ಬಳ್ಳಾರಿ
ಹಿಂಸೆ ಮತ್ತು ಸೇಡಿನ ಮಾರ್ಗಗಳಿಗಿಂತ ಆಹಿಂಸಾ ಮಾರ್ಗ ಅತ್ಯಂತ ಪರಿಣಾಮಕಾರಿಯಾದುದು ಎಂದು ವಿಶ್ವಕ್ಕೆ ಸಾರಿದವರು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ಉಪವಿಭಾಗಾಧಿಕಾರಿಗಳಾದ ರಮೇಶ ಕೋನರೆಡ್ಡಿ ಬಣ್ಣಿಸಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಕೊಡುಗೆ ದೊಡ್ಡದಿದ್ದು, ಅವರು ನಡೆಸಿದ ಆಹಿಂಸಾ ಚಳವಳಿ ಮಾರ್ಗಗಳು ಇಂದಿಗೂ ಪ್ರಸ್ತುತ ಎಂದರು.
ಹಳ್ಳಿಗಳೇ ದೇಶದ ಜೀವಾಳವೆನಿಸಿಕೊಂಡಿದ್ದ ಗಾಂಧೀಜಿಯವರು ಹಳ್ಳಿಗಳು ಮೊದಲು ಅಭಿವೃದ್ಧಿಯಾಗಬೇಕೆಂದು ಕನಸು ಕಂಡಿದ್ದರು. ಅಭಿವೃದ್ಧಿ ಎಂದರೇ ಕೇವಲ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲ;ಅಲ್ಲಿನ ಶೈಕ್ಷಣಿಕವಾಗಿ,ಆರೋಗ್ಯ ಮತ್ತು ಅರ್ಥಿಕವಾಗಿ ಜನರ ಜೀವನಮಟ್ಟ ಸುಧಾರಣೆಯಾದಾಗ ಮಾತ್ರ ಹಳ್ಳಿ ಅಭಿವೃದ್ಧಿಯಾದಂತೆ ಎಂದಿದ್ದರು ಎಂದು ಅವರು ವಿವರಿಸಿದರು.
ದೇಶದಲ್ಲಿ ಈ ಹಿಂದೆ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿತ್ತು; ಆದರೇ ಪ್ರಸ್ತುತ ದಿನಗಳಲ್ಲಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಕಾಳಜಿ ಕಡಿಮೆಯಾಗಿದೆ ಎಂದು ಹೇಳಿದ ಅವರು ಜನರು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ನ್ನು ತ್ಯಜಿಸಿ ಪರಿಸರ ಸ್ನೇಹಿ ಬಟ್ಟೆ ಚೀಲಗಳನ್ನು ಬಳಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಮತ್ತು ಇತರರಿಗೂ ಪ್ರೇರೆಪಿಸಬೇಕು ಎಂದರು.
ಮಹಾತ್ಮ ಗಾಂಧೀಜಿ ಅವರು ಪ್ರತಿಪಾದಿಸಿದ ಜೀವನಮೌಲ್ಯ, ಸತ್ಯ,ಆಹಿಂಸೆ ಹಾಗೂ ಆತ್ಮಬಲದ ಕುರಿತು ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ಅವರು ವಿವರಿಸಿದರು.ಮಹಾತ್ಮ ಗಾಂಧೀಜಿ ಅವರು ಪ್ರತಿಪಾದಿಸಿದ ಮೌಲ್ಯಗಳು ಹಾಗೂ ತತ್ವಾದರ್ಶಗಳ ಕುರಿತ ಕಿರುಹೊತ್ತಿಗೆಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.ಮಹಾತ್ಮ ಗಾಂಧೀಜಿ ಅವರ ಜಯಂತಿ ನಿಮಿತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ “ಮಹಾತ್ಮ ಗಾಂಧೀಜಿ 150”ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸ್ಥಾನಿಕ ತಹಸೀಲ್ದಾರ್ ವಿಶ್ವಜೀತ್ ಮೆಹತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬಿ.ಕೆ.ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶಬಾಬು, ಸಹಕಾರ ಸಂಘಗಳ ಉಪನಿಬಂಧಕಿ ಡಾ.ಸುನೀತಾ ಸಿದ್ರಾಮ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಶುಭಾ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೀಶ ಶಿವಾಚಾರ್ಯ, ಅಬಕಾರಿ ಇಲಾಖೆಯ ವಿನೋದ ಡಾಂಗೆ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಮಿತ್ ಬಿದರಿ, ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ನೌಕರರು,ಸಾರ್ವಜನಿಕರು ಇದ್ದರು.
ಕಪಗಲ್ಲುವಿನಲ್ಲಿ ಸ್ವಚ್ಛತಾ ಶ್ರಮದಾನ: ಮಹಾತ್ಮ ಗಾಂಧೀಜಿ ಜಯಂತಿ ನಿಮಿತ್ತ ಜಿಲ್ಲಾಡಳಿತ,ಜಿಪಂ ಹಾಗೂ ಕಪಗಲ್ಲು ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು.ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಚಾಲನೆ ನೀಡಿದರು. ಜಿಪಂ ಸಿಇಒ ಕೆ.ನಿತೀಶ್, ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ, ತಾಪಂ ಅಧ್ಯಕ್ಷೆ ಬಿ.ರಮೀಜಾ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಗ್ರಾಪಂ ಅಧ್ಯಕ್ಷ ರಾಮಣ್ಣ ಮತ್ತಿತರರು ಸಾಥ್ ನೀಡಿದರು.
ಜಿಪಂ ಸಿಇಒ ಕೆ.ನಿತೀಶ್ ಅವರು ಮಾತನಾಡಿ, ಜಯಂತಿ ನಿಮಿತ್ತ ಬಳ್ಳಾರಿ ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂಗಳಲ್ಲಿ ಈ ಬಾರಿ ಪ್ಲಾಸ್ಟಿಕ್ ತ್ಯಜಿಸುವುದರ ಮುಖಾಂತರ ಪ್ಲಾಸ್ಟಿಕ್ ಮುಕ್ತ ಗ್ರಾಪಂಗಳನ್ನು ಮಾಡುವ ನಿಟ್ಟಿನಲ್ಲಿ ಕ್ರಮವಹಿಸ ಲಾಗುವುದು. ಈ ಕಾರ್ಯಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಮಾತನಾಡಿ, ಗಾಂಧೀಜಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಹಳ್ಳಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.ಗ್ರಾಪಂ ಸದಸ್ಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು,ಶಿಕ್ಷಕರು, ತಾಪಂ ಸದಸ್ಯರು, ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ