ಚಿಕ್ಕಬಳ್ಳಾಪುರ :
ಜಿಟಿಜಿಟಿ ಮಳೆ ಹಿನ್ನೆಲೆಯಲ್ಲಿ ಬೆಚ್ಚಗಿರಲು ಮನೆಯೊಳಗೆ ಕೆಂಡದ ಬಿಸಿ ಹಾಕಿಕೊಂಡು ಮಲಗಿದ್ದ ವೇಳೆ ಉಸಿರುಗಟ್ಟಿ ಯುವತಿ ಮೃತಪಟ್ಟು, ಮೂವರು ಅಸ್ವಸ್ಥರಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ರಾಮಾಂಜಿನೇಯಲು ಮರಾಠಿ ಪಾಳ್ಯ ಗ್ರಾಮದ ಬಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಕಾರ್ಮಿಕನಾಗಿದ್ದ ರಾಮಾಂಜನೆಯಲು ತನ್ನ ಪತ್ನಿ ಶಾಂತಮ್ಮ ಮತ್ತು ಮಕ್ಕಳಾದ ಅರ್ಚನಾ, ಅಂಕಿತಾರೊಂದಿಗೆ ಇಟ್ಟಿಗೆ ಪ್ಯಾಕ್ಟರಿಯವರು ನೀಡಿದ್ದ ಚಿಕ್ಕ ಕೊಠಡಿಯೊಂದರಲ್ಲಿ ವಾಸವಿದ್ದರು
ಶುಕ್ರವಾರ ತೀವ್ರ ಚಳಿಯದ್ದ ಕಾರಣ ರಾತ್ರಿ ಬಾಗಿಲು ಮುಚ್ಚಿ ಕೆಂಡದ ಬಿಸಿ ಹಾಕಿಕೊಂಡು ಮಲಗಿದ್ದರು. ಆದರೆ, ಕುಟುಂಬದ ನಾಲ್ವರು ಉಸಿರುಗಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ನಾಲ್ವರನ್ನೂ ಸ್ಥಳೀಯರು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಯುವತಿ ಅರ್ಚನಾ (16) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಬೆಂಕಿ ಇದ್ದ ಕಾರಣ ಆಮ್ಲಜನಕದ ಕೊರತೆಯಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡಿರುವ ಶಂಕೆ ವ್ಯಕ್ತಗೊಂಡಿದೆ. ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.
ಸ್ಥಳಕ್ಕೆ ಮಂಚೇನಹಳ್ಳಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
