ಹರಕೆ ತೀರಿಸಿ, ಗುಪ್ತವಾಗಿ ಭವಿಷ್ಯ ಕೇಳಿದ ಬಿ.ಎಸ್.ವೈ

ತಿಪಟೂರು
     ರಾಮೇಶ್ವರಕ್ಕೆ ಹೋದರೂ  ಶನೇಶ್ವರನ ಕಾಟ ತಪ್ಪಲಿಲ್ಲವೆಂಬಂತೆ ತಾಲ್ಲೂಕಿನ ಹೊನ್ನವಳ್ಳಿಯ ಗ್ರಾಮದೇವತೆ ಹೊನ್ನಾಂಬಿಕೆಯ ಸನ್ನಿಧಿಗೆ ಹರಕೆ ತೀರಿಸಲು ಬಂದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧಿಕ್ಕಾರ ಕೂಗಿದ ಘಟನೆ ನಡೆದಿದೆ.
 
    ತಾಲ್ಲೂಕಿನ ಹೊನ್ನವಳ್ಳಿಯ ಹೊನ್ನಾಂಬ ದೇವಸ್ಥಾನಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ತಕ್ಷಣ ತನ್ನ ಆಪ್ತ ಸಂತೋಷ್ ಅವರ ಮಾತಿಗೆ ಕಟ್ಟು ಬಿದ್ದು ಇಂದು ಈ ದೇವಸ್ಥಾನಕ್ಕೆ ಬಂದಿದ್ದು, ತಾಯಿಯವರ ಆಶೀರ್ವಾದ ಪಡೆದು ರಾಜ್ಯವು ಸುಭಿಕ್ಷವಾಗಿರಲಿ ಎಂದು ತಾಯಿಯರಲ್ಲಿ ಬೇಡಿದ್ದೇನೆ.  ರಾಜ್ಯದಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದು ಜನರು ಸಂತೃಪ್ತಿಯಿಂದ ಜೀವನ ನಡೆಸಲು ಸಾಧ್ಯವಾಗಿದೆ.
    ತಾಯಿಯವರ ಆಶೀರ್ವಾದದಿಂದ ನಾವಿಂದು ಮುಖ್ಯಮಂತ್ರಿಯಾಗಿದ್ದು, ತಾಯಿಯವರಿಗೆ ವಿಶೇಷ ಪೂಜೆ ಸಲ್ಲಿಸಲು ಈ ಗ್ರಾಮಕ್ಕೆ ಆಗಮಿಸಿದ್ದೆನೆ. ಹೊನ್ನವಳ್ಳಿ ಭಾಗದ ಬಹುದಿನದ ಬೇಡಿಕೆಯಾದ ಸಮುದಾಯ ಭವನಕ್ಕೆ ರಾಜ್ಯ ಸರ್ಕಾರದ ವತಿಯಿಂದ ಸುಮಾರು ಐವತ್ತು ಲಕ್ಷ ರೂಪಾಯಿಗಳನ್ನು ನೀಡಲು ಮಾನ್ಯ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ರಾಜ್ಯ ಸರ್ಕಾರವು ಸಂಪೂರ್ಣವಾಗಿ ತನ್ನ ಆಡಳಿತಾವಧಿಯನ್ನು ಪೂರ್ಣಗೊಳಿಸಲಿದೆ ಎಂದು ತಿಳಿಸಿದರು. 
     ಶಾಸಕ ಬಿಸಿ ನಾಗೇಶ್ ಮಾತನಾಡಿ, ಈ ಭಾಗದಲ್ಲಿ ಎತ್ತಿನಹೊಳೆ ಯೋಜನೆಯಲ್ಲಿ ಸುಮಾರು ನಲವತ್ತೇಳು ಕಿಲೊ ಮೀಟರ್ ಹಾದು ಹೋಗಿದ್ದರೂ ಯಾವುದೇ ನೀರನ್ನು ನೀಡದೆ ಈ ಹಿಂದಿನ ಸರ್ಕಾರಗಳು ತಾಲ್ಲೂಕಿಗೆ ಅನ್ಯಾಯ ಮಾಡಿವೆ.  ರಾಜ್ಯ ಸರ್ಕಾರವು ಮುಂದಿನ ಅಧಿವೇಶನದಲ್ಲಿ ತಾಲ್ಲೂಕಿಗೆ ಇಂತಿಷ್ಟು ಪ್ರಮಾಣದ ನೀರನ್ನು ಬಿಡಲು ತೀರ್ಮಾನಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹಾಗಾಗಿ ಈ ಭಾಗದ ಬಹುದಿನದ ಬೇಡಿಕೆಯಾದ ಎತ್ತಿನಹೊಳೆ ಯೋಜನೆಯಲ್ಲಿ ಖಂಡಿತ  ತಾಲ್ಲೂಕಿಗೆ ನೀರು ದೊರಕುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ತಿಳಿಸಿದರು.
    ಕಾರ್ಯಕ್ರಮದ ನಂತರ ನೇರವಾಗಿ ಶಾಸಕ ಬಿ.ಸಿ.ನಾಗೇಶ್ ಅವರ ಮನೆಗೆ ತೆರಳಿದ ಮುಖ್ಯಮಂತ್ರಿಯನ್ನು  ಕಾರ್ಯಕರ್ತರು  ಆರತಿ ಮೂಲಕ ಸ್ವಾಗತಿಸಿದರು. ಭೋಜನದ ನಂತರ ಪತ್ರಿಕಾ ಗೋಷ್ಠಿಗೆ ಎಲ್ಲ ತಯಾರು ಮಾಡಿಕೊಂಡಿದ್ದರೂ ಕೂಡ,  ನೇಕಾರ ಮನವಿಯನ್ನು ಮಾತ್ರ ಸ್ವೀಕರಿಸಿ, ಪತ್ರಿಕಾಗೋಷ್ಠಿಯನ್ನು ನಡೆಸದೆ ನೇರವಾಗಿ ಯಡಿಯೂರಿನ ಶ್ರೀಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ  ತೆರಳಿದರು. 
 
    ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್‍ಗೌಡ, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ತಹಸೀಲ್ದಾರ್ ಬಿ ಆರತಿ ಮೊದಲಾದವರು ಹಾಜರಿದ್ದರು.
    ದೇವಾಲಯದ ಬಾಗಿಲು ಮುಚ್ಚಿಸಿ ಅಧಿಕಾರಿಗಳು ಮತ್ತು ಶಾಸಕರುಗಳನ್ನು ಹೊರಗೆ ಕಳುಹಿಸಿ ಸುಮಾರು 48 ನಿಮಿಷಗಳು ದೂತರಾಯನ ಅಪ್ಪಣೆ ಕೇಳಿದರು. ಆದರೆ ಅಪ್ಪಣೆಯನ್ನು ಯಾರಿಗೂ ತಿಳಿಸದಂತೆ ದೂತರಾಯನು ಅಕ್ಕಿಕಾಳುಗಳನ್ನು ಅಲ್ಲಿದ್ದವರ ಮೇಲೆ ಹಾಕಿತು ಎಂದು ತಿಳಿದುಬಂದಿದೆ.
ಅಹವಾಲು ಸ್ವೀಕರಿಸದಿದ್ದಕ್ಕೆ ಮುಖ್ಯಮಂತ್ರಿ ಮೇಲೆ  ರೈತರ ಮುನಿಸು: 
    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸೂಕ್ತ ಪರಿಹಾರ ಧನವನ್ನು ನೀಡುತ್ತಿಲ್ಲ, ರಸ್ತೆಯ ಅಲೈನ್‍ಮೆಂಟ್ ಸರಿಯಿಲ್ಲ ಎಂದು ನಾವು ರಸ್ತೆಯನ್ನು ತಡೆದು ಅಹವಾಲನ್ನು ಕೊಡಲು ಸಿದ್ದರಿದ್ದೇವೆ. ಆದರೆ ಸ್ಥಳಕ್ಕೆ ಬಂದ ಮುಖ್ಯಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂದು ಹೇಳುವ ಮೊದಲೆ ಮುಖ ಸಿಂಡರಿಸಿಕೊಂಡು ಹೋದರು. ಆದರೆ ಇದೇ ಮುಖ್ಯಮಂತ್ರಿಗಳು ರೈತರ ಹೆಸರಿನಲ್ಲಿ ಪ್ರಮಾಣ ಮಾಡುತ್ತಾರೆ.
    ಆದರೆ ಇಲ್ಲಿ ರೈತರನ್ನು ಕಂಡರೆ ಆಗದವರಂತೆ ನೋಡಿಕೊಳ್ಳುತ್ತಾರೆ. ಮತ್ತೆ ಆರಕ್ಷಕರು ಅಹವಾಲನ್ನು ಕೊಡಲು ನಿಮಗೆ ಸಮಯಾವಕಾಶ ಕೊಡುತ್ತೇವೆಂದು ತಿಳಿಸಿದರು. ಆದರೆ ನಾವು ಹೊನ್ನವಳ್ಳಿಗೆ ಬರುವ ಮೊದಲೆ ಮುಖ್ಯಮಂತ್ರಿಗಳು ಅಲ್ಲಿಂದ ನಿರ್ಗಮಿಸಿದ್ದರು ಎಂದು ರಾಷ್ಟ್ರೀಯ ಕೃಷಿ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಸ್ವಾಮಿ ಆರೋಪಿಸಿದರು.ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ದೇವರಾಜು, ತಾಲ್ಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಮನೋಹರ್ ಮುಂತಾದವರು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link