ಮುಂಬೈ:
ಭಾರತದ ಮಾಜಿ ನಾಯಕ ಕಪಿಲ್‌ದೇವ್ ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ರಾಜೀನಾಮೆ ನೀಡಿದ್ದಾರೆ.
ಕ್ರಿಕೆಟ್ ಅಡ್ವೈಸರಿ ಕಮಿಟಿಯಲ್ಲಿದ್ದ ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರಿಗೆ ಹಿತಾಸಕ್ತಿ ಸಂಘರ್ಷ ಸಂಬಂಧಿ ನೋಟಿಸ್ ನೀಡಲಾಗಿತ್ತು. ಬಿಸಿಸಿಐ ನೈತಿಕ ಅಧಿಕಾರಿ ಡಿಕೆ ಜೈನ್ ಅವರಿಂದ ಹಿತಾಸಕ್ತಿ ಸಂಘರ್ಷ ಕುರಿತ ನೋಟಿಸ್ ಬಂದ ಕೂಡಲೇ, ಟೀಮ್ ಇಂಡಿಯಾ ಚೊಚ್ಚಲ ವಿಶ್ವಕಪ್ ಗೆದ್ದಾಗ ನಾಯಕರಾಗಿದ್ದ ಕಪಿಲ್ ದೇವ್, ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ರಾಜೀನಾಮೆ ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ (ಎಂಪಿಸಿಎ) ಜೀವಮಾನದ ಸದಸ್ಯ ಸಂಜೀವ್ ಗುಪ್ತಾ, ಎಸಿಎಯಲ್ಲಿದ್ದ ಕಪಿಲ್, ಗಾಯಕ್ವಾಡ್ ಮತ್ತು ರಂಗಸ್ವಾಮಿ ವಿರುದ್ಧ ದೂರು ನೀಡಿದ್ದರು. ಕಪಿಲ್ ದೇವ್ ಫ್ಲಡ್‌ಲೈಟ್ ಕಂಪನಿಯ ಮಾಲಕರಾಗಿದ್ದಾರೆ. ಜೊತೆಗೆ ಇಂಡಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಮತ್ತು ಕ್ರಿಕೆಟ್ ಅಡ್ವೈಸರಿ ಸಮಿತಿಯ ಸದಸ್ಯರಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.
”ವಿಶೇಷವಾಗಿ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್‌ರನ್ನು ಆಯ್ಕೆ ಮಾಡಲು ಸಿಎಸಿ ಭಾಗವಾಗಿರುವುದು ಒಂದು ಉತ್ತಮ ಅವಕಾಶವಾಗಿತ್ತು. ನಾನು ಸಿಎಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಸುಪ್ರೀಂಕೋರ್ಟ್‌ನಿಂದ ನೇಮಕವಾಗಿರುವ ಆಡಳಿತಾಧಿಕಾರಿ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ಹಾಗೂ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ಕಪಿಲ್ ದೇವ್ ಬರೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ