರು ಚಂದ್ರಶೇಖರ್ ಅವರ ಕ್ರಾಂತಿಕಾರಿಕ ಭಾಷಣಗಳಿಂದ ಸ್ಫೂರ್ತಿ ಪಡೆದು ತುರ್ತು ಪರಿಸ್ಥಿತಿಯಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಸಿದ್ದರು. ಚಂದ್ರಶೇಖರ್ ಅವರು ದೇಶದ ಮಹಾನ್ ವಿಶಿಷ್ಠ ನಾಯಕ ಎಂದು ಅವರು ಬಣ್ಣಿಸಿದರು.

     ಇದೇ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ್ ಕುರಿತ ಪುಸ್ತಕದ ಕರ್ತೃ ರಾಜ್ಯಸಭೆಯ ಉಪಸಭಾಪತಿ ಹರಿವಂಶರಾಯ್ ಚಂದ್ರಶೇಖರ್ ಅವರು ಜನಪ್ರಿಯ ರಾಜಕಾರಣ ಮಾಡಿದವರಲ್ಲ. ರಾಜಕಾರಣ ಎಂದರೆ ಶೇ. ೧೦ರಷ್ಟು, ಪಕ್ಷ ರಾಜಕೀಯ ಶೇ. ೯೦ರಷ್ಟು ಮಾನವೀಯ ಸಂಬಂಧ ಎಂಬ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿದ್ದವರು ಎಂದರು.

ಯುವಕರಿಗೆ ಪ್ರೇರಣೆ

     ದೇಶದ ಇಂದಿನ ಯುವ ತಲೆಮಾರಿಗೆ ಚಂದ್ರಶೇಖರ್ ಅವರ ಬದುಕು ಜೀವನ ಪ್ರೇರಣೆ ನೀಡುವಂತದ್ದು, ಅತ್ಯಂತ ಹಿಂದುಳಿದ ಪ್ರದೇಶದಿಂದ ಬಂದು ಸ್ವಂತ ಸಾಮರ್ಥ್ಯದ ಮೇಲೆ ಬೆಳೆದು ದೇಶದ ಅತ್ಯುನ್ನತ ಸ್ಥಾನ ಏರಿದ ಚಂದ್ರಶೇಖರ್ ಅವರ ಸಾಧನೆ ಯುವಜನಾಂಗಕ್ಕೆ ಪ್ರೇರಣೆಯಾಗುವಂತದ್ದು ಎಂದು ಅವರು ಹೇಳಿದರು.

     ಚಂದ್ರಶೇಖರ್ ಅವರು ಪ್ರಜಾ ಸೋಷಿಯಲಿಸ್ಟ್ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಇಂದಿರಾಗಾಂಧಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಕಾಂಗ್ರೆಸ್‌ನ್ನೇ ಸಮಾಜವಾದಿ ಮಾಡುತ್ತೇನೆ ಎಂದಿದ್ದರು. ಆಗ ಇಂದಿರಾಗಾಂಧಿಯವರು ಅದು ಆಗದಿದ್ದರೆ ಎಂದಾಗ ಕಾಂಗ್ರೆಸ್‌ನ್ನೇ ಇಬ್ಭಾಗ ಮಾಡುತ್ತೇನೆ ಎಂದು ಹೇಳಿ ದಿಟ್ಟತನ ಮೆರೆದಿದ್ದ ಮಹಾನ್ ನಾಯಕ ಎಂದು ಬಣ್ಣಿಸಿದರು.

     ಈ ಸಂದರ್ಭದಲ್ಲಿ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್, ಭಾರತಯಾತ್ರಾ ಕೇಂದ್ರದ ಅಧ್ಯಕ್ಷ ಸುಧೀಂದ್ರ ಬದೂರಿಯಾ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಡಿ.ವೈ ಪಾಟೀಲ್, ರಾಜ್ಯದ ಭಾರತಯಾತ್ರಾ ಕೇಂದ್ರದ ಅಧ್ಯಕ್ಷ ಡಿ.ಎಲ್ ಶಂಕರ್, ಬಯಲು ಪರಿಷತ್‌ನ ಅಧ್ಯಕ್ಷ ವೈ.ಎಸ್.ವಿ ದತ್ತ ಸೇರಿದಂತೆ ಚಂದ್ರಶೇಖರ್ ಅವರ ಭಾರತಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿವಿಧ ರಾಜ್ಯಗಳ ಹಲವು ಪಾದಯಾತ್ರಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link