ಕುಣಿಗಲ್:
ಉಜ್ಜನಿ ಮತ್ತು ನಿಡಸಾಲೆ ಗ್ರಾಮ ಪಂಚಾಯ್ತಿಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು ತಾಲ್ಲೂಕು ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು.
ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜಿನಿ ಮತ್ತು ನಿಡಸಾಲೆ ಗ್ರಾಮ ಪಂಚಾಯಿತಿಯಲ್ಲಿ ಬಾರಿ ಭ್ರಷ್ಟಾಚಾರ ನಡೆದಿದೆ ಎಂದು ಹಲವು ಬಾರಿ ದೂರಿದರೂ ಯಾವುದೇ ಕ್ರಮ ಜರುಗಿಸಿಲ್ಲಾ ಎಂದು ಆರೋಪಿಸಿದ ಪ್ರತಿಭಟನಾಕಾರರು ಉಜ್ಜನಿ ಗ್ರಾಮದಲ್ಲಿ ಶಿವಕುಮಾರ್ ಎಂಬ ವ್ಯಕ್ತಿ ಎಸ್.ಕೆ.ಟ್ರೇಡರ್ಸ್ ಹೆಸರಿನಲ್ಲಿ ನಕಲಿ ಬಿಲ್‍ಗಳನ್ನು ಸೃಷ್ಟಿಸಿ, ಟಿನ್ ನಂಬರ್ ತೆಗೆದುಕೊಂಡು ಗ್ರಾ.ಪಂ. ಮತ್ತು ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಸಿ.ಸಿ.ರಸ್ತೆ, ಚರಂಡಿ ಹಾಗೂ ಚೆಕ್ ಡ್ಯಾಂ ಕಾಮಗಾರಿಗಳಿಗೆ ಶೇ.15 ರಷ್ಟು ಕಮಿಷನ್ ಪಡೆದು ನಕಲಿ ಬಿಲ್‍ಗಳನ್ನು ಕೊಡುತ್ತಿದ್ದಾರೆ.
ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮದ ಮುಖಂಡ ಉಜ್ಜನಿ ಎಸ್.ರಾಮಲಿಂಗಯ್ಯ ಅವರ ನೇತೃತ್ವದಲ್ಲಿ ಗ್ರಾಮಸ್ಥರು ತಾಲ್ಲೂಕು ಕಚೇರಿ ಎದುರು ಅಮರಣಾಂತ ಉಪವಾಸ ಕೈಗೊಂಡಿದ್ದರು.
ಮುಖಂಡ ಎಸ್.ರಾಮಲಿಂಗಯ್ಯ ಮಾತನಾಡಿ, ಉಜ್ಜಿನಿ, ನಿಡಸಾಲೆ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಒಂದೇ ಕಾಮಗಾರಿಗೆ ಎರಡೆರೆಡು ಬಿಲ್ ಮಾಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿಕೊಂಡು ಕೋಟ್ಯಂತರ ರೂ. ಭ್ರಷ್ಟಾಚಾರ ಮಾಡಿದ್ದು ಸಾರ್ವಜನಿಕರ ಕಂದಾಯದ ಹಣವನ್ನ ಹಗಲು ದರೋಡೆ ಮಾಡುತ್ತಿದ್ದರೂ ಕ್ಯಾರೇ ಅನ್ನೋರ್ ಇಲ್ಲಾ ಎಂದು ಕಿಡಿಕಾರಿದರು.
2017-18 ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಎಸ್ಸಿ,ಎಸ್‍ಟಿ ಸ್ಕೀಂನಲ್ಲಿ ಇಲಿಗರಪಾಳ್ಯ ಹಾಗೂ ರಾಜಪ್ಪನದೊಡ್ಡಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣದಲ್ಲಿ ಬಿಲ್ ಆಗಿದೆ, ಆದರೆ ಇದೇ ಕಾಮಗಾರಿಗೆ 2018-19 ರಲ್ಲಿ ನಿಡಸಾಲೆ ಪಂಚಾಯ್ತಿಯಿಂದ ಎನ್.ಆರ್.ಐ.ಜಿ ಯೋಜನೆಯಡಿನಲ್ಲಿ 60:40 ಅನುಪಾತದಲ್ಲಿ ಕಾಮಗಾರಿ ಮಾಡಬೇಕು. ಆದರೆ 90:10 ಅನುಪಾತದಲ್ಲಿ ಕಾಮಗಾರಿ ಮಾಡಿ ಬಿಲ್ ಡ್ರಾ ಮಾಡಲಾಗಿದೆ ಮತ್ತು ನಿಡಸಾಲೆ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರೇಡ್-1 ಕಾರ್ಯದರ್ಶಿ ಇರಬೇಕು.
ಆದರೆ ಗ್ರೇಡ್-2 ಕಾರ್ಯದರ್ಶಿಯನ್ನು ಹಾಕಿರುವುದು ಏಕೆ ಎಂದು ಪ್ರಶ್ನಿಸಿದ ಅವರು ಎಂ.ಜಿ.ಎನ್.ಆರ್.ಇ.ಜಿ.ಎ ಯೋಜನೆಡಿಯಲ್ಲಿ ಷೆಡ್‍ಗಳ ನಿರ್ಮಾಣಕ್ಕೆ ಅನುಮೋದನೆ ನೀಡುವಂತಿಲ್ಲ. ಆದರೆ ಇದನ್ನು ಉಲ್ಲಂಘಿಸಿದ ಅಧಿಕಾರಿಗಳು ಷೆಡ್‍ಗಳ ನಿರ್ಮಾಣ ಮಾಡಿ ಗುಣಮಟ್ಟದ ಕಾಮಗಾರಿ ಮಾಡದೇ ಬೇಕಾಬಿಟ್ಟಿ ಮಾಡಿ ಬಿಲ್ ಮಾಡಲಾಗಿದೆ.
ಈ ಸಂಬಂಧ ನಿಡಸಾಲೆ ಗ್ರಾ.ಪಂ. ಪ್ರಭಾರ ಪಿಡಿಒ ಅವರನ್ನು ಅಮಾನತ್ತಿನಲ್ಲಿ ಇಟ್ಟು ಸಮಗ್ರ ತನಿಖೆಯನ್ನು ಮಾಡಬೇಕು, ಇಲ್ಲವಾದಲ್ಲಿ ಅವರು ಸಾಕ್ಷಿ ನಾಶಪಡಿಸುವ ಸಾಧ್ಯತೆಗಳು ಇದೆ ಎಂದು ಗಂಭೀರ ಆರೋಪ ಮಾಡಿದರು. ನಕಲಿ ಬಿಲ್ ಸೃಷ್ಟಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಠ ಉಂಟು ಮಾಡಿರುವ ಎಸ್.ಕೆ.ಟ್ರೇಡರ್ಸ್ ಮಾಲೀಕರಿಂದ ಸರ್ಕಾರದ ಹಣ ಲೂಟಿ ಮಾಡಿರುವುದನ್ನು ಸಂಪೂರ್ಣವಾಗಿ ವಾಪಸ್ ಕಟ್ಟಿಸಬೇಕೆಂದು ಒತ್ತಾಯಿಸಿದರು.
ಎಸ್.ಕೆ. ಟ್ರೇಡರ್ಸ್ ಎಲ್ಲಿದೆ, ಮಾಲೀಕರು ಯಾರು, ಪಂಚಾಯ್ತಿಯಿಂದ ಲೈಸೆನ್ಸ್ ಪಡೆದಿದ್ದಾರೆಯೇ ಎಂಬುದನ್ನ ಸಾಬೀತು ಮಾಡಬೇಕು. ಕೇವಲ ಪಂಚಾಯ್ತಿಗಳಿಗೆ ಸಿಮೆಂಟ್, ಕಬ್ಬಿಣ ಸರಬರಾಜು ಮಾಡಲಾಗಿದೆ ಎಂದು ನಕಲಿ ಬಿಲ್‍ಗಳನ್ನು ಸೃಷ್ಟಿ ಮಾಡಲು ಈ ಅಂಗಡಿ ಸ್ಥಾಪನೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ