ದಾವಣಗೆರೆ
ಗಾಂಧೀಜಿ ಅವರು ಶಾಂತಿ, ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪುಣ್ಯಾತ್ಮರಾಗಿದ್ದಾರೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಸ್ಮರಿಸಿದರು.
ಇಲ್ಲಿನ ಪಾಲಿಕೆ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂಟಪದಲ್ಲಿ ಬುಧವಾರ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆಯನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ಯ ಮತ್ತು ಅಹಿಂಸಾ ಮಾರ್ಗದಿಂದ ದೇಶಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಪುರುಷ ಮಹಾತ್ಮ ಗಾಂಧಿಯವರ ಜಯಂತಿಯನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಸಡಗರದಿಂದ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಅತ್ಯಂತ ಧೀಮಂತ ನಾಯಕರಾದ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನಾಚರಣೆಯೂ ಇಂದೇ ಆಗಿದ್ದು, ಇವರು ಅತ್ಯಂತ ಸರಳ ಮತ್ತು ಸ್ವಾಭಿಮಾನಿ ನಾಯಕರಾಗಿದ್ದರು. ಉತ್ತಮ ಪ್ರಧಾನಿಯಾಗಿದ್ದರು. ದೇಶದಲ್ಲಿ ಆಹಾರ ಕೊರತೆ ಎದುರಾದಾಗ ದೇಶವಾಸಿಗಳೆಲ್ಲ ಸೋಮವಾರ ಉಪವಾಸ ಮಾಡುವ ಮೂಲಕ ಆಹಾರ ಕೊರತೆ ನೀಗಿಸಬೇಕೆಂದು ಕರೆ ನೀಡಿ, ಆಹಾರ ಧಾನ್ಯದ ಕೊರತೆ ನೀಗಿಸುವಲ್ಲಿ ಯಶಸ್ವಿಯಾಗಿದ್ದರು. ಇವರ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದು ಕರೆ ನೀಡಿದರು.
ಧರ್ಮ ಗ್ರಂಥಗಳ ಪಠಣೆ:
ಸಿದ್ದಗಂಗಾ ಶಾಲೆಯ ಅನುಪಮಾ ಕೆ.ಪಾಟಿಲ್ ಮತ್ತು ಅನುಷಾ ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಪಠಿಸಿದರು. ಬಾಪೂಜಿ ಶಾಲೆಯ ಮಹಮದ್ ಸಾದಿಕ್ ಹಾಗೂ ಸಿದ್ದಗಂಗಾ ಪ್ರೌಢಶಾಲೆಯ ಮಸ್ಕಾನ್.ಎ ಇವರು ಕುರಾನ್ ಪಠಣೆ ಮಾಡಿದರು. ಹಾಗೂ ಸಿದ್ದಗಂಗಾ ಶಾಲೆಯ ಅನುಷಾ ಗ್ರೇಸಿ ಬೈಬಲ್ ಪಠಿಸಿದರು.
ಸಿದ್ದಗಂಗಾ ಪ್ರೌಢಶಾಲೆ ಹಾಗೂ ಈಶ್ವರಮ್ಮ ಶಾಲೆಯ ವಿದ್ಯಾರ್ಥಿಗಳು ಸಾಮೂಹಿಕ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಚರಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧೀಜಿಯವರ ಅಪರೂಪದ ಛಾಯಾಚಿತ್ರ ಪ್ರದರ್ಶನ ಹಾಗೂ ಬೊಳುವಾರು ಮಹಮದ್ ಕುಂಞ ರಚಿಸಿರುವ ‘ಪಾಪು ಬಾಪು’ ಕಿರುಪುಸ್ತಕ ಬಿಡುಗಡೆಗೊಳಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ