ಮಕ್ಕಳ ಹಕ್ಕು ರಕ್ಷಣೆಗೆ ಸಾಮೂಹಿಕ ಹೊಣೆಗಾರಿಕೆ ಅವಶ್ಯ

ದಾವಣಗೆರೆ :

       ಸಾಮೂಹಿಕ ಹೊಣೆಗಾರಿಕೆಯಿಂದ ಮಾತ್ರ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಲು ಸಾಧ್ಯವಾಗಲಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರಭಾರ ಅಧ್ಯಕ್ಷ ಮರಿಸ್ವಾಮಿ.ವೈ ತಿಳಿಸಿದರು.

        ನಗರದ ಎಂಸಿಸಿ ‘ಬಿ’ ಬ್ಲಾಕ್‍ನಲ್ಲಿರುವ ಬಾಲ ನ್ಯಾಯ ಮಂಡಳಿ ಕಚೇರಿಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಾಮಾಜಿಕ ಪರಿವರ್ತನಾ ಜನಾಂದೋಲನ, ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ, ಪೀಪಲ್ ಸಂಸ್ಥೆ, ಡಾನ್ ಬಾಸ್ಕೋ, ಸ್ಪೂರ್ತಿ ಸಂಸ್ಥೆ ಹಾಗೂ ಚೈಲ್ಡ್‍ಲೈನ್ ಇವುಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ಸ್ಥಿತಿಗತಿಗಳ ಕುರಿತು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

          ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಸೇರಿ, ಸಾಮೂಹಿಕ ಹೊಣೆಗಾರಿಕೆಯಿಂದ ಕೆಲಸ ಮಾಡಿದಲ್ಲಿ ಮಾತ್ರ ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯವಾಗಲಿದೆ. ಹೀಗಾಗಿ ಎಲ್ಲರೂ ಮಕ್ಕಳ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ತಮ್ಮ, ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ಹೇಳಿದರು.

           ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಹಲವು ಕಾಯ್ದೆಗಳಿವೆ. ಅವುಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ 2009, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ(ಪೋಕ್ಸೊ) ಹಾಗೂ ಬಾಲ ನ್ಯಾಯ ಮಂಡಳಿ ಕಾಯ್ದೆಗಳು ಪ್ರಮುಖವಾಗಿವೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾ ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈಲ್ಡ್‍ಲೈನ್, ಮಕ್ಕಳ ಕಲ್ಯಾಣ ಸಮಿತಿ, ಸರ್ಕಾರೇತರ ಸಂಘಸಂಸ್ಥೆಗಳು ಸೇರಿದಂತೆ ಅನೇಕ ಸಂಸ್ಥೆಗಳಿದ್ದರೂ ಮಕ್ಕಳ ಹಕ್ಕುಗಳ ವಿಚಾರದಲ್ಲಿ ಮಾಡುವ ಕೆಲಸ ಅಪಾರವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

             ಕಳೆದ ಸಾಲಿನಲ್ಲಿ ನಮ್ಮ ಆಯೋಗ ನಡೆಸಿದ ಆಂದೋಲನದಲ್ಲಿ 1,71,000 ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ, ಶಾಲಗಳತ್ತ ಕರೆತರಲು ಸೂಚಿಸಿತ್ತು. ಅದರಂತೆ, ಬಾಲ್ಯ ವಿವಾಹ ತಡೆ-ಶಾಲೆ ಕಡೆ ಆಂದೋಲನ ಸಹ ನಡೆಸಲಾಗಿದೆ ಎಂದ ಅವರು, ಮಕ್ಕಳಲ್ಲಿನ ಅಪೌಷ್ಟಿಕತೆ ಅಭಿವೃದ್ಧಿಗೆ ಮಾರಕವಾಗಿದ್ದು, ರಾಜ್ಯದಲ್ಲಿ ಸುಮಾರು ಸಾಧಾರಾಣ, ಅತಿ ಸಾಧಾರಣ ಮತ್ತು ತೀವ್ರತರ ಅಪೌಷ್ಟಿಕತೆ ಸೇರಿದಂತೆ ಶೇ.50 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಂದು ವರದಿ ಹೇಳುತ್ತದೆ. ನ್ಯಾಯಮೂರ್ತಿ ಎಂ.ಕೆ.ಪಾಟಿಲ್ ಸಮಿತಿಯು ಈ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಲು 87 ಶಿಫಾರಸು ಮಾಡಿದೆ ಎಂದರು.

            ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 40,006 ಬಾಲಕರು, 38360 ಬಾಲಕಿಯರು ಸಾಮಾನ್ಯ ಅಪೌಷ್ಟಿಕತೆ, 5800 ಬಾಲಕರು ಮತ್ತು 5819 ಬಾಲಕಿಯರು ಸಾಧಾರಣ ಅಪೌಷ್ಟಿಕತೆಯಿಂದ ಹಾಗೂ 328 ಮಕ್ಕಳು ತೀವ್ರತರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ತೀವ್ರತರ ಮತ್ತು ಸಾಧಾರಣ ಅಪೌಷ್ಟಿಕೆಯನ್ನು ಹೋಗಲಾಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

              ಈ ವೇಳೆ ಮಾತನಾಡಿದ ಅಧ್ಯಕ್ಷ ಮರಿಸ್ವಾಮಿ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ, ಮಹಿಳೆಯರಿಗೆ ಸರ್ಕಾರ ಎಷ್ಟು ಒಳ್ಳೆ ಕಾರ್ಯಕ್ರಮ ನೀಡಿದೆ. ಆದರೆ ಈ ಕಾರ್ಯಕ್ರಮದ ಪ್ರಚಾರವಾಗಿಲ್ಲ. ಜನರಿಗೆ ಇದರ ಅರಿವಿಲ್ಲ. ಆದ್ದರಿಂದ ಈ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು. ಸಮಿತಿಯ ಶಿಫಾರಿಸಿನ ಮೇರೆಗೆ ಅಂಗನವಾಡಿಗಳಲ್ಲಿ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಎನ್‍ಆರ್‍ಸಿ, ಎನ್‍ಎಂಆರ್‍ಸಿ ಬಗ್ಗೆ ಗೋಡೆಬರಹ, ಭಿತ್ತಿಪತ್ರ ಸೇರಿದಂತೆ ಜನರಿಗೆ ತಿಳಿಯುವಂತೆ ಮಾಡಬೇಕೆಂದು ಸೂಚಿಸಿದರು.
ಶಾಲೆಗಳಲ್ಲಿ ಮಕ್ಕಳ ಸುರಕ್ಷಣಾ ನೀತಿ ಕ್ರಮಗಳ ನೋಡುವುದಾದರೆ, ಖಾಸಗಿ ಶಾಲೆಗಳಿಂದ ಅನೇಕ ದೂರುಗಳು ಬಂದಿವೆ. ಕರ್ನಾಟಕ ಮಕ್ಕಳ ರಕ್ಷಣಾ ನೀತಿಯ ಪ್ರಕಾರ ಮಕ್ಕಳ ರಕ್ಷಣೆಗೆ ಕೆಲವು ವ್ಯವಸ್ಥೆಗಳು ಇರಲೇ ಬೇಕು.

              ಪ್ರತಿ ಶಾಲೆಯಲ್ಲಿ ಸಹಾಯವಾಣಿ 1098 ಸಂಖ್ಯೆ ಇರಬೇಕು. ಮಕ್ಕಳ ಸಮಿತಿ ಇರಬೇಕು, ದೂರು ಪೆಟ್ಟಿಗೆ ಇಡಬೇಕು. ಅದನ್ನು ತೆರೆಯಲು ಒಂದು ಸಮಿತಿ ಇರಬೇಕು. ಸಿಸಿ ಕ್ಯಾಮೇರಾ, ಮಕ್ಕಳ ರಕ್ಷಣೆ ಕ್ಲಬ್ ಇರಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆ ಶಿಕ್ಷಕರಲ್ಲಿ ಬದ್ಧತೆ ಕೊರತೆಯಿಂದ ಮಿತಿಯಿಲ್ಲದೆ ನಾಯಿಕೊಡೆಗಳಂತೆ ಖಾಸಗಿ ಶಾಲೆಗಳ ಪ್ರಾರಂಭವಾಗುತ್ತಿದೆ. ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ. ಈ ನಿಟ್ಟಿನಲ್ಲಿ ಈ ನೀತಿಗಳನ್ನು ಉಲ್ಲಂಘಿಸುವ ಶಾಲೆಗಳ ಮಾನ್ಯತೆ ರದ್ದು ಪಡಿಸುವಂತಹ ಕಠಿಣ ಕ್ರಮಗಳಾಗಬೇಕು ಎಂದರು.

            ಚೈಲ್ಡ್ ಹೆಲ್ಪ್‍ಲೈನ್‍ನ ಕೊಟ್ರೇಶ್ ಮಾತನಾಡಿ, ಪ್ರತಿ ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಚೈಲ್ಡ್ ಹೆಲ್ಪ್‍ಲೈನ್ 1098 ನ್ನು ಬರೆಸಬೇಕು. ಎಲ್ಲಾ ಶಾಲಾ ವಾಹನಗಳ ಮೇಲೆ ಬರೆಸಬೇಕು ಹಾಗೂ ಹಾಸ್ಟೆಲ್‍ಗಳ ಆವರಣದಲ್ಲಿ ಚೈಲ್ಡ್ ಹೆಲ್ಪ್‍ಲೈನ್ ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಮಾಹಿತಿ ಹಾಕಬೇಕೆಂದರು.

              ಪೀಪಲ್ ಸಂಸ್ಥೆಯ ಮಂಜುನಾಥ್ ಮಾತನಾಡಿ, ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಇರುವ ಮೀನಾ ತಂಡದಂತೆ ಪ್ರತಿ ಶಾಲೆಯಲ್ಲಿ ವಿಶಾಖಾ ಹೆಣ್ಣು ಮಕ್ಕಳ ತಂಡಗಳು ಕ್ರಿಯಾಶೀಲವಾಗಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಮಾತನಾಡಿ, 2012 ರಿಂದ 2017 ರವರೆಗೆ ಜಿಲ್ಲೆಯಲ್ಲಿ 2053 ಪೊಕ್ಸೊ ಪ್ರಕರಣ ದಾಖಲಾಗಿದ್ದು, 5 ಕ್ಕೆ ಶಿಕ್ಷೆಯಾಗಿದೆ. 15 ಮಕ್ಕಳಿಗೆ ರೂ. 5 ಸಾವಿರ ಪರಿಹಾರ ನೀಡಲಾಗಿದೆ. ಹಾಗೂ ಪ್ರಸಕ್ತ ಸಾಲಿನ ಏಪ್ರಿಲ್ ಮಾಹೆಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 55 ಬಾಲ್ಯ ವಿವಾಹ ತಡೆಗಟ್ಟಿದ್ದು, ಒಂದು ಪ್ರಕರಣ ಎಫ್‍ಐಆರ್ ಹಂತದಲ್ಲಿದೆ ಎಂದರು.

               ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ್ ಎಂ ಕುಂಬಾರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇವಣ್ಣ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದೇವೇಂದ್ರಪ್ಪ, ಮಕ್ಕಳ ಕಲ್ಯಾಣ ಸಮಿತಿಯ ರಾಮಾನಾಯಕ್, ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ್ ಪಾಟಿಲ್, ವಿವಿಧ ಎನ್‍ಜಿಓ ಗಳ ಮುಖ್ಯಸ್ಥರು, ಸದಸ್ಯರು, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಹಾಜರಿದದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap